
ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮಂಗಳವಾರ ಮುತ್ತಿಗೆ ಹಾಕಲು ನುಗ್ಗಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಪೊಲೀಸರು ಹೊತ್ತೊಯ್ದು ವಶಕ್ಕೆ ಪಡೆದರು ಪ್ರಜಾವಾಣಿ ಚಿತ್ರ
ಬೆಳಗಾವಿ: ಒಂದೆಡೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನುಗ್ಗಿದ ಬಿಜೆಪಿ ಕಾರ್ಯಕರ್ತರು, ಇನ್ನೊಂದೆಡೆ ಸೌಧದ ಸಂಪರ್ಕ ರಸ್ತೆಯನ್ನೇ ಬಂದ್ ಮಾಡಿದ ರೈತರು. ಎರಡೂ ಹೋರಾಟಗಳಿಂದಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನಕ್ಕೆ ಮಂಗಳವಾರ ಬಿಸಿ ತಟ್ಟಿತು. ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ರಾಷ್ಟ್ರೀಯ ಹೆದ್ದಾರಿಯ ಬಲಬದಿಯ ಸರ್ವಿಸ್ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ಎಡಬದಿಯ ಸರ್ವಿಸ್ ರಸ್ತೆಯಲ್ಲಿ ರಾಜ್ಯ ರೈತ ಸಂಘದವರು ಧರಣಿ ಕುಳಿತರು. ಎರಡೂ ಸರ್ವಿಸ್ ರಸ್ತೆಗಳ ಸಂಚಾರ ಒಂದು ತಾಸಿಗೂ ಹೆಚ್ಚು ಸಮಯ ಬಂದ್ ಆಯಿತು. ಎರಡೂ ದಿಕ್ಕಿನಲ್ಲಿ ವಾಹನಗಳು ಕಿಲೋಮೀಟರ್‌ವರೆಗೆ ಸಾಲುಗಟ್ಟಿ ನಿಂತವು.
ನಾಯಕರ ಬಂಧನ: ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷಗಳಲ್ಲಿ 2,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಕ್ಕೆಜೋಳ, ಹೆಸರುಖರೀದಿ ಕೇಂದ್ರ ತೆರೆಯದೇ, ಕಬ್ಬು, ಹೆಸರಿಗೆ ಸೂಕ್ತ ದರ ನೀಡಿದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನ ಸಮಾವೇಶ ನಡೆದಿದ್ದ ಮಾಲಿನಿಸಿಟಿ ಮೈದಾನದಿಂದ ಪಾದಯಾತ್ರೆ ಆರಂಭಿಸಿ, ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ನಡೆದರು.
3 ಕಿ.ಮೀ ಕ್ರಮಿಸಿದ ಬಳಿಕ ಸರ್ವಿಸ್ ರಸ್ತೆ ದಾಟಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕುನುಗ್ಗಲು ಉಂಟಾಯಿತು. ಬ್ಯಾರಿಕೇಡ್‌ಗಳನ್ನು ಕಿತ್ತು ಸೌಧದತ್ತ ನುಗ್ಗಲು ಯತ್ನಿಸಿದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧನಸಭೆ ವಿಪಕ್ಷ ನಾಯಕ ಆರ್.ಅಶೋಕ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸ್ ವಾಹನ ಹಾಗೂ ಬಸ್‌ಗಳಲ್ಲಿ ಕರೆದೊಯ್ದರು.
ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮಂಗಳವಾರ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು
ಪಟ್ಟುಹಿಡಿದ ರೈತರು: ಇದೇ ಮಾರ್ಗದಲ್ಲಿ ಬಲಬದಿಯ ಸರ್ವಿಸ್ ರಸ್ತೆಯಲ್ಲೂ ರೈತರು ತಾಸುಗಟ್ಟಲೇ ಧರಣಿ ಕುಳಿತರು. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿಬೇಕು, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು.
ಮುಖ್ಯಮಂತ್ರಿ ಅವರೇ ಸ್ಥಳಕ್ಕೆ ಬರುವವರೆಗೆ ಧರಣಿ ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಇದರಿಂದ ಒಂದು ತಾಸು ಸಂಚಾರ ಬಂದ್ ಆಯಿತು. ಸ್ಥಳಕ್ಕೆ ಬಂದ ಡಿಸಿಪಿ ನಾರಾಯಣ ಭರಮಣಿ ರೈತರ ಮನವೊಲಿಸಲು ಯತ್ನಿಸಿದರು. ಸ್ಥಳಕ್ಕೆ ಬರುವುದಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಫೋನ್ ಮೂಲಕ ಭರವಸೆ ನೀಡಿದ ಬಳಿಕ ರಸ್ತೆಯಿಂದ ಎದ್ದು ಪ್ರತಿಭಟನೆ ಟೆಂಟಿಗೆ ಮರಳಿದರು.
‘ಸರ್ಕಾರದ ಹೆಣ ಎತ್ತಲು ಸಿಎಂ, ಡಿಸಿಎಂ ಪೈಪೋಟಿ’
ಪ್ರತಿಭಟನ ಸಮಾವೇಶದಲ್ಲಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ, ‘ಜನರ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ. ಇದರ ಹೆಣವನ್ನು ಯಾರು ಮುಂದೆ ಹೊರಬೇಕು, ಯಾರು ಹಿಂದೆ ಹೊರಬೇಕು ಎಂದು ಸಿ.ಎಂ, ಡಿಸಿಎಂ ಪೈಪೋಟಿ’ ನಡೆಸಿದ್ದಾರೆ ಎಂದು ಟೀಕಿಸಿದರು.
ಇದಕ್ಕೆ ದನಿಗೂಡಿಸಿದ ವಿಜಯೇಂದ್ರ, ‘ಈ ಲಜ್ಜೆಗೇಡಿ ಸರ್ಕಾರ ರೈತರ ಪಾಲಿಗೆ ಸತ್ತುಹೋಗಿದೆ. ಯಾರಾದರೂ ಇದರ ಹೆಣ ಎತ್ತಿರಿ’ ಎಂದು ಗುಡುಗಿದರು.
ನಾಲಿಗೆ ಬಿಗಿಹಿಡಿದು ಮಾತನಾಡಿ:
ಬಿಜೆಪಿಯ ನಾಯಕರ ಈ ಮಾತಿಗೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ‘ವಿಜಯೇಂದ್ರ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಐದು ವರ್ಷ ಇವರೇನು ಮಾಡಿದ್ದಾರೆ ನಾವೂ ಕಂಡಿದ್ದೇವೆ’ ಎಂದರು.
‘ಧೈರ್ಯವಿದ್ದರೆ ಇವರು ಬೆಂಬಲ ಬೆಲೆ ಘೋಷಣೆಗೆ ಕೇಂದ್ರ ಸರ್ಕಾರವನ್ನು ಕೇಳಲಿ. ಇಲ್ಲಿ ನಾಲಿಗೆ ಹರಿಬಿಟ್ಟರೆ ಏನು ಪ್ರಯೋಜನ? ಅಂಬಾನಿಯ ₹3 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರಲ್ಲ; ಅದರ ಬದಲು ರೈತರ ನೆರವಿಗೆ ಬರಬಹುದಿತ್ತಲ್ಲವೇ? ನಾವು ರೈತರ ಪರ ಇದ್ದೇವೆ. ಬಿಜೆಪಿಯೇ ರೈತ ವಿರೋಧಿ ಗುಣ ಹೊಂದಿದೆ. ಸ್ವತಃ ಮುಖ್ಯಮಂತ್ರಿ ಅವರೇ ಪ್ರಧಾನಿಯನ್ನು ಭೇಟಿ ಮಾಡಿದರೂ ರೈತರ ನೆರವಿಗೆ ಬಂದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.