ADVERTISEMENT

ಟ್ರ್ಯಾಕ್ಟರ್ ಅಪಘಾತ: ಮೃತರ ಕುಟುಂಬದವರಿಗೆ ₹5 ಲಕ್ಷ ಪರಿಹಾರಧನ ವಿತರಿಸಿದ ಶೆಟ್ಟರ್

ಬೋಗೂರ: ₹ 4 ಕೋಟಿಯಲ್ಲಿ ಹೊಸ ಸೇತುವೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 13:09 IST
Last Updated 16 ಫೆಬ್ರುವರಿ 2020, 13:09 IST
ಖಾನಾಪುರ ತಾಲ್ಲೂಕಿನ ಬೋಗೂರ ಗ್ರಾಮ ಸಂಪರ್ಕಿಸುವ ಬಾಂದಾರ ಹಾಗೂ ಸೇತುವೆಯ ತಡೆಗೋಡೆ ಮುರಿದಿರುವ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್ ಇಟ್ಟಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಭಾನುವಾರ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು
ಖಾನಾಪುರ ತಾಲ್ಲೂಕಿನ ಬೋಗೂರ ಗ್ರಾಮ ಸಂಪರ್ಕಿಸುವ ಬಾಂದಾರ ಹಾಗೂ ಸೇತುವೆಯ ತಡೆಗೋಡೆ ಮುರಿದಿರುವ ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಡ್ ಇಟ್ಟಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಭಾನುವಾರ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು   

ಬೆಳಗಾವಿ: ಅಪಘಾತದಲ್ಲಿ ಮೃತಪಟ್ಟಿದ್ದ ಖಾನಾಪುರ ತಾಲ್ಲೂಕಿನ ಬೋಗೂರ ಗ್ರಾಮದ 6 ಕೂಲಿ ಕಾರ್ಮಿಕರ ಕುಟುಂಬದವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಸರ್ಕಾರದ ವತಿಯಿಂದ ತಲಾ ₹ 5 ಐದು ಲಕ್ಷ ಪರಿಹಾರ ಚೆಕ್‌ ಅನ್ನು ಭಾನುವಾರ ವಿತರಿಸಿದರು.

ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಗ್ರಾಮದ ಬಳಿಯ ತಟ್ಟಿಹಳ್ಳ ಸೇತುವೆ ಮೇಲೆ ಫೆ‌.8ರಂದು ಸಂಭವಿಸಿದ್ದ ಟ್ರ್ಯಾಕ್ಟರ್ ಅಪಘಾತದಲ್ಲಿ 6 ಜನರು ಮೃತಪಟ್ಟು, 18 ಮಂದಿ ಗಾಯಗೊಂಡಿದ್ದರು. ಮೃತರಾದ ಅಶೋಕ ಫಕ್ಕೀರಪ್ಪ ಕೇದಾರಿ, ಶಾಂತವ್ವ ಹನಮಂತ ಅಳಗೋಡಿ, ಸಾವಿತ್ರಿ ಹುಣಶೀಕಟ್ಟಿ, ನಾಗವ್ವ ಮಾಟೊಳ್ಳೆ, ಚಂದ್ರಮ್ಮ ಹುಣಶೀಕಟ್ಟಿ ಹಾಗೂ ಶಾಂತವ್ವ ಜುಂಜೂರಿ ಅವರ ಕುಟುಂಬದ ಸದಸ್ಯರಿಗೆ ಚೆಕ್‌ಗಳನ್ನು ವಿತರಿಸಲಾಯಿತು.

ADVERTISEMENT

ಈ ವೇಳೆ ಮಾತನಾಡಿದ ಸಚಿವರು, ‘ಬೋಗೂರ ಗ್ರಾಮದ ತಟ್ಟಿಹಳ್ಳಕ್ಕೆ 49 ವರ್ಷಗಳ ಹಿಂದೆ ನಿರ್ಮಿಸಲಾದ ಹಳೆಯ ಬಾಂದಾರ ಮತ್ತು ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣಕ್ಕೆ ₹ 4 ಕೋಟಿ ಅಂದಾಜು ವೆಚ್ವದ ಯೋಜನೆ ಸಿದ್ಧಪಡಿಸಲಾಗಿದೆ. ಲೋಕೋಪಯೋಗಿ ಇಲಾಖೆ ಸಚಿವರ ಜತೆ ಚರ್ಚಿಸಿ ಆದಷ್ಟು ಬೇಗನೇ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು. ವಿಸ್ತರಣೆಯನ್ನೂ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಕೂಲಿಗೆ ತೆರಳುತ್ತಿರುವವರು ಸಾವಿಗೀಡಾಗಿರುವುದು ದುಃಖಕರ ಸಂಗತಿ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಅಂದೇ ಸೂಚಿಸಿದ್ದೆ. ಆ ಪ್ರಕಾರ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಹೋದ ಪ್ರಾಣವನ್ನು ತಂದುಕೊಡುವುದಕ್ಕೆ ಸಾಧ್ಯವಿಲ್ಲ. ಆದರೆ, ಮೃತರೆಲ್ಲರೂ ಕೂಲಿ ಮಾಡುತ್ತಿದ್ದವರೇ ಆಗಿದ್ದರಿಂದ ಪ್ರತಿ ಕುಟುಂಬಕ್ಕೂ ಗರಿಷ್ಠ ಪರಿಹಾರ ಮಂಜೂರು ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ. ಅವರು ತಕ್ಷಣವೇ ಪರಿಹಾರ ನೀಡಿದ್ದಾರೆ’ ಎಂದು ತಿಳಿಸಿದರು.

‘ಗಾಯಗೊಂಡಿರುವವರನ್ನು ಆಸ್ಪತ್ರೆಯಿಂದ ತರಾತುರಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಕೆಲವರು ತಿಳಿಸಿದ್ದಾರೆ. ಇದು ಸರಿಯಲ್ಲ. ಗಾಯಗೊಂಡಿರುವವರು ಬಯಸುವವರೆಗೂ ಆಸ್ಪತ್ರೆಯಲ್ಲೇ ಇರಲಿ. ನಂತರವಷ್ಟೇ ಬಿಡುಗಡೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ‘‌ಅಪಘಾತವಾದಾಗ ನಾಲ್ವರು ಸ್ಥಳದಲ್ಲಿ ಮೃತರಾದರೆ, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು. 18 ಮಂದಿ ಗಾಯಗೊಂಡಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣ ಮುಖ್ಯಮಂತ್ರಿಗಳು ಮೃತರ ಕುಟುಂಬಗಳಿಗೆ ಪರಿಹಾರ ಪ್ರಕಟಿಸಿದ್ದರು. ಗಾಯಗೊಂಡಿರುವವರು, ಶೀಘ್ರವೇ ಗುಣಮುಖರಾಗಲಿದ್ದಾರೆ’ ಎಂದು ತಿಳಿಸಿದರು.

ಇದೇ ವೇಳೆ ಹಲಗೇಕರ ಸಂಸ್ಥೆಯ ವತಿಯಿಂದ, ಮೃತರ ಪ್ರತಿ ಕುಟುಂಬಕ್ಕೂ ತಲಾ ₹ 10ಸಾವಿರ ಆರ್ಥಿಕ ನೆರವು ನೀಡಲಾಯಿತು.

ಇದಕ್ಕೂ ಮುನ್ನ ಸೇತುವೆ ಹಾಗೂ ಬಾಂದಾರವನ್ನು ಸಚಿವರು ಪರಿಶೀಲಿಸಿದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಎಸ್ಪಿ ಲಕ್ಷ್ಮಣ ನಿಂಬರಗಿ, ತಹಶೀಲ್ದಾರ್‌ ರೇಷ್ಮಾ ತಾಳಿಕೋಟೆ ಇದ್ದರು.

ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.