ADVERTISEMENT

ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ: ಮುಚ್ಚಳಿಕೆ ನೀಡಲು ಸೂಚಿಸಿದ ಡಿಸಿಪಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 16:24 IST
Last Updated 30 ಅಕ್ಟೋಬರ್ 2018, 16:24 IST
ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ವಿದ್ಯಾರ್ಥಿಗಳು– ಸಾಂದರ್ಭಿಕ ಚಿತ್ರ
ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ವಿದ್ಯಾರ್ಥಿಗಳು– ಸಾಂದರ್ಭಿಕ ಚಿತ್ರ   

ಬೆಳಗಾವಿ: ‘ಕರ್ನಾಟಕ ರಾಜ್ಯೋತ್ಸವ ಬಹಿಷ್ಕರಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯವರು ನ. 1ರಂದು ನಗರದಲ್ಲಿ ನಡೆಸುವ ಕರಾಳ ದಿನಾಚರಣೆ ಅನುಮತಿ ನೀಡಬೇಕೋ, ಬೇಡವೋ ಎನ್ನುವುದನ್ನು ಬುಧವಾರ (ಅ.31)ರಂದು ನಿರ್ಧರಿಸಲಾಗುವುದು’ ಎಂದು ಡಿಸಿಪಿ ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಸೀಮಾ ಲಾಟ್ಕರ್‌ ತಿಳಿಸಿದರು.

‘ಅತ್ಯಂತ ಸೂಕ್ಷ್ಮ ವಿಚಾರ ಇದಾಗಿರುವುದರಿಂದ ಮಾರ್ಕೆಟ್ ಠಾಣೆ ಇನ್‌ಸ್ಪೆಕ್ಟರ್‌ ವರದಿ ಅಧರಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಎಂಇಎಸ್ ಪದಾಧಿಕಾರಿಗಳಾದ ದೀಪಕ ದಳವಿ, ಮನೋಹರ ಕಿಣೇಕರ, ಮಾಳೋಜಿ ಅಷ್ಟೇಕರ ಹಾಗೂ ನಿಂಗೋಜಿ ಉದ್ದಾರ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ನಗರದಲ್ಲಿ ಶಾಂತಿ ಕಾಪಾಡುವುದು ಹಾಗೂ ಒಳ್ಳೆಯ ನಡತೆ ಕುರಿತು ವರ್ಷದ ಅವಧಿಗೆ ಅವರಿಂದ ತಲಾ ₹ 5 ಲಕ್ಷಗಳ ಸ್ವಯಂ ಮುಚ್ಚಳಿಕೆ ನೀಡಬೇಕು. ಅಷ್ಟೇ ಮೊತ್ತದ ಮುಚ್ಚಳಿಕೆಯನ್ನು ಬೇರೆ ಇಬ್ಬರಿಂದ ಬರೆಸಿಕೊಂಡು ಅ.31ರ ಸಂಜೆ 4ಕ್ಕೆ ತಮ್ಮ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

‘ಸಂಭಾಜಿ ಉದ್ಯಾನದಿಂದ ಆರಂಭವಾಗುವ ಮೆರವಣಿಗೆಯಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿ ಜನರನ್ನು ಪ್ರೇರೇಪಿಸಿ ನಗರ ಶಾಂತಿ ಕದಡುವ ಸಂಭವವಿದೆ. ಹೀಗಾಗಿ, ಶಾಂತ ರೀತಿಯಿಂದ ನಡೆದುಕೊಳ್ಳುತ್ತೇವೆ ಎಂದು ಮುಚ್ಚಳಿಕೆ ನೀಡುವಂತೆ ಮುಖಂಡರಿಗೆ ತಿಳಿಸಲಾಗಿದೆ. ಅವರು ಮುಚ್ಚಳಿಕೆ ಕೊಟ್ಟ ಬಳಿಕವಷ್ಟೇ ಅನುಮತಿ ಕೊಡುವ ಕುರಿತು ನಿರ್ಧರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.