ಬೈಲಹೊಂಗಲ: ತಾಲ್ಲೂಕಿನ ಬೆಳವಡಿಯಲ್ಲಿ ಫೆ.28, 29ರಂದು ಉತ್ಸವ ನಡೆಯಲಿದ್ದು, ಇಡೀ ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಲ್ಲಮ್ಮನ ವೃತ್ತ ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿದೆ. ‘ಬರ’ದ ಬವಣೆ ಮಧ್ಯೆಯೂ ಸಂಭ್ರಮದಿಂದ ಉತ್ಸವ ಆಚರಿಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ.
ಇಲ್ಲಿನ ಉಡಿಕೇರಿ ರಸ್ತೆಬದಿಯ ಎರಡು ಎಕರೆ ಜಮೀನಿನಲ್ಲಿ ಭವ್ಯವಾದ ವೇದಿಕೆ ಹಾಕಲಾಗಿದ್ದು, ರಾಣಿ ಮಲ್ಲಮ್ಮ ಮತ್ತು ರಾಜಾ ಈಶಪ್ರಭು ಹೆಸರಿನಲ್ಲಿ ಮುಖ್ಯದ್ವಾರ ನಿರ್ಮಿಸಲಾಗಿದೆ. 7 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಉತ್ಸವಕ್ಕೆ ಶುಭಕೋರಿ ಮಲ್ಲಮ್ಮನ ವೃತ್ತದಲ್ಲಿ ಬ್ಯಾನರ್, ಕಟೌಟ್‌ಗಳನ್ನು ಅಳವಡಿಸಲಾಗಿದೆ. ಇಲ್ಲಿನ ಬಸ್ ತಂಗುದಾಣ ಮತ್ತು ಮಲ್ಲಮ್ಮನ ವೃತ್ತ ಶುಚಿಗೊಳಿಸಿ, ಬಣ್ಣ ಬಳಿಯಲಾಗಿದೆ.
ಫೆ.28ರಂದು ನಡೆಯಲಿರುವ ಜಾನಪದ ಕಲಾಮೇಳದಲ್ಲಿ ಬೇರೆ ಜಿಲ್ಲೆಗಳ 23 ಮತ್ತು ಸ್ಥಳೀಯಮಟ್ಟದ 15 ಕಲಾ ತಂಡಗಳು ಭಾಗವಹಿಸಿ, ವಿವಿಧ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಲಿವೆ. ಎರಡು ದಿನಗಳ ಉತ್ಸವದಲ್ಲಿ ನೂರಾರು ಕಲಾವಿದರು ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ನೀಡಲಿದ್ದಾರೆ. 29ರಂದು ನಡೆಯಲಿರುವ ರಾಷ್ಟ್ರಮಟ್ಟದ ಪುರುಷರು ಮತ್ತು ಮಹಿಳೆಯರ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿ ಜಟ್ಟಿಪ್ರೇಮಿಗಳನ್ನು ಸೆಳೆಯಲಿದೆ.
ಮಹಿಳಾ ಸೈನ್ಯ ಕಟ್ಟಿದ ವೀರವನಿತೆ: ಪ್ರಥಮ ಮಹಿಳಾ ಸೈನ್ಯ ಕಟ್ಟಿ, ಕರುನಾಡಿಗಾಗಿ ಹೋರಾಡಿದ ಶ್ರೇಯ ವೀರರಾಣಿ ಬೆಳವಡಿ ಮಲ್ಲಮ್ಮನಿಗೆ ಸಲ್ಲುತ್ತದೆ. ಮಲ್ಲಮ್ಮನ ಇತಿಹಾಸವನ್ನು ಯುವಪೀಳಿಗೆಗೆ ಸಾರಲು ಪ್ರತಿವರ್ಷ ಸರ್ಕಾರದ ವತಿಯಿಂದ ಸಂಭ್ರಮದಿಂದ ಉತ್ಸವ ಆಚರಿಸಲಾಗುತ್ತಿದೆ. ಈ ಹಿಂದೆ ಹೂಲಿಯ ರಾಜಗುರು ಅಜ್ಜನವರು, ಅರವಳ್ಳಿಯ ಗೌಡರು, ಆರ್.ಬಿ.ಪಾಟೀಲ, ರೊಟ್ಟಯ್ಯನವರ, ಕರಿಕಟ್ಟಿ, ಸುಬೇದಾರ, ಕಾಡೇಶನವರ ಮತ್ತಿತರ ಮನೆತನದವರು ಉತ್ಸವಕ್ಕೆ ಚಾಲನೆ ನೀಡಿದ್ದರು.
‘ಪ್ರತಿವರ್ಷ ಉತ್ಸವ ಆಚರಣೆಗೆ ಜಾಗ ಹುಡುಕುವಂತಾಗಿದೆ. ಹಾಗಾಗಿ ಉತ್ಸವಕ್ಕೆ ಶಾಶ್ವತವಾದ ಜಾಗ ಬೇಕಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಇದೇ ಉತ್ಸವದಲ್ಲಿ ಶಾಶ್ವತ ಜಾಗ ಕೊಡುವ ಸಂಬಂಧ ಘೋಷಿಸಬೇಕು’ ಎಂಬುದು ಮಲ್ಲಮ್ಮನ ಅಭಿಮಾನಿಗಳ ಒತ್ತಾಯ.
ಬೆಳವಡಿ ಉತ್ಸವಕ್ಕೆ ಸರ್ಕಾರ ₹1 ಕೋಟಿ ಅನುದಾನ ನೀಡಿದೆ. ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.–ಪ್ರಭಾವತಿ ಫಕೀರಪುರ ಉಪವಿಭಾಗಾಧಿಕಾರಿ ಬೈಲಹೊಂಗಲ
ಬೆಳವಡಿ ಮಲ್ಲಮ್ಮ ನಾಡಿಗೆ ನೀಡಿದ ಮಹತ್ತರ ಕೊಡುಗೆಯನ್ನು ಯುವಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು. ಕಾಟಾಚಾರಕ್ಕೆ ಎಂಬಂತೆ ಉತ್ಸವ ನಡೆಸಬಾರದು–ಡಾ.ಆರ್.ಬಿ.ಪಾಟೀಲ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.