ADVERTISEMENT

ಬಗರ್‌ ಹುಕುಂ ಸಮಿತಿಗೆ ಮಾಜಿ ಶಾಸಕರ ನೇಮಕಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 20:25 IST
Last Updated 15 ಡಿಸೆಂಬರ್ 2023, 20:25 IST
<div class="paragraphs"><p>ಬೆಳಗಾವಿಯ ಸುವರ್ಣ ವಿಧಾನಸೌಧ</p></div>

ಬೆಳಗಾವಿಯ ಸುವರ್ಣ ವಿಧಾನಸೌಧ

   

ವಿಧಾನಸಭೆ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಗರ್ ಹುಕುಂ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಶಾಸಕ ಗೋಪಾಲ ಪೂಜಾರಿ ಅವರನ್ನು ನೇಮಿಸಿರುವುದನ್ನು ಬಿಜೆಪಿ ಸದಸ್ಯರು ತೀವ್ರವಾಗಿ ವಿರೋಧಿಸಿದರು.

ಶುಕ್ರವಾರ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಗುರುರಾಜ್‌ ಶೆಟ್ಟಿ ಗಂಟಿಹೊಳೆ, ‘ನನ್ನ ಕ್ಷೇತ್ರದಲ್ಲಿ ಎರಡು ಬಗರ್‌ ಹುಕುಂ ಸಮಿತಿಗಳನ್ನು ನೇಮಿಸಲಾಗಿದೆ. ನನ್ನ ಅಧ್ಯಕ್ಷತೆಯ ಸಮಿತಿಗೆ ಕಡಿಮೆ ಪ್ರದೇಶ, ಬೇರೊಬ್ಬರ ಅಧ್ಯಕ್ಷತೆಯ ಸಮಿತಿಗೆ ಹೆಚ್ಚು ಪ್ರದೇಶವನ್ನು ಹಂಚಿಕೆ ಮಾಡಲಾಗಿದೆ. ಶಾಸಕರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದರು.

ADVERTISEMENT

‘ಈ ರೀತಿ ಒಂದೇ ಕ್ರೇತಕ್ಕೆ ಎರಡು ಸಮಿತಿಗಳನ್ನು ನೇಮಿಸಿರುವುದನ್ನು ಹಿಂಪಡೆಯಬೇಕು. ಶಾಸಕರ ಅಧ್ಯಕ್ಷತೆಯಲ್ಲೇ ಸಮಿತಿ ನೇಮಿಸಬೇಕು’ ಎಂದು ಆಗ್ರಹಿಸಿದರು.

ಬಿಜೆಪಿಯ ವಿ. ಸುನಿಲ್‌ ಕುಮಾರ್‌ ಮಾತನಾಡಿ, ‘ಶಾಸಕರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇದ್ದರೆ, ಚುನಾವಣೆಯಲ್ಲಿ ಸೋತ ಅಭ್ಯರ್ಥಿಯ ಅಧ್ಯಕ್ಷತೆಯಲ್ಲಿ ಇನ್ನೊಂದು ಸಮಿತಿ ನೇಮಿಸಲಾಗಿದೆ. ಈ ರೀತಿಯ ರಾಜಕಾರಣವನ್ನು ಕೈಬಿಡಬೇಕು. ಸೋತ ಅಭ್ಯರ್ಥಿ ನೇತೃತ್ವದ ಸಮಿತಿ ನೇಮಕವನ್ನು ರದ್ದುಗೊಳಿಸಿ ತಕ್ಷಣ ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಬಿಜೆಪಿಯ ಆರಗ ಜ್ಞಾನೇಂದ್ರ ಸೇರಿದಂತೆ ಹಲವರು ಗುರುರಾಜ್‌ ಶೆಟ್ಟಿ ಅವರ ಬೇಡಿಕೆಯನ್ನು ಬೆಂಬಲಿಸಿದರು.

ಕಂದಾಯ ಸಚಿವರ ಜತೆ ಚರ್ಚಿಸುವುದಾಗಿ ಗೃಹ ಸಚಿವ ಜಿ. ಪರಮೇಶ್ವರ ಭರವಸೆ ನೀಡಿದರು. ಕಂದಾಯ ಸಚಿವರು ಮತ್ತು ಶಾಸಕರ ಜತೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಸಭಾಧ್ಯಕ್ಷ ಯು.ಟಿ. ಖಾದರ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.