ಸಾವು
(ಪ್ರಾತಿನಿಧಿಕ ಚಿತ್ರ)
ಚಚಡಿ: ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಸೋಮವಾರ, ರಥೋತ್ಸವ ವೇಳೆ ರಥದ ಮೇಲಿನ ಬೆಳ್ಳಿಯ ನವಿಲು ಬಿದ್ದು ಶಿವಾನಂದ ರಾಜಕುಮಾರ ಸಾವಳಗಿ (13) ಎಂಬ ಬಾಲಕ ಮೃತಪಟ್ಟಿದ್ದಾನೆ.
ಪ್ರತಿ ವರ್ಷದ ವಾಡಿಕೆಯಂತೆ ಶ್ರಾವಣದ ಪ್ರಯುಕ್ತ ಸಂಗಮೇಶ್ವರ ರಥೋತ್ಸವಕ್ಕೆ ಸಿದ್ಧತೆಯಾಗಿತ್ತು. 30 ಅಡಿ ಎತ್ತರದ ರಥದ ಮೇಲಿನ ಕಳಸದ ಮೇಲೆ 5 ಕೆಜಿ ತೂಕದ ಬೆಳ್ಳಿಯ ನವಿಲು ಪ್ರತಿಷ್ಠಾಪಿಸಲಾಗಿತ್ತು. ಸಾವಿರ ವರ್ಷಗಳ ಇತಿಹಾಸಯುಳ್ಳ ಈ ಜಾತ್ರೆಯಲ್ಲಿ ಇದೇ ಮೊದಲ ಸಲ ಬೆಳ್ಳಿಯ ನವಿಲು ಪ್ರತಿಷ್ಠಾಪಿಸಲಾಗಿತ್ತು.
‘ರಥ ಸಂಚರಿಸಬೇಕಾದ ರಸ್ತೆ ಸಂಪೂರ್ಣ ತಗ್ಗು–ದಿನ್ನೆಗಳಿಂದ ಕೂಡಿದೆ. ದೇವಸ್ಥಾನದಿಂದ ತುಸು ದೂರ ಎಳೆದುಕೊಂಡು ತಂದ ಬಳಿಕ ರಥದ ಚಕ್ರಗಳು ತಗ್ಗಿನಲ್ಲಿ ಸಿಲುಕಿದವು. ಜನರು ಜೋರಾಗಿ ರಥ ಎಳೆದಾಗ, ಅತ್ತಿತ್ತ ಹೊರಳಾಡಿತು. ಆಗ ಕಳಸದ ಮೇಲಿನ ಬೆಳ್ಳಿಯ ನವಿಲು ಕಿತ್ತು ಕೆಳಗಡೆ ಇದ್ದ ಬಾಲಕನ ಮೇಲೆ ಬಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಬಾಲಕ ಕೊನೆಯುಸಿರೆಳೆದಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
ರಥೋತ್ಸವವನ್ನು ಅರ್ಧಕ್ಕೆ ನಿಲ್ಲಿಸಲಾಯಿತು ಎಂದು ಗ್ರಾಮದ ಮುಖಂಡರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.