ADVERTISEMENT

ನಿಸರ್ಗದ ಕೊರಳಿನ ಮುತ್ತಿನ ಹಾರ

ಭೀಮಗಡ ಪ್ರಕೃತಿ ಶಿಬಿರ ಸಾರ್ವಜನಿಕರ ವೀಕ್ಷಣೆಗೆ ಮುಕ್ತ

ಪ್ರಸನ್ನ ಕುಲಕರ್ಣಿ
Published 11 ಫೆಬ್ರುವರಿ 2021, 19:30 IST
Last Updated 11 ಫೆಬ್ರುವರಿ 2021, 19:30 IST
ಖಾನಾಪುರ ತಾಲ್ಲೂಕು ಹೆಮ್ಮಡಗಾದಲ್ಲಿರುವ ಭೀಮಗಡ ಪ್ರಕೃತಿ ಶಿಬಿರ
ಖಾನಾಪುರ ತಾಲ್ಲೂಕು ಹೆಮ್ಮಡಗಾದಲ್ಲಿರುವ ಭೀಮಗಡ ಪ್ರಕೃತಿ ಶಿಬಿರ   

ಖಾನಾಪುರ (ಬೆಳಗಾವಿ): ಪಶ್ಚಿಮ ಬೆಟ್ಟಗಳ ಸಾಲಿನ ದಟ್ಟ ಅರಣ್ಯ ಹೊಂದಿರುವ ಮತ್ತು ಅಪರೂಪದ ಜೀವಿಗಳಿಗೆ ಆಶ್ರಯ ನೀಡಿರುವ 'ಭೀಮಗಡ ವನ್ಯಧಾಮ'ದ ವೀಕ್ಷಣೆ ಮತ್ತು ಚಾರಣಕ್ಕಾಗಿ ಅರಣ್ಯ ಇಲಾಖೆಯಿಂದ ತಾಲ್ಲೂಕಿನ ಹೆಮ್ಮಡಗಾ ಬಳಿ ನಿರ್ಮಿಸಿರುವ ‘ಭೀಮಗಡ ಪ್ರಕೃತಿ ಶಿಬಿರ’ವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.

ನಿರ್ಮಿಸಿ ಬಹಳ ದಿನಗಳಾಗಿದ್ದರೂ ಕಾರಣಾಂತರಗಳಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿರಲಿಲ್ಲ. ಈಗ ಚಾರಣಪ್ರಿಯರು ಮತ್ತು ಪರಿಸರಪ್ರೇಮಿಗಳು ಭೀಮಗಡ ವನ್ಯಧಾಮ ಪ್ರವೇಶಿಸಿ ಅರಣ್ಯದ ಸೌಂದರ್ಯ ಮತ್ತು ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ವಿನಾಶದ ಅಂಚಿನಲ್ಲಿರುವ ಸಸ್ಯ ಹಾಗೂ ಪ್ರಾಣಿ ಸಂಪತ್ತಿನ ರಕ್ಷಣೆಯ ಮಹತ್ವ ಸಾರಿ, ಪ್ರಾತ್ಯಕ್ಷಿಕೆ ಮೂಲಕ ವಿವರಿಸಿ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಭೀಮಗಡ ಪ್ರಕೃತಿ ಶಿಬಿರ ಸ್ಥಾಪಿಸಿದೆ. ಪ್ರವಾಸಿಗರಿಗೆ ಊಟ, ವಸತಿ, ಅರಣ್ಯ ಚಾರಣ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಅರಣ್ಯ ಇಲಾಖೆಯಿಂದಲೆ ಮಾಡಲಾಗುತ್ತದೆ. ಅರಣ್ಯ ವೀಕ್ಷಣೆಗೆ, ಗೈಡ್‌ಗಳಿಗೆ, ಊಟ ಮತ್ತು ಉಪಾಹಾರಕ್ಕೆ ಮತ್ತು ತಂಗಲು ಟೆಂಟ್‌ಗಳಿಗೆ ತಲಾ ಇಂತಿಷ್ಟು ಶುಲ್ಕ ನಿಗದಿಪಡಿಸಲಾಗಿದೆ.

ADVERTISEMENT

ಶಿಬಿರದಿಂದ 20 ಕಿ.ಮೀ. ವ್ಯಾಪಿಸಿರುವ ಅರಣ್ಯ ಪ್ರದೇಶದಲ್ಲಿ ಕೃಷ್ಣಾಪುರ ಗುಹೆಗಳು, ತಳೇವಾಡಿಯ ತೊಗಲುಬಾವಲಿಗಳು, ಭೀಮಗಡ ಕೋಟೆ, ಮಹದಾಯಿ ನದಿ, ವಜ್ರಾ ಜಲಪಾತಗಳನ್ನು ವೀಕ್ಷಿಸಬಹುದು. ಈ ಭಾಗದಲ್ಲಿ ಹರಿಯುವ ಮಹದಾಯಿ ನದಿ, ಭಂಡೂರಾ ನಾಲಾ, ಪಣಸೂರಾ ನಾಲಾಗಳು ಸೇರಿದಂತೆ ಅಸಂಖ್ಯಾತ ಜಲಪಾತಗಳು ಮತ್ತು ಹಳ್ಳಕೊಳ್ಳಗಳನ್ನು ನೋಡಬಹುದು. ಮಾರ್ಗಮಧ್ಯದಲ್ಲಿ ವಿವಿಧ ಪ್ರಾಣಿಗಳು, ಅಸಂಖ್ಯಾತ ಪಕ್ಷಿಗಳು ಕಾಣ ಸಿಗುತ್ತವೆ.

ಒಮ್ಮೆಗೆ 24 ಪ್ರವಾಸಿಗರು ತಂಗುವ ವ್ಯವಸ್ಥೆ ಇದೆ. ಅರಣ್ಯದಲ್ಲಿ ಚಾರಣಕ್ಕಾಗಿ ಮಹಿಳೆಯರಿಗೆ 3.5. ಕಿ.ಮೀ. ಹಾಗೂ ಪುರುಷರಿಗಾಗಿ 7.5 ಕಿ.ಮೀ. ಮಾರ್ಗ (ಟ್ರ್ಯಾಕ್) ನಿರ್ಮಿಸಲಾಗಿದೆ.

‘ಶಿಬಿರದಿಂದ ಬರುವ ಆದಾಯವನ್ನು ಭೀಮಗಡ ವನ್ಯಧಾಮ ವ್ಯಾಪ್ತಿಯ ಗ್ರಾಮಗಳ ಗ್ರಾಮ ಅರಣ್ಯ ಸಮಿತಿಗಳಿಗೆ ನೀಡುವ ಉದ್ದೇಶ ಇಲಾಖೆಯದಾಗಿದೆ. ಆ ಸಮಿತಿಗಳ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಮತ್ತು ವನ್ಯಧಾಮವನ್ನು ಚಾರಣ ಪ್ರಿಯರ ಆಕರ್ಷಣೆಯ ತಾಣ ಮಾಡಿ ಮಾದರಿಯಾಗಿಸಲು ಯೋಜಿಸಲಾಗಿದೆ’ ಎನ್ನುತ್ತಾರೆ ಭೀಮಗಡ ನೇಚರ್ ಕ್ಯಾಂಪ್‌ನ ಉಪ ವಲಯ ಅರಣ್ಯಾಧಿಕಾರಿ ಎಂ.ಜಿ ನಂದೆಪ್ಪಗೋಳ.

ಬೆಳಗಾವಿಯಿಂದ ಖಾನಾಪುರ–ಶಿರೋಲಿ ಮಾರ್ಗವಾಗಿ 50 ಕಿ.ಮೀ. ಹುಬ್ಬಳ್ಳಿಯಿಂದ ಕಿತ್ತೂರು, ನಂದಗಡ ಖಾನಾಪುರ, ಶಿರೋಲಿ ಮಾರ್ಗವಾಗಿ 120 ಕಿ.ಮೀ. ದೂರದ ಈ ಶಿಬಿರ ತಲುಪಲು ಉತ್ತಮ ರಸ್ತೆ ಸೌಲಭ್ಯವಿದೆ.

***

ಭೀಮಗಡ ಪ್ರಕೃತಿ ಶಿಬಿರಕ್ಕೆ ಬರಲು ಪ್ರವಾಸಿಗರು ಆನ್‌ಲೈನ್ ಮೂಲಕ ಹೆಸರು-ವಿವರ, ಭೇಟಿಯ ಉದ್ದೇಶ, ದಿನ ಮೊದಲಾದ ಮಾಹಿತಿ ನೀಡಬೇಕು. ನಿಗದಿತ ಶುಲ್ಕ ಪಾವತಿಸಬೇಕು
-ಎಂ.ವಿ ಅಮರನಾಥ್, ಡಿಎಫ್‌ಒ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.