ADVERTISEMENT

ಬೆಳಗಾವಿ: ಎಂಇಎಸ್ ಮುಖಂಡರ ಮುಖಕ್ಕೆ ಮಸಿ, ನಾಳೆ ಬಂದ್‌ಗೆ ಕರೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 22:28 IST
Last Updated 13 ಡಿಸೆಂಬರ್ 2021, 22:28 IST
ಎಂಇಎಸ್ ಮುಖಂಡ ದೀಪಕ ದಳವಿ ಅವರಿಗೆ ಕಪ್ಪು ಮಸಿ ಬಳಿದಿರುವುದು
ಎಂಇಎಸ್ ಮುಖಂಡ ದೀಪಕ ದಳವಿ ಅವರಿಗೆ ಕಪ್ಪು ಮಸಿ ಬಳಿದಿರುವುದು   

‌ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ, ಇಲ್ಲಿನ ತಿಲಕವಾಡಿಯ ವ್ಯಾಕ್ಸಿನ್‌ ಡಿಪೊ ಮೈದಾನದ ಬಳಿ ಸೋಮವಾರ ಮಹಾಮೇಳಾವ ಆಯೋಜಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಅಧ್ಯಕ್ಷ ದೀಪಕ ದಳವಿ ಅವರ ಮುಖಕ್ಕೆ ಕನ್ನಡ ಸಂಘಟನೆ ಕಾರ್ಯಕರ್ತರು ಮಸಿ ಬಳಿದರು. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮಸಿ ಬಳಿದ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಪತ್‌ಕುಮಾರ್‌ ದೇಸಾಯಿ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಅಧಿಕಾರಿಗಳಿಗೆ ಬೆದರಿಕೆ: ಮಹಾಮೇಳಾವಕ್ಕೆ ನಗರ ಪೊಲೀಸ್‌ ಕಮಿಷನರೇಟ್‌ ಅನುಮತಿ ನೀಡದಿದ್ದರೂ ಅನಧಿಕೃತವಾಗಿ ವೇದಿಕೆ ನಿರ್ಮಿಸಿದ್ದರು. ಇದನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಲು ಮುಂದಾಗುತ್ತಿದ್ದಂತೆಯೇ, ಕಾರ್ಯಕರ್ತರು ಅಡ್ಡಿಪಡಿಸಿ, ಅಲ್ಲಿಂದ ತೆರಳುವಂತೆ ಬೆದರಿಕೆ ಹಾಕಿದರು.

ADVERTISEMENT

ಬಳಿಕ, ಸ್ಥಳಕ್ಕೆ ಬಂದ ಪಾಲಿಕೆ ಉಪ ಆಯುಕ್ತೆ (ಅಭಿವೃದ್ಧಿ) ಲಕ್ಷ್ಮಿ ಸುಳಗೇಕರ ಎಂಇಎಸ್ ಮುಖಂಡರಿಗೆ ‘ಈ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು. ಆಗ ಮತ್ತೆ ವೇದಿಕೆ ಏರಿದ ಕಾರ್ಯಕರ್ತರು ವೇದಿಕೆ ತೆರವುಗೊಳಿಸಲು ಅಡ್ಡಿಪಡಿಸಿ, ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಪೊಲೀಸರ ಸಮ್ಮುಖದಲ್ಲಿಯೇ ಮಾತಿನ ಚಕಮಕಿ ಆಯಿತು.

ಈ ವೇಳೆ, ಮೈದಾನದ ಬಳಿ ಬಂದ ಕನ್ನಡ ಹೋರಾಟಗಾರ ಸಂಪತ್‌ಕುಮಾರ್ ಅವರು ದೀಪಕ ದಳವಿ ಮುಖಕ್ಕೆ ಮಸಿ ಬಳಿದು, ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿದ್ದು ಎನ್ನುತ್ತೀರಾ?’ ಎಂದು ತರಾಟೆಗೆ ತೆಗೆದುಕೊಂಡರು. ‘ಎಂಇಎಸ್‌ ಗೂಂಡಾಗಳಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ರಾಜ್ಯ ಸರ್ಕಾರದ ವಿರುದ್ಧಎಂಇಎಸ್‌ ಮುಖಂಡರು ಘೋಷಣೆ ಕೂಗಿ ಪ್ರತಿಭಟಿಸಿದರು.

ಬೆಳಗಾವಿ ಬಂದ್‌ ಕರೆ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ. ಆದರೆ, ಕನ್ನಡ ಹೋರಾಟಗಾರರು ದಳವಿ ಮುಖಕ್ಕೆ ಮಸಿ ಬಳಿದು, ಮರಾಠಿ ಭಾಷಿಗರನ್ನು ಅವಮಾನಿಸಿದ್ದಾರೆ. ಇದನ್ನು ಖಂಡಿಸಿ ಡಿ.14ರಂದು (ಮಂಗಳವಾರ) ಬೆಳಗಾವಿ ಬಂದ್‌ಗೆ ತೀರ್ಮಾನಿಸಲಾಗಿದೆ’ ಎಂದು ಮುಖಂಡರಾದ ಮನೋಹರ ಕಿಣೇಕರ ಮತ್ತು ಶಿವಾಜಿ ಸುಂಠಕರ ತಿಳಿಸಿದರು. ಇದಕ್ಕೆ ಸಭಿಕರು ಸಹಮತ ವ್ಯಕ್ತಪಡಿಸಿ, ‘ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಕಾರವಾರ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು’ ಎಂದು ಘೋಷಣೆ ಕೂಗಿದರು.

ತಿಲಕವಾಡಿ ಪೊಲೀಸ್‌ ಠಾಣೆಗೆ ಮೆರವಣಿಗೆಯಲ್ಲಿ ತೆರಳಿ, ಕನ್ನಡ ಹೋರಾಟಗಾರರ ವಿರುದ್ಧ ದೂರು ದಾಖಲಿಸಿದರು. ಹೋರಾಟಗಾರ ಸಂಪತ್‌ಕುಮಾರ ವಿರುದ್ಧ ಕೊಲೆಯತ್ನ ಪ್ರಕರಣವೆಂದು ದೂರುದಾಖಲಿಸಿದ್ದಾರೆ ಎನ್ನಲಾಗಿದೆ. ಎಂಇಎಸ್‌ ಮುಖಂಡರ ವಿರುದ್ಧ ನಗರಪಾಲಿಕೆಯಿಂದಲೂ ದೂರು ದಾಖಲಾಗಿದೆ.

*

ಎಂಇಎಸ್ ಅಳವಡಿಸಿದ್ದ ವೇದಿಕೆಯನ್ನು ತೆರವುಗೊಳಿಸುವ ವೇಳೆ, ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ.
-ಲಕ್ಷ್ಮಿ ಸುಳಗೇಕರ, ಉಪ ಆಯುಕ್ತೆ ಮಹಾನಗರ ಪಾಲಿಕೆ, ಬೆಳಗಾವಿ

*

ಅಧಿವೇಶನ ನಡೆಯುತ್ತಿರುವುದರಿಂದ ಬಂದ್ ಕರೆ ವಾಪಸ್ ಪಡೆಯುವಂತೆ ಎಂಇಎಸ್ ನಾಯಕರ ಮನವೊಲಿಸುತ್ತೇವೆ. ಬಂದ್‌ಗೆ ಅವಕಾಶ ಕೊಡುವುದಿಲ್ಲ.
-ಡಾ.ಕೆ.ತ್ಯಾಗರಾಜನ್,ನಗರ ಪೊಲೀಸ್‌ ಆಯುಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.