ADVERTISEMENT

ಬಿಡಿಸಿಸಿ ಸಿಂಹಾಸನ: ‘ತಟಸ್ಥ’ರ ಒಲವೋ, ಲಿಂಗಾಯತರ ಬಲವೋ

ಮೇಲ್ನೋಟಕ್ಕೆ ಸುಲಭ, ಬೇರುಮಟ್ಟದಲ್ಲಿ ಜಟಿಲ, ಫಲಿಸುವುದೇ ‘ಜೆ’ ಕಂಪನಿ ತಂತ್ರಗಾರಿಕೆ?

ಸಂತೋಷ ಈ.ಚಿನಗುಡಿ
Published 19 ಅಕ್ಟೋಬರ್ 2025, 7:21 IST
Last Updated 19 ಅಕ್ಟೋಬರ್ 2025, 7:21 IST
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌   

ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಬಿಡಿಸಿಸಿ) ಅಧ್ಯಕ್ಷ ಪಟ್ಟ ಯಾರ ಪಾಲಾಗಲಿದೆ ಎಂಬುದು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ. ಫಲಿತಾಂಶ ಒಂದೇ ಕಡೆ ವಾಲಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಬೇರುಮಟ್ಟದಲ್ಲಿ ಸುಲಭವಾಗಿಲ್ಲ. ₹8,000 ಕೋಟಿಯ ‘ದುಬಾರಿ ಸಿಂಹಾಸನ’ ಈ ಬಾರಿ ಯಾರ ಪಾಲಾಗಲಿದೆ ಎಂಬುದು ಇನ್ನೂ ಡೋಲಾಯಮಾನ. ಚೆಂಡು ಈಗ ‘ತಟಸ್ಥರು’ ಹಾಗೂ ‘ಲಿಂಗಾಯತ’ ತಂಡಗಳ ಕಾಲಡಿ ಓಡಾಡುತ್ತಿದೆ.

16 ಸ್ಥಾನಗಳ ಪೈಕಿ 9 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ಇದರಲ್ಲಿ 6 ನಿರ್ದೇಶಕರು ಸದ್ಯದವರೆಗೂ ‘ಜೆ’ ಕಂಪನಿ (ಜಾರಕಿಹೊಳಿ + ಜೊಲ್ಲೆ) ಪೆನಲ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದ ಮೂವರು ‘ನ್ಯೂಟ್ರಲ್‌’ ಆಗಿದ್ದಾರೆ. 7 ಸ್ಥಾನಳಿಗೆ ಭಾನುವಾರ ಮತದಾನ ನಡೆಯಲಿದ್ದು, ಇವರೆಲ್ಲರೂ ‘ನ್ಯೂಟ್ರಲ್‌’ಗಳಾಗಿಯೇ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಎಲ್ಲ ತಟಸ್ಥರು ಒಂದಾದರೆ ಬಿಡಿಸಿಸಿ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳಲಿದೆ ಎಂಬುದು ಸಹಕಾರ ಧುರೀಣರ ತರ್ಕ.

‘ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷರು ಯಾರು ಎಂದು ಈಗಾಗಲೇ ನಿರ್ಧರಿಸಿ ಆಗಿದೆ. ಚೀಟಿ ನನ್ನ ಕಿಸೆದಲ್ಲಿದೆ’ ಎಂಬ ಲಕ್ಷ್ಮಣ ಸವದಿ ಅವರ ಮಾತು; ‘ಮೀಸಲಾತಿ ಇದ್ದವರೂ ‘ಜೆ’ ಕಂಪನಿ ಎಲ್ಲ ಸಾಮಾನ್ಯ ಕ್ಷೇತ್ರಗಳನ್ನೂ ಕಬಳಿಸುತ್ತಿದೆ. ಹೀಗಾದರೆ ಮುಂದೆ ನಾವೆಲ್ಲರೂ ಮೀನ ಹಿಡಿಯಲು ಹೋಗಬೇಕೇ’ ಎಂಬ ರಮೇಶ ಕತ್ತಿ ಅವರ ಗುಡುಗು. ಈ ಎರಡೂ ಮಾತುಗಳ ಮೇಲೆ ಎಲ್ಲ ಲಿಂಗಾಯತ ನಾಯಕರು ಒಂದಾಗುತ್ತಾರೆಯೇ ಎಂಬ ಸಂದೇಹದ ಹೊಗೆಯಾಡುತ್ತಿದೆ.

ADVERTISEMENT

‘ನಾವು 13 ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಲಿಂಗಾಯತರನ್ನೇ ಅಧ್ಯಕ್ಷ ಮಾಡುತ್ತೇವೆ’ ಎಂದು ಕಿಂಗ್‌ ಮೇಕರ್‌ ಬಾಲಚಂದ್ರ ಜಾರಕಿಹೊಳಿ ಪದೇಪದೇ ಹೇಳುತ್ತಲೇ ಇದ್ದಾರೆ. ಲಿಂಗಾಯತರೆಲ್ಲ ಒಂದಾದರೆ ತಮ್ಮ ಪೆನಲ್‌ನ ಬಲ ಕುಗ್ಗಬಹುದು ಎಂಬ ಉದ್ದೇಶವೂ ಇದರ ಹಿಂದಿರಬಹುದು. ಇದೇನು ಜಾತಿಯ ಅಥವಾ ಧರ್ಮದ ಚುನಾವಣೆಯಲ್ಲ. ಆದರೂ ಚುನಾವಣೆಗೂ ಮುನ್ನವೇ ಅಧ್ಯಕ್ಷ ಸ್ಥಾನ ಯಾವ ಜಾತಿಯವರಿಗೆ ಎಂದು ಘೋಷಣೆ ಮಾಡುತ್ತಿದ್ದಾರೆ ಏಕೆ ಎಂಬುದು ಹಿರಿಯರ ಪ್ರಶ್ನೆ.

ಯಾರ ಬಲ ಎಷ್ಟು?

ಅವಿರೋಧವಾಗಿ ಆಯ್ಕೆಯಾದ ಶಾಸಕ ವಿಶ್ವಾಸ ವೈದ್ಯ (ಯರಗಟ್ಟಿ), ಮಾಜಿ ಶಾಸಕ ಅರವಿಂದ ಪಾಟೀಲ (ಖಾನಾಪುರ), ರಾಹುಲ್ ಜಾರಕಿಹೊಳಿ (ಬೆಳಗಾವಿ), ಅಮರನಾಥ ಜಾರಕಿಹೊಳಿ (ಗೋಕಾಕ), ಚನ್ನರಾಜ ಹಟ್ಟಿಹೊಳಿ (ಇತರೆ– ವಿಧಾನ ಪರಿಷತ್‌ ಸದಸ್ಯ), ನೀಲಕಂಠ ಕಪ್ಪಲಗುದ್ದಿ (ಮೂಡಲಗಿ) ಈ ಆರು ಮಂದಿ ‘ಜೆ’ ಕಂಪನಿ ಜತೆಗಿದ್ದಾರೆ. 

ಶಾಸಕ ಭರಮಗೌಡ ಕಾಗೆ (ಕಾಗವಾಡ), ‌ಶಾಸಕ ಗಣೇಶ ಹುಕ್ಕೇರಿ ಚಿಕ್ಕೋಡಿ, ವಿರೂಪಾಕ್ಷಿ ಮಾಮನಿ (ಸವದತ್ತಿ) ‘ತಟಸ್ಥ’ ನಿಲುವು ತಾಳಿದ್ದಾರೆ. ಆದರೂ ಇವರೆಲ್ಲ ಒಂದಲ್ಲ ಒಂದು ರೀತಿ ‘ಕೆ’ ಕಂಪನಿ (ಸವದಿ–ಕತ್ತಿ) ಆಲಿಂಗಣದಲ್ಲಿದ್ದಾರೆ.

ಕಣದಲ್ಲಿರುವವರ ಪೈಕಿ ಹಿರಿಯ ಸಹಕಾರಿಗಳಾದ ಲಕ್ಷ್ಮಣ ಸವದಿ, ರಮೇಶ ಕತ್ತಿ ಒಮ್ಮತ ಮಾಡಿಕೊಂಡಿದ್ದಾರೆ. ಮಹಾಂತೇಶ ದೊಡ್ಡಗೌಡರ ಹಾಗೂ ಮಲ್ಲಪ್ಪ ಯಾದವಾಡ ಅವರು ಲಕ್ಷ್ಮಣ ಸವದಿ ಶಿಷ್ಯರು. ಡಾ.ವಿಶ್ವನಾಥ ಪಾಟೀಲ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಆಪ್ತ. ಉತ್ತಮ ಪಾಟೀಲ ಹಾಗೂ ರಮೇಶ ಜಾರಕಿಹೊಳಿ ಮಧ್ಯೆ ದೋಸ್ತಿ ಹಳಸಿದೆ. ಹೀಗಾಗಿ ಅವರಿಗೆ ಸವದಿ ನೆರಳೆ ‘ಉತ್ತಮ’ ಎನ್ನುವಂತಾಗಿದೆ. 

ವಿಶೇಷವರೆಂದರೆ ಇವರೆಲ್ಲರೂ ಪೆನಲ್‌ ಕೂಡ ಮಾಡಿಕೊಂಡಿಲ್ಲ. ಎಲ್ಲರೂ ತಟಸ್ಥರಾಗಿಯೇ ಒಂದಾಗಿದ್ದಾರೆ ಎಂಬ ಗುಮಾನಿ ಇದೆ. ನಿರೀಕ್ಷಿತ ಗೆಲುವುಗಳು ದಾಖಲಾದರೆ 8 ನಿರ್ದೇಶಕ ಬಲ ರಮೇಶ ‘ಕೆ’ ಕಂಪನಿ ಬಳಿಯೂ ಇರಲಿದೆ.

ಯಾರ ವಿರುದ್ಧ ಯಾರಿದ್ದಾರೆ?

ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ ಕುಮಠಳ್ಳಿ ಬೈಲಹೊಂಗಲದಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ವಿರುದ್ಧ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ರಾಮದುರ್ಗದಲ್ಲಿ ಶ್ರೀಕಾಂತ ಢವಣ ವಿರುದ್ಧ ಮಲ್ಲಪ್ಪ ಯಾದವಾಡ ಚನ್ನಮ್ಮನ ಕಿತ್ತೂರಿನಲ್ಲಿ ವಿಕ್ರಮ ಇನಾಮದಾರ ವಿರುದ್ಧ ನಾನಾಸಾಹೇಬ ಪಾಟೀಲ ಹುಕ್ಕೇರಿಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ರಾಜೇಂದ್ರ ಪಾಟೀಲ ನಿಪ್ಪಾಣಿಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಉತ್ತಮ ಪಾಟೀಲ ಮತ್ತು ರಾಯಬಾಗದಲ್ಲಿ ಅಪ್ಪಾಸಾಹೇಬ ಕುಲಗೂಡೆ ವಿರುದ್ಧ ಬಸಗೌಡ ಆಸಂಗಿ ಸ್ಪರ್ಧಿಸಿದ್ದಾರೆ.

ನಡೆಯುವುದೇ ‘ಕುದುರೆ’ ವ್ಯಾಪಾರ?

ಆಗ ನಿಜವಾದ ‘ಕುದುರೆ ವ್ಯಾಪಾರ’ ನಡೆಯಬಹುದು. ವಾರಗಟ್ಟಲೇ ರೆಸಾರ್ಟ್‌ಗಳಲ್ಲಿ ಉಂಡು ತಿಂದು ಕುಣಿದಾಡಿ ನಲಿದಾಡಿ ಬಂದಿರುವವರ ಬಣ್ಣವೆಲ್ಲ ಭಾನುವಾರವೇ ಬಯಲಾಗಲಿದೆ. ಒಳಪೆಟ್ಟಿನ ರಾಜಕಾರಣವನ್ನು ಇಡೀ ರಾಜ್ಯಕ್ಕೆ ಕಲಿಸಿಕೊಟ್ಟಿದ್ದೇ ಬೆಳಗಾವಿ ಜಿಲ್ಲೆ. ಇಂಥ ಶಕ್ತಿಸ್ಥಳದಲ್ಲಿ ಕೊನೆಯ ಕ್ಷಣದರೆಗೂ ಯಾವುದನ್ನೂ ಖಂಡತುಂಡವಾಗಿ ನಿರ್ಧರಿಸಲು ಸಾಧ್ಯವಿಲ್ಲ.ಈ ಬ್ಯಾಂಕ್‌ ಸ್ಥಾಪನೆಯಾಗಿ ಶತಮಾನ ಕಂಡಿದೆ. ನೂರು ವರ್ಷಗಳಲ್ಲಿ ಇದೇ ಮೊದಲಬಾರಿಗೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಕಣ ಸಿದ್ಧವಾಗಿದೆ ಹಿರಿಯ ಸಹಕಾರಿಗಳ ಅನುಭವದ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.