ADVERTISEMENT

ಕೊರೊನಾ ಸೇನಾನಿಗಳಿಗೆ ತಿಂಗಳಿಂದ ‘ದಾಸೋಹ’

ಮೂಡಲಗಿಯಲ್ಲಿ ಗಮನಸೆಳೆದಿರುವ ಸೇವಾ ಕಾರ್ಯ

ಬಾಲಶೇಖರ ಬಂದಿ
Published 27 ಏಪ್ರಿಲ್ 2020, 12:01 IST
Last Updated 27 ಏಪ್ರಿಲ್ 2020, 12:01 IST
ಮೂಡಲಗಿಯಲ್ಲಿ ಕೊರೊನಾ ಯೋಧರಿಗೆ ಅನ್ನದಾಸೋಹ ಮಾಡಿದ ಚಿತ್ರ (ಸಾಂದರ್ಭಿಕ ಚಿತ್ರ)
ಮೂಡಲಗಿಯಲ್ಲಿ ಕೊರೊನಾ ಯೋಧರಿಗೆ ಅನ್ನದಾಸೋಹ ಮಾಡಿದ ಚಿತ್ರ (ಸಾಂದರ್ಭಿಕ ಚಿತ್ರ)   

ಮೂಡಲಗಿ: ಕೊರೊನಾ ವೈರಾಣು ಸೋಂಕು ಹರಡದಂತೆ ನಿರಂತವಾಗಿ ಶ್ರಮಿಸುತ್ತಿರುವ ಸೇನಾನಿಗಳಿಗೆ ಇಲ್ಲಿ ನಿತ್ಯ ಅನ್ನದಾಸೋಹ ಮಾಡುವ ಮೂಲಕ ಇಲ್ಲಿಯ ದಾಸೋಹಿಗಳು ಗಮನಸೆಳೆದಿದ್ದಾರೆ.

ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು ಮನೆಗಳಿಗೆ ಹೋಗುವಷ್ಟು ಸಮಯ ಇರುವುದಿಲ್ಲ. ಅಲ್ಲದೆ ಸೋಂಕು ಹರಡುವ ಭೀತಿಯಿಂದಾಗಿ ಮನೆಗೆ ಹೋಗುವುದು ಸಹ ಕಷ್ಟವಾಗುತ್ತದೆ. ಜೀವದ ಹಂಗು ಬಿಟ್ಟು ಸಮಾಜಕ್ಕಾಗಿ ಹೋರಾಡುತ್ತಿರುವ ಅವರಿಗೆ ಉಪಹಾರವನ್ನು ಒಬ್ಬರು, ಮಧ್ಯಾಹ್ನದ ಊಟದ ಪ್ರಾಯೋಜಕತ್ವವನ್ನು ಇನ್ನೊಬ್ಬರು ವಹಿಸಿಕೊಳ್ಳುವ ಮೂಲಕ ಇಲ್ಲಿನ ಜನರು ತಿಂಗಳಿಂದ ಸೇವೆ ಮಾಡಿಕೊಂಡು ಬಂದಿದ್ದಾರೆ. ಪುರಸಭೆ ಅವರಣದಲ್ಲಿ ನಿತ್ಯ 150ಕ್ಕೂ ಹೆಚ್ಚು ಮಂದಿಗೆ ಅನ್ನದಾಸೋಹ ನಡೆಯುತ್ತಿದೆ.

ಚಪಾತಿ, ಪೂರಿ, ಖಡಕ್‌ ರೊಟ್ಟಿ, ಎರಡು ಪಲ್ಯ, ಸಿಹಿ, ಅನ್ನ ಸಾರು, ಮಜ್ಜಿಗೆಯನ್ನು ಬಡಿಸಲಾಗುತ್ತಿದೆ. ಜಾತಿ, ಧರ್ಮ ಎನ್ನದೆ ನಾ ಮುಂದು, ತಾ ಮುಂದು ಎಂದು ದಾಸೋಹ ಸೇವೆಗೆ ಇಲ್ಲಿನವರು ಅಣಿಯಾಗುತ್ತಿದ್ದಾರೆ. ಸಂಘ, ಸಂಸ್ಥೆಯವರು, ದೇವಸ್ಥಾನ ಸಮಿತಿಯವರು ವೈಯಕ್ತಿಕವಾಗಿ ದಾಸೋಹ ಸೇವೆ ಸಲ್ಲಿಸಿ ಸಂತೃಪ್ತಿ ಕಾಣುತ್ತಿದ್ದಾರೆ. ಅಂತರ ಹಾಗೂ ಸ್ವಚ್ಛತೆ ಕಾಯ್ದುಕೊಂಡು ದಾಸೋಹ ಕಾರ್ಯ ನಡೆಯುತ್ತಿದೆ.

ADVERTISEMENT

‘ಮುಂದಿನ ಒಂದು ವಾರದವರೆಗೆ ಅನ್ನದಾಸೋಹಕ್ಕೆ ಜನರು ಹೆಸರು ಬರೆಸಿದ್ದಾರೆ’ ಎಂದು ಪಿಎಸ್ಐ ಮಲ್ಲಿಕಾರ್ಜುನ ಸಿಂಧೂರ ಅವರು ದಾಸೋಹಿಗಳ ಪಟ್ಟಿಯನ್ನು ತೋರಿಸಿದರು. ಅನ್ನದಾನದ ಮಹತ್ವವನ್ನು ಇಲ್ಲಿಯ ಜನರು ಮನಗಂಡಿದ್ದಾರೆ ಎಂದರು.

ನೀರು ಸೇವೆ: ಇಲ್ಲಿಯ ಸಿದ್ದ ಉಡುಪು ವರ್ತಕ ಮೋಹನ ಜೈನ್ ತಿಂಗಳಿಂದ ಕೊರೊನಾ ಸೇನಾನಿಗಳಿಗೆ ಶುದ್ಧ ನೀರನ್ನು ವಿತರಿಸುವ ಮೂಲಕ ತೆರೆಮರೆಯಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಮೋಹನ ತಮ್ಮ ಮಗನೊಂದಿಗೆ ಸ್ಕೂಟರ್‌ನಲ್ಲಿ ಸಂಚರಿಸಿ ಅಲ್ಲಲ್ಲಿ ಕರ್ತವ್ಯ ನಿರತವಾಗಿರುವ ಪೊಲೀಸರಿಗೆ ಅವರಿದ್ದ ಸ್ಥಳಕ್ಕೆ ಹೋಗಿ ಶುದ್ಧ ನೀರಿನ ಬಾಟಲಿ ಕೊಡುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಅವರು ಈ ಸೇವೆ ಮಾಡುತ್ತಿದ್ದಾರೆ. ‘ಸೇವೆ ಮಾಡುವುದರಲ್ಲಿ ತೃಪ್ತಿ ಇದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.