ಹುಕ್ಕೇರಿ: ತಾಲ್ಲೂಕಿನ ಬೆಲ್ಲದ ಬಾಗೇವಾಡಿ ವಿಶ್ವರಾಜ ಸಕ್ಕರೆ ಕಾರ್ಖಾನೆ ಆಡಳಿತ ಕಚೇರಿ ಮುಂಭಾಗದಲ್ಲಿ ಉಮೇಶ ಕತ್ತಿ ಕಂಚಿನ ಪ್ರತಿಮೆಯನ್ನು ಕುಟುಂಬಸ್ಥರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಬುಧವಾರ ಅನಾವರಣಗೊಳಿಸಲಾಯಿತು.
ರಾಜ್ಯದ ವಿಧಾನಸಭೆಯಲ್ಲಿಯೇ ಅತ್ಯಂತ ಹಿರಿಯ ಸದಸ್ಯ ಎಂಬ ಹಿರಿಮೆಗೆ ಪಾತ್ರವಾಗಿದ್ದ ಉಮೇಶ ಕತ್ತಿ ಅವರು ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಮತ್ತು ಪ್ರಾದೇಶಿಕ ಅಸಮಾನತೆ ಎದುರಾದ ವೇಳೆ ಯಾವುದೇ ಮುಲಾಜಿಲ್ಲದೇ ಗಟ್ಟಿ ಧ್ವನಿ ಎತ್ತುತ್ತಿದ್ದರು. ₹25 ಲಕ್ಷ ವೆಚ್ಚದ ಸುಮಾರು 11 ಅಡಿ ಎತ್ತರದ ಪ್ರತಿಮೆ ಅವರ ಜೀವಂತಿಕೆಗೆ ಸಾಕ್ಷಿಯಾಯಿತು.
ತಂದೆ ಶಾಸಕ ವಿಶ್ವನಾಥ ಕತ್ತಿ ನಿಧನದ ನಂತರ ಕಿರಿಯ ವಯಸ್ಸಿನಲ್ಲೇ ವಿಧಾನಸಭೆ ಪ್ರವೇಶಿಸಿದ ಅವರು, ಎದುರಿಸಿದ 9 ಚುನಾವಣೆಗಳ ಪೈಕಿ ಎಂಟರಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದರು. ಸರ್ಕಾರದಲ್ಲಿ ವಿವಿಧ ಸಚಿವ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು.
ಜನಪರ ನಾಯಕ: ‘ಕ್ಷೇತ್ರದ ಜನರೊಂದಿಗೆ ನಾಲ್ಕು ದಶಕಗಳ ಅವಿನಾಭಾವ ನಂಟು ಹೊಂದಿದ್ದ ದಿ.ಉಮೇಶ ಕತ್ತಿ ತಮ್ಮ ಸಾಧನೆಗಳಿಂದಲೇ ಜನಮಾನಸದ ಮನೆ-ಮನಗಳಲ್ಲಿ ನೆಲೆಯೂರಿದ್ದಾರೆ’ ಎಂದು ವಿರಕ್ತಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ಶಾಸಕ ನಿಖಿಲ್ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ, ಶೀಲಾ ಉಮೇಶ ಕತ್ತಿ, ಜಯಶ್ರೀ ರಮೇಶ ಕತ್ತಿ, ಶ್ರುತಿ ನಿಖಿಲ್ ಕತ್ತಿ, ಸ್ನೇಹಾ ನಿತೀನದೇವ್, ಮುಖಂಡರಾದ ಸಿದ್ಧಲಿಂಗಯ್ಯ ಕಡಹಟ್ಟಿ, ಆರ್.ಟಿ. ಶಿರಾಳಕರ, ಅಪ್ಪಾಸಾಹೇಬ ಖೆಮಲಾಪುರೆ, ಬಸವರಾಜ ಬಂಬಲವಾಡಿ, ಅಶೋಕ ಬೆಲ್ಲದ, ಮುರುಗೇಶ ಕತ್ತಿ, ಪಿ.ಡಿ. ಚೌಗಲಾ, ವಿಎಸ್‌ಎಲ್ ಕಾರ್ಖಾನೆಯ ಮಲ್ಲಿಕಾರ್ಜುನ ಪೂಜೇರಿ, ಸಿದ್ದು ಬಾನಿ, ಮುಖೇಶಕುಮಾರ, ಎಸ್.ಎಸ್. ಕುಲಕರ್ಣಿ, ಎಸ್.ಬಿ. ಪಾಟೀಲ, ಮುಖ್ಯ ಶಿಕ್ಷಕ ಶ್ರೀಶೈಲ್ ಹಿರೇಮಠ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.