ಬೆಳಗಾವಿಯ ಮಹಾಂತೇಶ ನಗರದಲ್ಲಿ ನಿರ್ಮಿಸಿದ ವಸತಿ ನಿಲಯದ ಕಟ್ಟಡ
ಪ್ರಜಾವಾಣಿ ಚಿತ್ರ
ಬೆಳಗಾವಿ: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಗೂ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬೆಮುಲ್) ಸಹಯೋಗದಲ್ಲಿ ಇಲ್ಲಿನ ಮಹಾಂತೇಶ ನಗರದ ಒಕ್ಕೂಟದ ಆವರಣದಲ್ಲಿ ನಿರ್ಮಿಸಿದ ವಸತಿ ನಿಲಯದಲ್ಲಿ ಪ್ರವೇಶ ಪಡೆಯಲು ಹಾಲು ಉತ್ಪಾದಕರ ಮಕ್ಕಳಿಂದ ನಿರಾಸಕ್ತಿ ವ್ಯಕ್ತವಾಗಿದೆ.
ಹಾಗಾಗಿ ಈ ಕಟ್ಟಡವನ್ನು ಎರಡು ವರ್ಷಗಳ ಅವಧಿಗೆ ಬಾಡಿಗೆಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅಲ್ಲಿ ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಸಂಖ್ಯೆ 5 ಅನ್ನು ನಡೆಸಲಾಗುತ್ತಿದೆ.
ಒಂದು ವೇಳೆ 2025–26ನೇ ಸಾಲಿನಲ್ಲಿ ಹಾಲು ಉತ್ಪಾದಕರ ಮಕ್ಕಳು ಹಾಸ್ಟೆಲ್‌ನಲ್ಲಿ ಪ್ರವೇಶ ಪಡೆಯಲು ಇಚ್ಛಿಸಿದರೂ ಅವಕಾಶ ಇಲ್ಲದಂತಾಗಿದೆ.
₹4.50 ಕೋಟಿ ವೆಚ್ಚದ ಕಾಮಗಾರಿ: ಹಾಲು ಉತ್ಪಾದಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲೆಂದು ಬೆಳಗಾವಿಯಲ್ಲಿ ವಸತಿ ನಿಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ₹4.50 ಕೋಟಿ ವೆಚ್ಚದ ಕಾಮಗಾರಿಗೆ 2021ರ ಅಕ್ಟೋಬರ್ 29ರಂದು ಅಂದಿನ ಕೆಎಂಎಫ್ ಅಧ್ಯಕ್ಷ(ಹಾಲಿ ಬೆಮುಲ್ ಅಧ್ಯಕ್ಷ) ಬಾಲಚಂದ್ರ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದ್ದರು. ಇದರಲ್ಲಿ ತಲಾ 50 ವಿದ್ಯಾರ್ಥಿಗಳು, 50 ವಿದ್ಯಾರ್ಥಿನಿಯರು ಸೇರಿದಂತೆ 100 ಮಂದಿಗೆ ಅವಕಾಶ ಕಲ್ಪಿಸಲು ಯೋಜಿಸಲಾಗಿತ್ತು.
ನಾಲ್ಕೇ ಅರ್ಜಿ ಬಂದಿವೆ: ‘ಸುಸಜ್ಜಿತವಾಗಿ ನಿರ್ಮಿಸಿದ ಈ ಕಟ್ಟಡ ಕಾಮಗಾರಿ 2024ರಲ್ಲಿ ಮುಗಿದಿದೆ. ಇಲ್ಲಿ ಪ್ರವೇಶ ಕಲ್ಪಿಸಲು ಹಾಲು ಉತ್ಪಾದಕರ ಪದವಿ ಮತ್ತು ಡಿಪ್ಲೊಮಾ ಓದುತ್ತಿರುವ ಮಕ್ಕಳಿಂದ ಅರ್ಜಿ ಆಹ್ವಾನಿಸಿದ್ದೆವು. ಆದರೆ, ಕೇವಲ ನಾಲ್ಕೇ ಅರ್ಜಿ ಬಂದವು. ಕಾಲೇಜಿನಿಂದ ಕಟ್ಟಡ ದೂರವಿರುವುದು ಮತ್ತಿತರ ಕಾರಣಕ್ಕೆ ಹಾಸ್ಟೆಲ್‌ನಲ್ಲಿ ಪ್ರವೇಶಕ್ಕೆ ಹಿಂದೇಟು ಹಾಕಿದರು. ಹಾಗಾಗಿ ಕಟ್ಟಡ ಹಾಳಾಗದಿರಲೆಂದು ಸಮಾಜ ಕಲ್ಯಾಣ ಇಲಾಖೆಗೆ ಬಾಡಿಗೆಗೆ ಕೊಟ್ಟಿದ್ದೇವೆ’ ಎಂದು ಬೆಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ವಿ.ಎನ್. ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಳಗಾವಿ ಜಿಲ್ಲೆಯಲ್ಲಿ 609 ಸಹಕಾರಿ ಹಾಲು ಉತ್ಪಾಕರಸಂಘ ಗಳಿವೆ. ಇವುಗಳಿಗೆ ಸುತ್ತೋಲೆ ಹೊರಡಿಸಿ, 31 ಸಾವಿರಕ್ಕೂಅಧಿಕ ಹಾಲು ಉತ್ಪಾದಕರಿಗೆ ವಸತಿ ನಿಲಯ ನಿರ್ಮಾಣದ ಬಗ್ಗೆ ತಿಳಿಸಿದ್ದೆವು. ಜತೆಗೆ ಕರಪತ್ರ ಹಂಚಿದ್ದೆವು. ಎಲ್ಲ ರೀತಿಯಿಂದಲೂ ಪ್ರಚಾರ ಕೈಗೊಂಡಿದ್ದೆವು. ಆದರೆ, ಸ್ಪಂದನೆ ಸಿಗಲಿಲ್ಲ’ ಎಂದು ಹೇಳಿದರು.
‘ಮತ್ತೆ ಪ್ರಯತ್ನ’
‘2024ರ ಡಿಸೆಂಬರ್‌ನಿಂದ 2026ರ ಡಿಸೆಂಬರ್‌ವರೆಗಿನ ಅವಧಿಗೆ ಹಾಸ್ಟೆಲ್ ಅನ್ನು ಸಮಾಜ ಕಲ್ಯಾಣ ಇಲಾಖೆಗೆ ಬಾಡಿಗೆಗೆ ಕೊಟ್ಟಿದ್ದೇವೆ. ಈ ಅವಧಿ ಮುಗಿದ ನಂತರ ಕಟ್ಟಡವನ್ನು ಮತ್ತೆ ನಮಗೆ ಹಸ್ತಾಂತರಿಸುತ್ತಾರೆ. ಆಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಿ, ಹಾಲು ಉತ್ಪಾದಕರ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಪ್ರಯತ್ನಿಸುತ್ತೇವೆ’ ಎಂದು ಶ್ರೀಕಾಂತ ವಿ.ಎನ್. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಹಾಲು ಉತ್ಪಾದಕರ ಮಕ್ಕಳು ಪದವಿ ಓದುವುದು ಕಡಿಮೆ. ಹಾಗಾಗಿ ಬೆಳಗಾವಿ ಹಾಸ್ಟೆಲ್‌ನಲ್ಲಿ ಮುಂದಿನ ವರ್ಷಗಳಲ್ಲಿ ಪಿಯು ಓದುವ ನಮ್ಮ ಮಕ್ಕಳಿಗೂ ಅವಕಾಶ ಕೊಡಬೇಕು.ಬಸವರಾಜ ಮಾಯಣ್ಣವರ, ಹಾಲು ಉತ್ಪಾದಕ, ಮುಗಳಿಹಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.