ADVERTISEMENT

ರಕ್ಷಣೆಗೆ ಆಗ್ರಹಿಸಿ ಬಿಮ್ಸ್‌ ಸಿಬ್ಬಂದಿ ಪ್ರತಿಭಟನೆ

ಜಿಲ್ಲಾಧಿಕಾರಿಯಿಂದ ಕ್ರಮದ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 6:05 IST
Last Updated 23 ಜುಲೈ 2020, 6:05 IST
ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಬೆಳಗಾವಿಯ ಬಿಮ್ಸ್‌ ಸಿಬ್ಬಂದಿ ಗುರುವಾರ ಪ್ರತಿಭಟನೆ ನಡೆಸಿದರು
ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಬೆಳಗಾವಿಯ ಬಿಮ್ಸ್‌ ಸಿಬ್ಬಂದಿ ಗುರುವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಇಲ್ಲಿನ ಬಿಮ್ಸ್‌ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಗುಂಪೊಂದು ಕಲ್ಲುತೂರಾಟ ನಡೆಸಿದ್ದನ್ನು ಖಂಡಿಸಿ ಮತ್ತು ತಮಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ವೈದ್ಯಕೀಯ ಸಿಬ್ಬಂದಿ ಗುರುವಾರ ಪ್ರತಿಭಟಿಸಿದರು.

ಬೆಳಿಗ್ಗೆಯೇ ಬಿಮ್ಸ್‌ ಕಾಲೇಜಿನ ಆವರಣದಲ್ಲಿ ಜಮಾಯಿಸಿದ ಅವರು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಯಾವುದಾದರೂ ವ್ಯಕ್ತಿಗೆ ಕೊರೊನಾ ಬಂದಿದೆ ಎಂದಾಕ್ಷಣ ಜನರು ದೂರ ಹೋಗುತ್ತಿರುವ ಸಂದರ್ಭವಿದು. ಆದರೆ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯಾದ ನೀವೆಲ್ಲರೂ ಸೋಂಕಿತರನ್ನು ಮುಟ್ಟಿ ಅವರಿಗೆ ಚಿಕಿತ್ಸೆ ಕೊಡುವ ಕೆಲಸವನ್ನು ಮಾಡುತ್ತಿದ್ದೀರಿ. ನೀವೆಲ್ಲ ದೇವರಿಗೆ ಸಮಾನರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿಮ್ಮ ಬೆಂಬಲಕ್ಕಿದೆ. ನಿಮಗೆ ಯಾವುದೇ ರೀತಿಯ ಅನ್ಯಾಯ ಆಗುವುದಕ್ಕೆ ಬಿಡುವುದಿಲ್ಲ. ಆಸ್ಪತ್ರೆಯಲ್ಲಿ ಕಲ್ಲು ತೂರಾಟ ನಡೆಸಿದವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

‘ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ಹೆದರಬೇಕಿಲ್ಲ. ಕೊರೊನಾ ಯೋಧರಾದ ನಿಮಗೆ ಕಾನೂನು ರಕ್ಷಣೆ ಇದೆ. ನಾನು ಆಸ್ಪತ್ರೆಗೆ ನಿತ್ಯವೂ ಎರಡು ಬಾರಿ ಭೇಟಿ ಕೊಡುತ್ತೇನೆ. ತಾಲ್ಲೂಕು ಮಟ್ಟದಲ್ಲೂ ಕೋವಿಡ್ ಕೇರ್ ಕೇಂದ್ರಗಳನ್ನು ಮಾಡಿದ್ದೇವೆ. ಇದರಿಂದ ಇಲ್ಲಿಗೆ ಒತ್ತಡ ಕಡಿಮೆ ಆಗಲಿದೆ. ಇಡೀ ಬಿಮ್ಸ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಘೋಷಿಸಿ ತೀರ್ಮಾನ ತೆಗೆದುಕೊಂಡಿದ್ದೇವೆ. ಕಾರ್ಯನಿರ್ವಹಿಸುವವರಿಗೆ ಒತ್ತಡ ಆಗದಂತೆ ನೋಡಿಕೊಳ್ಳಲು ಪಾಳಿಯಲ್ಲಿ ಕೆಲಸಕ್ಕೆ ನಿಯೋಜಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಬಿಮ್ಸ್‌ ಸುತ್ತಮುತ್ತ ನಿಷೇಧಾಜ್ಞೆಯನ್ನು ನಿರಂತರವಾಗಿ ಮುಂದುವರಿಸಲಾಗುವುದು. ಕೊರೊನಾ ಸೋಂಕು ಕಡಿಮೆ ಆಗುವವರೆಗೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು. ವೈದ್ಯಕೀಯ ಸಿಬ್ಬಂದಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ವೈದ್ಯಕೀಯ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಮಾತನಾಡಿ, ‘ಜಿಲ್ಲಾಧಿಕಾರಿ ನಮಗೆಲ್ಲರಿಗೂ ಹುಮ್ಮಸ್ಸು ತುಂಬಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಆರಂಭದಿಂದಲೂ ಸಕ್ರಿಯವಾಗಿ ಪಾಲ್ಗೊಂಡಿರುವ ನಾವು ಮುಂದೆಯೂ ಸೇವೆ ಮಾಡುತ್ತೇವೆ. ಎಲ್ಲರಿಗೂ ನಾವು ಕೇಂದ್ರಬಿಂದು ಆಗಿರುವುದರಿಂದ ಇದೊಂದು ಸವಾಲಿನ ಸಂದರ್ಭವಾಗಿದೆ. ಅಹಿತಕರ ಘಟನೆ ನಡೆದಿದ್ದು, ಅದನ್ನು ಮರೆತು ಕೆಲಸ ಮುಂದುವರಿಸಿಕೊಂಡು ಹೋಗುತ್ತೇವೆ’ ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ, ಬಿಮ್ಸ್‌ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.