ಬೆಳಗಾವಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದ ಬಿಜೆಪಿ ನಿಯೋಗವು ಶುಕ್ರವಾರ ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಬೆಳೆಹಾನಿ ವಿವರ ನೀಡಿದರು.
ಆರಂಭದಲ್ಲಿ ಬೈಲಹೊಂಗಲ ತಾಲ್ಲೂಕಿನ ನೇಸರಗಿಯ ಈರಣ್ಣ ಮೀಶಿ ಪಾಟೀಲ ಅವರ ಹೊಲಕ್ಕೆ ನಿಯೋಗ ತೆರಳಿ, ಕ್ಯಾರೆಟ್ ಬೆಳೆ ಹಾನಿಯಾಗಿದ್ದನ್ನು ವೀಕ್ಷಿಸಿತು.
‘ಒಂದು ಎಕರೆಗೆ ₹45 ಸಾವಿರ ಖರ್ಚು ಮಾಡಿ ಕ್ಯಾರೆಟ್ ಬೆಳೆದಿದ್ದೆ. ಪೂರ್ತಿ ಬೆಳೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದೇನೆ. ಆದರೆ, ಸಮಸ್ಯೆ ಆಲಿಸಲು ಸಚಿವರು, ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಬಂದಿಲ್ಲ’ ಎಂದು ಸಮಸ್ಯೆ ಹೇಳಿಕೊಂಡರು.
‘ನಾನು ಬೆಳೆದ ಕ್ಯಾರೆಟ್ ಬೆಳೆಯೂ ಹಾನಿಗೀಡಾಗಿದೆ. ಮಾರುಕಟ್ಟೆಗೆ ಒಯ್ದರೂ ಮಾರಾಟವಾಗುತ್ತಿಲ್ಲ’ ಎಂದು ಮತ್ತೊಬ್ಬ ರೈತ ದ್ಯಾಮಪ್ಪ ಗುಜನಟ್ಟಿ ಅಲವತ್ತುಕೊಂಡರು.
ನಂತರ ಅದೇ ಗ್ರಾಮದ ಮಲ್ಲೇಶಪ್ಪ ಮಾಳನ್ನವರ ಅವರ ಹೊಲದಲ್ಲಿ ಸೋಯಾಅವರೆ ಬೆಳೆ ಹಾನಿಯಾಗಿದ್ದನ್ನು ನಿಯೋಗ ಪರಿಶೀಲಿಸಿತು.
‘ಸೋಯಾ ಅವರೆ ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಕಳೆದ ವರ್ಷ ಎಕರೆಗೆ 12ರಿಂದ 15 ಕ್ವಿಂಟಲ್ ಇಳುವರಿ ಬರುತ್ತಿತ್ತು. ಈ ಬಾರಿ ಎರಡ್ಮೂರು ಕ್ವಿಂಟಲ್ ಬಂದಿದೆ. ಆದರೆ, ನಮ್ಮ ಅಹವಾಲು ಆಲಿಸಲು ಯಾವ ಜನಪ್ರತಿನಿಧಿಗಳು ಮತ್ತು ಅಧಿಕಾರಿಯೂ ಬಂದಿಲ್ಲ’ ಎಂದು ರೈತರು ದೂರಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ, ‘ಖುಷ್ಕಿ ಜಮೀನಿಗೆ ಎಕರೆಗೆ ₹25 ಸಾವಿರ, ನೀರಾವರಿ ಜಮೀನಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಎನ್‌ಡಿಆರ್‌ಎಫ್ ನಿಯಮ ಅನುಸರಿಸಿದರೂ, ರೈತರು ಖರ್ಚು ಮಾಡಿದಷ್ಟು ಹಣವನ್ನಾದರೂ ಪರಿಹಾರವಾಗಿ ನೀಡಲಿ’ ಎಂದರು.
‘ಬಿಜೆಪಿ ಅಧಿಕಾರವಧಿಯಲ್ಲಿ ಬೆಳೆ ಹಾಗೂ ಮನೆ ಹಾನಿಯಾದಾಗ ಹೆಚ್ಚಿನ ಪರಿಹಾರ ಕೊಡಲಾಗಿತ್ತು. ಜತೆಗೆ ಪ್ರತಿ ಮನೆಗೆ ಆಹಾರದ ಕಿಟ್ ವಿತರಿಸಲಾಗಿತ್ತು. ಕೇಂದ್ರಕ್ಕಾಗಿ ಕಾಯದೇ ರಾಜ್ಯ ಸರ್ಕಾರವೇ ಪರಿಹಾರ ವಿತರಿಸಿತ್ತು. ಆದರೆ, ಸಿದ್ದರಾಮಯ್ಯ ಮಳೆ ಹಾನಿ ಸಮೀಕ್ಷೆಗೆ ಕಾಯುತ್ತಿದ್ದಾರೆ’ ಎಂದು ಆರೋಪಿಸಿದರು.
‘ನಾವು ಬೆಳೆ ಹಾನಿಯಾದ ತಕ್ಷಣ ನವದೆಹಲಿಗೆ ಹೋಗಿ ಕೇಂದ್ರ ಸಚಿವರನ್ನು ಭೇಟಿಯಾಗುತ್ತಿದ್ದೆವು. ಆದರೆ, ಕಾಂಗ್ರೆಸ್‌ನ ಯಾವುದೇ ಸಚಿವರು ದೆಹಲಿಗೆ ಹೋಗಿ ಭೇಟಿಯಾಗಿಲ್ಲ. ರಾಜ್ಯ ಸರ್ಕಾರ ಪರಿಹಾರ ಬಿಡುಗಡೆಗೊಳಿಸಿದ ನಂತರ, ಕೇಂದ್ರ ಸರ್ಕಾರ ಪರಿಹಾರ ನೀಡುತ್ತದೆ. ಇದು ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಈ ಕೆಲಸವೂ ಆಗಿಲ್ಲ’ ಎಂದರು.
ಸಂಸದ ರಮೇಶ ಜಿಗಜಿಣಗಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ವಿಠ್ಠಲ ಹಲಗೇಕರ, ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ, ಸಿ.ಟಿ.ರವಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡ್ಡಗೌಡರ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಇದ್ದರು.
ಕುಂಭಕರ್ಣ ನಿದ್ದೆಯಲ್ಲಿ ಸರ್ಕಾರ’
ಬೆಳಗಾವಿ: ‘ರಾಜ್ಯ ಸರ್ಕಾರ ಈಗ ಕುಂಭಕರ್ಣ ನಿದ್ದೆಯಲ್ಲಿದೆ. ಅದಕ್ಕೆ ಮಳೆ ಬರುವುದು ಗೊತ್ತಾಗುವುದಿಲ್ಲ. ಬರ ಪರಿಸ್ಥಿತಿಯ ಅರಿವು ಸಹ ಇಲ್ಲ. ಜನರ ಕಷ್ಟ ಅರಿಯದ ದುಷ್ಟ ಸರ್ಕಾರ ಇದಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಲೇವಡಿ ಮಾಡಿದರು. ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನೆರೆ ಮತ್ತು ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರು ದಸರಾ ಆಚರಿಸಲಾಗದೇ ಬೀದಿಗೆ ಬಂದಿದ್ದಾರೆ. ಆದರೆ ಸರ್ಕಾರ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸದೆ ಸಮೀಕ್ಷೆ ಹೆಸರಿನಲ್ಲಿ ಜಾತಿ–ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದೆ. ಸಿದ್ದರಾಮಯ್ಯ ಈಗ‘ಬೆಂಕಿ’ ಸಿದ್ದರಾಮಯ್ಯ ಆಗಿದ್ದಾರೆ’ ಎಂದು ಆರೋಪಿಸಿದರು. ‘ಮಲೆನಾಡಿನಲ್ಲಿ ಒಂದು ತಿಂಗಳಿಂದ ಗುಡ್ಡ ಕುಸಿತವಾಗಿದೆ. ರಸ್ತೆಗಳೆಲ್ಲ ಹಾಳಾಗಿವೆ. ಉತ್ತರ ಕರ್ನಾಟಕದಲ್ಲೂ ಹಾನಿಯಾಗಿದೆ. ಆದರೆ ಮಳೆ ಹಾನಿ ಪ್ರದೇಶಗಳಿಗೆ ಸಚಿವರು ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ನಾನು ಎಷ್ಟು ದಿನ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆಯೇ ಹೊರತು ಮಳೆ ಹಾನಿ ಬಗ್ಗೆ ಮಾತನಾಡುತ್ತಿಲ್ಲ. ಮನೆ ಬೆಳೆ ಹಾನಿಯ ವಿವರಗಳೂ ಅವರ ಬಳಿ ಇಲ್ಲ’ ಎಂದು ಆಪಾದಿಸಿದರು. ‘ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ನಾವು ಭೇಟಿ ಕೊಟ್ಟು ಮನೆ ರಸ್ತೆ ಬೆಳೆ ಹಾನಿ ಪರಿಶೀಲಿಸಿದ್ದೇವೆ. ಇದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಳೆ ಹಾನಿ ವರದಿ ಪಡೆಯಬೇಕು. ಎಲ್ಲಿ ಎಷ್ಟು ಹಾನಿಯಾಗಿದೆ ಎಂದು ಸಚಿವರ ಜತೆಗೆ ಚರ್ಚಿಸಿ ಪ್ರತಿ ಜಿಲ್ಲೆಗೆ ತಂಡಗಳನ್ನು ಕಳುಹಿಸಬೇಕು. ರಾಜ್ಯಕ್ಕೆ ಭೇಟಿ ನೀಡುವಂತೆ ಕೇಂದ್ರದ ಅಧಿಕಾರಿಗಳ ತಂಡಕ್ಕೆ ತಿಳಿಸಬೇಕು. ಆದರೆ ಸಚಿವರಿಗೆ ಕೆಲಸ ಕೊಡದೆ ಬೇಜವಾಬ್ದಾರಿ ತೋರಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. ‘ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬರಬೇಕು ಎಂದು ಸಿದ್ದರಾಮಯ್ಯ ಮಾಮೂಲಿ ಡೈಲಾಗ್ ಹೊಡೆಯುತ್ತಿದ್ದಾರೆ. ಆದರೆ ಇದಕ್ಕೂ ಮುನ್ನ ಮಳೆ ಹಾನಿಯ ವರದಿಯನ್ನು ಕೇಂದ್ರಕ್ಕೆ ಕಳುಹಿಸಬೇಕು ಎಂಬ ಸಾಮಾನ್ಯ ಜ್ಞಾನ ನಿಮಗೆ ಇಲ್ಲವೇ?’ ಎಂದು ವ್ಯಂಗ್ಯವಾಡಿದರು. ‘ಹೆಸರು ಉದ್ದು ಸೋಯಾಅವರೆ ಬೆಳೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು’ ಎಂದು ಆಗ್ರಹಿಸಿದರು.
‘ಸಿದ್ದರಾಮಯ್ಯ ಬಿರಿಯಾನಿ ತಿನ್ನಲು ಬರುತ್ತಿದ್ದಾರೆ’
‘ನೆರೆ ಸಂತ್ರಸ್ತರ ಸಂಕಷ್ಟ ಆಲಿಸಲು ಬಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಗಾವಿಗೆ ಬಿರಿಯಾನಿ ತಿನ್ನಲು ಬರುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ವ್ಯಂಗ್ಯವಾಡಿದರು. ಬೈಲಹೊಂಗಲ ತಾಲ್ಲೂಕಿನ ನಾಗನೂರಿನಲ್ಲಿ ಶುಕ್ರವಾರ ರೈತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದ್ದರೂ ಸಿದ್ದರಾಮಯ್ಯ ಭೇಟಿ ನೀಡಲಿಲ್ಲ. ಆದರೆ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಶನಿವಾರ ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿಗೆ ಬಂದು ಬಿರಿಯಾನಿ ತಿಂದು ಹೋಗುತ್ತಾರೆ’ ಎಂದರು. ‘ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿ ಎರಡು ತಿಂಗಳಾಗಿದೆ. ಆಗ ರೈತರ ಜಮೀನುಗಳತ್ತ ಸುಳಿಯದ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಇಂದು ನಾವು ಬಂದಿದ್ದೇವೆ ಎಂಬ ಕಾರಣಕ್ಕೆ ರೈತರ ಬಳಿ ಧಾವಿಸಿದ್ದಾರೆ’ ಎಂದು ದೂರಿದರು. ‘ರಾಜ್ಯದಲ್ಲಿ ಮಳೆಯಿಂದ ಆಗಿರುವ ಹಾನಿಗೆ ಎನ್‌ಡಿಆರ್‌ಎಫ್ ಅನುದಾನ ಕೊಟ್ಟಿದ್ದೇವೆ. ವಿಪತ್ತು ನಿರ್ವಹಣೆಗಾಗಿ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆ. ಆದರೆ ರಾಜ್ಯ ಸರ್ಕಾರವೇ ಆ ಹಣವನ್ನೂ ತನ್ನ ಉಚಿತ ಯೋಜನೆಗಳಿಗೆ ಬಳಸಿಕೊಂಡಿದೆ’ ಎಂದು ಹರಿಹಾಯ್ದರು. ‘ಕೇಂದ್ರ ಸರ್ಕಾರದಿಂದ ಈಗ ಹೆಚ್ಚುವರಿ ಅನುದಾನ ಮಾತ್ರ ಬರಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ಮಳೆ ಹಾನಿ ವರದಿಯನ್ನು ಕಳುಹಿಸಬೇಕಿದೆ’ ಎಂದರು. ‘ಶನಿವಾರ ಬೆಳಗಾವಿಗೆ ಬರಲಿರುವ ಮುಖ್ಯಮಂತ್ರಿಗೆ ಬೆಳಗಾವಿ ಜಿಲ್ಲೆಯ ರೈತರ ಸಂಕಷ್ಟ ತಿಳಿಸಬೇಕು ಎಂಬ ಉದ್ದೇಶದಿಂದ ನಾವು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲಿ 52 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.