ADVERTISEMENT

‘ಪಾಕಿಸ್ತಾನ ಪ್ರಜೆಗಳನ್ನು ಭಾರತದಿಂದ ಗಡೀಪಾರು ಮಾಡಿ’

ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಮೇ 2025, 13:20 IST
Last Updated 6 ಮೇ 2025, 13:20 IST
ಬೆಳಗಾವಿಯ ರಾಣಿ ಚನ್ನಮ್ಮನ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು   ಪ್ರಜಾವಾಣಿ ಚಿತ್ರ
ಬೆಳಗಾವಿಯ ರಾಣಿ ಚನ್ನಮ್ಮನ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು   ಪ್ರಜಾವಾಣಿ ಚಿತ್ರ   

ಬೆಳಗಾವಿ: ಭಾರತದಲ್ಲಿ ಅಕ್ರಮವಾಗಿ ನೆಲೆಸಿದ ಪಾಕಿಸ್ತಾನ ಮೂಲದ ಪ್ರಜೆಗಳನ್ನು ತಕ್ಷಣವೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ, ಬಿಜೆಪಿ ಮಹಾನಗರ ಮತ್ತು ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ‘ಪಾಕಿಸ್ತಾನ ಪ್ರಜೆಗಳೇ ಭಾರತ ಬಿಟ್ಟು ತೊಲಗಿ’ ಎಂದು ಘೋಷಣೆ ಕೂಗಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ಅವರಿಗೆ ಮನವಿ ಸಲ್ಲಿಸಿದರು. 

ಮಾಜಿ ಶಾಸಕ ಸಂಜಯ ಪಾಟೀಲ, ‘ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ಮಾಡಿರುವ ಘಟನೆ ಖಂಡನೀಯ. ಪಾಕಿಸ್ತಾನದವರು ಭಯೋತ್ಪಾದಕರ ಮೂಲಕ ಹಿಂದೂಗಳಿಗೆ ತೊಂದರೆ ಕೊಡುತ್ತಿದ್ದಾರೆ. ವಿವಿಧ ರಾಜ್ಯದವರು ತಮ್ಮಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆಗಳನ್ನು ಹೊರಹಾಕುತ್ತಿದ್ದಾರೆ. ರಾಜ್ಯ ಸರ್ಕಾರವೂ ಇದೇ ಮಾದರಿಯಲ್ಲಿ ನಡೆದುಕೊಳ್ಳಬೇಕು. ಪಾಕಿಸ್ತಾನ ಪ್ರಜೆಗಳನ್ನು ತಕ್ಷಣವೇ ಹೊರಹಾಕಬೇಕು’ ಎಂದು ಒತ್ತಾಯಿಸಿದರು. 

ADVERTISEMENT

ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ‘ರಾಜ್ಯದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಪಾಕಿಸ್ತಾನ ಮೂಲದ ಪ್ರಜೆಗಳನ್ನು ಕೇಂದ್ರ ಸರ್ಕಾರದ ನಿರ್ದೇಶನದಂತೆ ಪತ್ತೆಹಚ್ಚಿ, ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಉಗ್ರಹೋರಾಟ ಅನಿವಾರ್ಯ’ ಎಂದು ಎಚ್ಚರಿಕೆ ಕೊಟ್ಟರು.

ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಎಂ.ಎಲ್‌.ಮುತ್ತೆಣ್ಣವರ, ಪಕ್ಷದ ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ರಾಜಶೇಖರ ಡೋಣಿ, ಗಿರೀಶ ಧೊಂಗಡಿ, ಮುರುಘೇಂದ್ರಗೌಡ ಪಾಟೀಲ, ಹನುಮಂತ ಕೊಂಗಾಲಿ, ಮುಕ್ತಾರ್‌ ಪಠಾಣ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.