ADVERTISEMENT

ಬಿಜೆಪಿಯವರಿಗೆ ರಾಹುಲ್ ಗಾಂಧಿ ಸಿಂಹ ಸ್ವಪ್ನ: ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 12:02 IST
Last Updated 11 ಏಪ್ರಿಲ್ 2021, 12:02 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಬೆಳಗಾವಿ: ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬಿಜೆಪಿಯವರಿಗೆ ಸಿಂಹ ಸ್ವಪ್ನ ಆಗಿದ್ದಾರೆ’ ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ಹೋಗಲಿಲ್ಲ ಎಂದು ಬಿಜೆಪಿಯವರು ಹೇಳಿದ್ದನ್ನು ಗಮನಿಸಿದ್ದೇನೆ. ಅವರು ಬರಲಿಲ್ಲವಾದರೂ ಮಾತನಾಡುತ್ತಾರೆ; ಬಂದರೂ ಚರ್ಚಿಸುತ್ತಾರೆ. ರಾಹುಲ್‌ ಬಿಜೆಪಿಯವರ ಕನಸಲ್ಲೂ‌ ಬರುತ್ತಾರೆ ಎಂದಾಯಿತು. ಅವರಿಗೆ ಬಿಜೆಪಿಯವರು ಹೆದರುತ್ತಾರೆ’ ಎಂದರು.

‘ಕಾಂಗ್ರೆಸ್‌ಗೆ ಒಂದು ನಿಲುವಿಲ್ಲ, ಅದೊಂದು ಬಸ್ ಸ್ಟ್ಯಾಂಡ್ ಆಗಿದೆ’ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಎಲ್ಲರ ಕೈ ಹಿಡಿದಿದ್ದಾರೆ. ತಮಿಳುನಾಡಿನಲ್ಲಿ ಎಐಎಡಿಂಕೆ ಕೈ ಹಿಡಿದಿಲ್ಲವೇ? ಸಂವಿಧಾನದ ರಕ್ಷಣೆಗೆ ಮತ್ತು ಅದರ ಏಳಿಗೆಗಾಗಿ ಒಗ್ಗೂಡಿ ನಾವು ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಹಯೋಗ ತಪ್ಪಲ್ಲ’ ಎಂದು ತಿಳಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ‘ರಾಹುಲ್‌ ಗಾಂಧಿ ಬಿಜೆಪಿಯ ಸಿಂಹ ಎನ್ನುವುದಾದರೆ, ಅಲ್ಲಿ ಖರ್ಗೆ ಏನು? ಅವರನ್ನು ಏನೆಂದು ಕರೆಯಬೇಕು’ ಎಂದು ಕೇಳಿದರು.

‘ಪಂಚ ರಾಜ್ಯಗಳ ಚುನಾವಣೆ ಮತ್ತು ರಾಜ್ಯದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ತೋರಿಸಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.