ADVERTISEMENT

ಸಮನ್ವಯ ಸಮಿತಿ ನಿರ್ಣಯದತ್ತ ಚಿತ್ತ

ಬಿಜೆಪಿ ರಾಜ್ಯ ಕಾರ್ಯಕಾರಿಣಿ; ಕೇಸರಿಮಯವಾದ ಕುಂದಾನಗರಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 15:22 IST
Last Updated 3 ಡಿಸೆಂಬರ್ 2020, 15:22 IST
ಬೆಳಗಾವಿಯಲ್ಲಿ ಶಾಸಕ ಅಭಯ ‍ಪಾಟೀಲ ಹಾಗೂ ಬೆಂಬಲಿಗರು ಬಿಜೆಪಿ ಬಾವುಟಗಳನ್ನು ಕಟ್ಟಿದರು
ಬೆಳಗಾವಿಯಲ್ಲಿ ಶಾಸಕ ಅಭಯ ‍ಪಾಟೀಲ ಹಾಗೂ ಬೆಂಬಲಿಗರು ಬಿಜೆಪಿ ಬಾವುಟಗಳನ್ನು ಕಟ್ಟಿದರು   

ಬೆಳಗಾವಿ: ನಗರದಲ್ಲಿ ಶುಕ್ರವಾರ (ಡಿ.4) ನಡೆಯಲಿರುವ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮನ್ವಯ ಸಮಿತಿ ಸಭೆ (ಕೋರ್ ಕಮಿಟಿ)ಯು ಸಚಿವ ಸಂಪುಟ ವಿಸ್ತರಣೆ ಸರ್ಕಸ್‌ ಅಂತ್ಯಗೊಳಿಸುವುದೋ, ಇಲ್ಲವೋ ಎನ್ನುವ ಕುತೂಹಲ ಆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿದೆ.

ಪಕ್ಷದ ರಾಜ್ಯ ಉಸ್ತುವಾರಿಯಾದ ನಂತರ ಅರುಣ್‌ ಸಿಂಗ್ ಅವರು ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಮುಖ್ಯಮಂತ್ರಿ ಆದಿಯಾಗಿ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಕಾತರರಾಗಿದ್ದಾರೆ. ಅವರು ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಯಾವ ರೀತಿಯ ‘ನಿರ್ದೇಶನ’ವನ್ನು ಹೈಕಮಾಂಡ್‌ನಿಂದ ತರಲಿದ್ದಾರೆ. ಅದರಿಂದ ಆಗಬಹುದಾದ ಮುಂದಿನ ಬೆಳವಣಿಗೆಗಳೇನು ಎನ್ನುವ ಚರ್ಚೆಗಳು ಆರಂಭವಾಗಿದೆ.

ಶುಕ್ರವಾರದ ಕೋರ್ ಕಮಿಟಿ ಸಭೆ ಹಾಗೂ ಶನಿವಾರ ನಡೆಯಲಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ. ಹೀಗಾಗಿ, ದೊಡ್ಡ ಸಂಖ್ಯೆಯಲ್ಲಿರುವ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಕೂಡ ಇಲ್ಲಿ ಕೈಗೊಳ್ಳಬಹುದಾದ ನಿರ್ಣಯಗಳತ್ತ ಕಾದು ನೋಡುತ್ತಿದ್ದಾರೆ. ಅಲ್ಲದೇ, ವರಿಷ್ಠರು ಹಾಗೂ ಮುಖಂಡರನ್ನು ಇಲ್ಲಿಯೇ ಭೇಟಿಯಾಗಿ ಮನವಿ ಮಾಡಿಕೊಳ್ಳುವುದಕ್ಕೂ ಸಿದ್ಧತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಇನ್ನೊಂದೆಡೆ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಎಂದು ಪಕ್ಷದ ಒಂದು ವರ್ಗ ಮತ್ತು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಇದೆಲ್ಲ ಬೆಳವಣಿಗೆ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ. ಇದೇ ತಿಂಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಕಾರ್ಯತಂತ್ರದ ಬಗ್ಗೆಯೂ ಸಮಾಲೋಚನೆ ಆಗಲಿದೆ.ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮುಖಂಡರು ತಿಳಿಸಿದರು.

ಈ ನಡುವೆ, ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಬಿಜೆಪಿ ಬಾವುಟಗಳನ್ನು ಕಾರ್ಯಕರ್ತರು ಹಾಕಿದ್ದಾರೆ. ಬಂಟಿಂಗ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿದ್ದು, ಆ ಪ್ರದೇಶಗಳೆಲ್ಲವೂ ಕೇಸರಿಮಯವಾಗಿವೆ. ಸಭೆ ನಡೆಯಲಿರುವ ಗಾಂಧಿ ಭವನದಲ್ಲೂ ಅಗತ್ಯ ಸಿದ್ಧತೆಯನ್ನು ‍ಪದಾಧಿಕಾರಿಗಳು ಮಾಡಿಕೊಂಡಿದ್ದಾರೆ.

***

ಬೆಳಗಾವಿಗೆ ರಾಜಕೀಯ ನಾಯಕರ ದಂಡು

ಬೆಳಗಾವಿ: ನಗರಕ್ಕೆ ಡಿ. 4 ಮತ್ತು 5ರಂದು ರಾಜಕೀಯ ನಾಯಕರ ದಂಡೇ ಬರಲಿದೆ.

ಶುಕ್ರವಾರ ಬಿಜೆಪಿ ಕೋರ್ ಕಮಿಟಿ ಸಭೆ ಮತ್ತು ಶನಿವಾರ ರಾಜ್ಯ ಕಾರ್ಯಕಾರಣಿಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಆರ್. ಅಶೋಕ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮೊದಲಾದವರು ಬರಲಿದ್ದಾರೆ.

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಡಿ.5ರಂದು ಮಧ್ಯಾಹ್ನ 12.45ಕ್ಕೆ ಸಾಂಬ್ರಾ ವಿಮಾನನಿಲ್ದಾಣಕ್ಕೆ ಬಂದು, ಬಾಗಲಕೋಟೆಯ ತೇರದಾಳಕ್ಕೆ ತೆರಳುವರು. ಸಂಜೆ 5.30ಕ್ಕೆ ಬೆಳಗಾವಿಗೆ ಬಂದು ವಿಮಾನದಲ್ಲಿ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.