ADVERTISEMENT

ಬೃಹತ್‌ ವೇದಿಕೆ ನಿರ್ಮಾಣ: ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಕ್ಷಣಗಣನೆ

ವೈವಿಧ್ಯಮಯ ಕಾರ್ಯಕ್ರಮ, ಗ್ರಾಮದಲ್ಲಿ ಮನೆ ಮಾಡಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಜನವರಿ 2025, 5:11 IST
Last Updated 12 ಜನವರಿ 2025, 5:11 IST
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ   

ಸಂಗೊಳ್ಳಿ (ಬೈಲಹೊಂಗಲ ತಾ.): ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಶೂರ ಸಂಗೊಳ್ಳಿ ರಾಯಣ್ಣ ಉತ್ಸವ ಜ.12 ಹಾಗೂ 13ರಂದು ರಾಯಣ್ಣನ ಜನ್ಮಭೂಮಿ ಸಂಗೊಳ್ಳಿ ಗ್ರಾಮದಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಈಗಾಗಲೇ ಉತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಆಡಳಿತ, ಸಂಗೊಳ್ಳಿ ರಾಯಣ್ಣ ಉತ್ಸವ ಸಮಿತಿ ರಾಯಣ್ಣನ ಉತ್ಸವ ತಯಾರಿಗಾಗಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಸಚಿವರು, ಶಾಸಕರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಗ್ರಾಮದ ಹೊರವಲಯದ 100 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾದ ರಾಯಣ್ಣ ಸೈನಿಕ ಶಾಲೆ, ಶೌರ್ಯಭೂಮಿ (ಶಿಲ್ಪವನ), ಸ್ಮಾರಕ ಭವನ, ಭೋಜನಾಲಯ ನಿರ್ಮಾಣವಾಗಿ ಕಳೆದ ಬಾರಿಯ ಉತ್ಸವದಲ್ಲಿ ಉದ್ಘಾಟನೆಗೊಂಡು ರಾಯಣ್ಣನ ಅಭಿಮಾನಿಗಳು, ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಇದು ಉತ್ಸವದ ಉತ್ಸಾಹ ಇಮ್ಮಡಿಗೊಳಿಸಿದೆ.

ADVERTISEMENT

ಭವ್ಯ ವೇದಿಕೆ ನಿರ್ಮಾಣ: ರಾಯಣ್ಣ ಶಾಲೆ ಮೈದಾನದಲ್ಲಿ ಬೃಹತ್ ವೇದಿಕೆ, ಎಲ್ಇಡಿ ಪರದೆ, ವಿಶೇಷ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದೆ. ಖ್ಯಾತ ಗಾಯಕ ವಿಜಯ ಪ್ರಕಾಶ, ಗಾಯಕಿ ಶಮಿತಾ ಮಲ್ನಾಡ್‌ ಹಾಗೂ ಅನೇಕ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವ ವೀಕ್ಷಣೆಗೆ ಬರುವ ಜನರಿಗೆ ಸುಮಾರು 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ರಾಯಣ್ಣ ಜನ್ಮಭೂಮಿಯ ಊರಿನಲ್ಲಿ ಸಂಭ್ರಮ ಮನೆ ಮಾಡಿದೆ. ಜನರೂ ಸುಣ್ಣಬಣ್ಣ ಹಚ್ಚಿ ಅಲಂಕರಿಸಿದ್ದಾರೆ. ರಾಯಣ್ಣನ ಉದ್ಯಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಊರಿನೆಲ್ಲೆಡೆ ಸ್ವಚ್ಛತಾ ಕಾರ್ಯಗಳು ಭರದಿಂದ ನಡೆದಿವೆ. ರಾಯಣ್ಣನ ಪ್ರತಿಮೆಗೆ ಬಣ್ಣ ಹಚ್ಚಿ ಅಂದಗೊಳಿಸಲಾಗಿದೆ. ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಬಯಲು ಕುಸ್ತಿ ಕಣ ನಿರ್ಮಾಣ ಮಾಡಲಾಗಿದೆ.

ರಾಯಣ್ಣನ ಉತ್ಸವಕ್ಕೆ ಸಜ್ಜುಗೊಳಿಸಿರುವ ವೇದಿಕೆ
ಸೈನಿಕ ಶಾಲೆ ರಾಕ್ ಗಾರ್ಡನ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೊಡುಗೆ. ಈ ಭಾಗದ ಜನರ ಬಹು ದಿನಗಳ ಬೇಡಿಕೆಗೆ ತಕ್ಕಂತೆ ಉತ್ಸವಕ್ಕೆ 1 ಕೋಟಿ ನೀಡಿದ್ದಾರೆ
ಮಹಾಂತೇಶ ಕೌಜಲಗಿ ಶಾಸಕ
ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದಿಂದ ಸಂಗೊಳ್ಳಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಆ ಮೂಲಕ ರಾಯಣ್ಣನಿಗೆ ಗೌರವ ಸೂಚಿಸಬೇಕು
ಬಸವರಾಜ ಕೊಡ್ಲಿ ಗ್ರಾಮ ಪಂಚಾಯಿತಿ ಸದಸ್ಯ
ದೇಶಾಭಿಮಾನ ಸ್ವಾಭಿಮಾನ ಹಾಗೂ ಸ್ವಾಮಿನಿಷ್ಠೆಯೊಂದಿಗೆ ತಾಯಿ ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ವೀರ ಸಂಗೊಳ್ಳಿ ರಾಯಣ್ಣ ಎಲ್ಲರಲ್ಲೂ ದೇಶಪ್ರೇಮ ಬೆಳೆಯಲು ಪ್ರೇರಣೆ
ಪ್ರಭಾವತಿ ಫಕೀರಪೂರ ಉಪವಿಭಾಗಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.