ADVERTISEMENT

ಮಾಂಸ ವ್ಯಾಪಾರಿಗಳಿಗೆ ಸಂಚಕಾರ ತಂದ ಪಕ್ಷಿಗಳು!

ಸಾಂಬ್ರಾ ಏರ್‌ಪೋರ್ಟ್‌ ಸುತ್ತ ಮಾಂಸ ಮಾರಾಟ ನಿಷೇಧ

ಎಂ.ಮಹೇಶ
Published 13 ಸೆಪ್ಟೆಂಬರ್ 2019, 19:30 IST
Last Updated 13 ಸೆಪ್ಟೆಂಬರ್ 2019, 19:30 IST
   

ಬೆಳಗಾವಿ: ತಾಲ್ಲೂಕಿನ ಸಾಂಬ್ರಾ ವಿಮಾನನಿಲ್ದಾಣ ಸುತ್ತಮುತ್ತ ಮಾಂಸದ ಅಂಗಡಿಗಳನ್ನು ನಡೆಸುತ್ತಿರುವವರಿಗೆ ಪಕ್ಷಿಗಳೇ ಸಂಚಕಾರ ತಂದೊಡ್ಡಿವೆ!

ಹೌದು. ಆ ಭಾಗದಲ್ಲಿ ಪಕ್ಷಿಗಳ ಹಾರಾಟ ಹೆಚ್ಚುತ್ತಿರುವುದರಿಂದ, ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸುವಂತೆ ವಿಮಾನನಿಲ್ದಾಣ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ನಿರ್ದೇಶನದಂತೆ ನೋಟಿಸ್‌ ಜಾರಿ ಮಾಡಲಾಗಿದೆ. ಅಂಗಡಿಗಳನ್ನು ಮುಚ್ಚಿಸಲಾಗಿದೆ. ಪರಿಣಾಮ, ವ್ಯಾಪಾರಿಗಳು ಅತಂತ್ರರಾಗಿದ್ದಾರೆ.

‘ವಿಮಾನನಿಲ್ದಾಣ ವ್ಯಾಪ್ತಿಯ ಸುತ್ತಲೂ ಪಕ್ಷಿಗಳಿಂದಾಗಿ ವಿಮಾನಗಳಿಗೆ ಅಪಾಯವಾಗುವ ಸಂಭವವಿದೆ. ಹೀಗಾಗಿ, 10 ಕಿ.ಮೀ. ಸುತ್ತಲೂ ಮಾಂಸದ ಅಂಗಡಿಗಳು, ಪ್ರಾಣಿವಧೆ ನಿಷೇಧಿಸಬೇಕು. ಆ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ನಿಯಮಿತವಾಗಿ ಮಾಡಬೇಕು. ಈ ಮೂಲಕ ಪಕ್ಷಿಗಳ ಹಾರಾಟ ತಡೆಗಟ್ಟಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಆದೇಶಿಸಿದ್ದಾರೆ. ಇದನ್ನು ಆಧರಿಸಿ, ಸಾಂಬ್ರಾ, ಬಾಳೇಕುಂದ್ರಿ ಬಿ.ಕೆ., ಬಾಳೇಕುಂದ್ರಿ ಕೆ.ಎಚ್., ಮೋದಗಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಂಸದ ಅಂಗಡಿಗಳಿಗೆ ಪಿಡಿಒಗಳು ನೋಟಿಸ್ ಕೊಟ್ಟಿದ್ದಾರೆ.

ADVERTISEMENT

ಮಾಂಸಕ್ಕಾಗಿ ಬೆಳಗಾವಿಗೇ ಬರಬೇಕು:

ಅಲ್ಲಿ 20 ಅಂಗಡಿಗಳಿವೆ. ಅವುಗಳು ಮುಚ್ಚಿರುವುದರಿಂದ ಜನರಿಗೂ ತೊಂದರೆಯಾಗಿದೆ. ಅವರು ಕೋಳಿ ಅಥವಾ ಕುರಿ ಮಾಂಸಕ್ಕಾಗಿ ಸರಾಸರಿ 20 ಕಿ.ಮೀ. ದೂರದಲ್ಲಿರುವ ಬೆಳಗಾವಿ ನಗರಕ್ಕೆ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.

‘ಹಲವು ದಶಕಗಳಿಂದಲೂ ಇಲ್ಲಿ ಮಾಂಸದ ಅಂಗಡಿಗಳನ್ನು ಇಟ್ಟುಕೊಂಡಿದ್ದೇವೆ. ಇದನ್ನೇ ನಂಬಿ ಬದುಕುತ್ತಿದ್ದೇವೆ. ಈಗ ನಿಷೇಧಿಸಿ, ಮೂಲ ಕಸುಬು‌‌ ಕಿತ್ತುಕೊಳ್ಳುವುದರಿಂದ ಬರಸಿಡಿಲು ಬಡಿದಂತಾಗಿದೆ. ಹಿಂದಿನಿಂದಲೂ ಅಂಗಡಿಗಳಿವೆ, ವಿಮಾನನಿಲ್ದಾಣವೂ ಇದೆ. ಆದರೆ, ನಮ್ಮಿಂದ ಯಾವುದೇ ಸಮಸ್ಯೆಯಾಗಿಲ್ಲ. ಸ್ವಚ್ಛತೆಗೂ ಆದ್ಯತೆ ನೀಡಿದ್ದೇವೆ. ಪಕ್ಷಿಗಳ ಹಾರಾಟ ಹೆಚ್ಚಳಕ್ಕೆ ನಾವಷ್ಟೇ ಕಾರಣವೇ?’ ಎಂದು ಬಾಳೇಕುಂದ್ರಿಯ ಮಾಂಸದ ವ್ಯಾಪಾರಿ ನೇತಾಜಿ ಕಾಂಬ್ಳೆ ಕೇಳಿದರು.

‘ಏರ್‌ಕ್ರಾಫ್ಟ್‌ ಕಾಯ್ದೆ 1934 ಸೆಕ್ಷನ್ 59 (2) ಅಡಿಯಲ್ಲಿ ವಿಮಾನ ನಿಲ್ದಾಣದ ಸುತ್ತಮುತ್ತ ಹತ್ತು ಕಿ.ಮೀ. ಸುತ್ತಲಿನ ಪ್ರದೇಶಗಳಲ್ಲಿ ಪ್ರಾಣಿ ವಧೆ ನಿಷೇಧಿಸಲಾಗಿದೆ. ಮಾಂಸ ತ್ಯಾಜ್ಯ ಅರಸಿ ಪಕ್ಷಗಳು ಬರುವುದನ್ನು ತಪ್ಪಿಸಲು ಮಾಂಸದ ಮಾರಾಟ ನಿಷೇಧಿಸಲಾಗಿದೆ. ಇತ್ತೀಚೆಗೆ 2 ವಿಮಾನಗಳ ರೆಕ್ಕೆಗಳಿಗೆ ಪಕ್ಷಿಗಳು ಸಿಲುಕಿದ್ದರಿಂದ ಸಮಸ್ಯೆಯಾಗಿತ್ತು. ತುರ್ತು ಭೂಸ್ಪರ್ಶ ಮಾಡಿ, 2 ಗಂಟೆ ತಡವಾಗಿ ಅವು ಹಾರಾಟ ನಡೆಸಿವೆ. ಹೀಗಾಗಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.