ADVERTISEMENT

ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಸಭೆ ನಡೆಸಿದ ಸಚಿವ ಉಮೇಶ ಕತ್ತಿ

ಪಕ್ಷಕ್ಕೆ ಆಗಿರುವ ಹಾನಿ ತಡೆಯುವ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 20:43 IST
Last Updated 23 ಜನವರಿ 2022, 20:43 IST
ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ
ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ    

ಬೆಳಗಾವಿ: ಸಚಿವ ಉಮೇಶ ಕತ್ತಿ ಅವರು ತಮ್ಮ ನೇತೃತ್ವದಲ್ಲಿ ಪಕ್ಷದ ಕೆಲವು ಮುಖಂಡರೊಂದಿಗೆ ರಹಸ್ಯವಾಗಿ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ ಹಾಗೂ ಹಲವು ಚರ್ಚೆಗಳಿಗೂ ಗ್ರಾಸವಾಗಿದೆ. ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಸಭೆ ನಡೆಸಲಾಗಿದೆ.

ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ನಡೆದಿರುವ ಈ ಸಭೆ ಹಲವು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಇಲ್ಲಿನ ಕತ್ತಿ ನಿವಾಸದಲ್ಲಿ ನಡೆದ ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯ ಲಕ್ಷ್ಮಣ ಸವದಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ, ಪಿ.ರಾಜೀವ್, ಮುಖಂಡ ಮಹಾಂತೇಶ ಕವಟಗಿಮಠ ಭಾಗವಹಿಸಿದ್ದರು.

ADVERTISEMENT

ಸಚಿವ ಸಂಪುಟ ವಿಸ್ತರಣೆ, ನಿಗಮ–ಮಂಡಳಿಗಳ ನೇಮಕ, ಮಹಾನಗರಪಾಲಿಕೆ ಮೇಯರ್–ಉಪ ಮೇಯರ್ ಆಯ್ಕೆ ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಗಿದೆ. ಅಭಯ ಪಾಟೀಲ ಮತ್ತು ಪಿ.ರಾಜೀವ ಅವರಿಗೆ ಸಚಿವ ಸ್ಥಾನ ನೀಡಬೇಕು. ಶಾಸಕ ಅನಿಲ ಬೆನಕೆ ಹಾಗೂ ಮಹಾಂತೇಶ ದೊಡ್ಡಗೌಡರಗೆ ನಿಗಮ–ಮಂಡಳಿ ಅಧ್ಯಕ್ಷ ಗಾದಿ ಕೊಡಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸುವ ನಿರ್ಧಾರಕ್ಕೆ ಮುಖಂಡರು ಬಂದಿದ್ದಾರೆ ಎನ್ನಲಾಗಿದೆ.

ಸಂಸದೆ ಮಂಗಲಾ ಅಂಗಡಿ ಪಾಲ್ಗೊಂಡಿರಲಿಲ್ಲ. ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಆಹ್ವಾನ ಇರಲಿಲ್ಲ ಎಂದು ತಿಳಿದುಬಂದಿದೆ.

‘ಈಚೆಗೆ ನಡೆದ ವಿಧಾನಪರಿಷತ್‌, ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಾನಿ, ಮುಖಂಡರಿಂದಲೇ ಬಿದ್ದಿರುವ ಒಳಹೊಡೆತ ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆದಿದೆ. ವಿಧಾನಪರಿಷತ್‌ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಕಣಕ್ಕಿಳಿಸಿದ್ದರಿಂದ ಅಧಿಕೃತ ಅಭ್ಯರ್ಥಿ ಸೋಲನುಭವಿಸಬೇಕಾಯಿತು. ಇಂತಹ ಬೆಳವಣಿಗೆಗಳು ಸಂಘಟನೆಗೆ ಒಳ್ಳೆಯದಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಜಾರಕಿಹೊಳಿ ಸಹೋದರರಿಂದ ಪಕ್ಷಕ್ಕೆ ಹಾನಿ ಆಗುತ್ತಿರುವುದನ್ನು ತಡೆಯುವುದು ಹೇಗೆ ಎಂಬಿತ್ಯಾದಿ ವಿಷಯಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಬೀಳದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ವರಿಷ್ಠರು ಕ್ರಮ ಕೈಗೊಳ್ಳಬೇಕು. ನೇಮಕಾತಿಗಳಲ್ಲಿ ಪಕ್ಷ ನಿಷ್ಠರಿಗೆ ಮಣೆ ಹಾಕಬೇಕು ಎಂಬ ಒತ್ತಾಯವೂ ವ್ಯಕ್ತವಾಯಿತು ಎನ್ನಲಾಗಿದೆ.

ಸ್ವಾರ್ಥದ ಕಾರ್ಯಸೂಚಿ ಬಿಡಬೇಕು: ಕಡಾಡಿ
‘ಮುಖಂಡರೆಲ್ಲರೂ ಆಗಾಗ ಸೇರುತ್ತಿರುತ್ತೇವೆ. ಸಚಿವ ಕತ್ತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷ ಸಂಘಟನೆ ಬಲಗೊಳಿಸುವ ಬಗ್ಗೆ ಚರ್ಚಿಸಿದ್ದೇವೆ. ಕಳೆದ 2–3 ಚುನಾವಣೆಗಳಲ್ಲಿ ಆಗಿರುವ ಹಾನಿ, ಅದಕ್ಕೆ ಕಾರಣವೇನು ಎನ್ನುವುದನ್ನು ವಿಶ್ಲೇಷಿಸಲಾಗಿದೆ. ಹಾನಿ ಮರುಕಳಿಸದಂತೆ ನೋಡಿಕೊಳ್ಳಬೇಕು. ನಾಯಕರೆಲ್ಲರೂ ಏನಾದರೂ ಮನಸ್ತಾಪವಿದ್ದರೆ ಸರಿ‍ಪಡಿಸಿಕೊಂಡು ಒಗ್ಗಟ್ಟಾಗಿ ಹೋಗಬೇಕು. ನಾಯಕರು ಸ್ವಾರ್ಥದ ಕಾರ್ಯಸೂಚಿಗಳನ್ನು ಬಿಟ್ಟು ಪಕ್ಷದ ಕಾರ್ಯಸೂಚಿಗಾಗಿ ಒಗ್ಗೂಡಿ ಕೆಲಸ ಮಾಡಬೇಕು ಎಂದು ಕೋರಿದ್ದೇನೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.