ADVERTISEMENT

ಮುಖ್ಯಮಂತ್ರಿ ಬದಲಾವಣೆ ಹಗಲುಗನಸು: ಶಂಕರಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 7:59 IST
Last Updated 26 ಅಕ್ಟೋಬರ್ 2020, 7:59 IST
ಶಂಕರಗೌಡ ಪಾಟೀಲ
ಶಂಕರಗೌಡ ಪಾಟೀಲ   

ಬೆಳಗಾವಿ: ‘ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅವರನ್ನು ಬದಲಾವಣೆ ಮಾಡಲಾಗುತ್ತದೆ ಎನ್ನುವುದು ಕೆಲವರ ಹಗಲುಗನಸಷ್ಟೆ’ ಎಂದು ನವದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಹೇಳಿದರು.

‘ಅವರನ್ನು ಆ ಸ್ಥಾನದಿಂದ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಇದನ್ನು ಪಕ್ಷದ ವರಿಷ್ಠರು ಕೂಡ ಸ್ಪಷ್ಟಪಡಿಸಿದ್ದಾರೆ. ಬರುವ ವಿಧಾನಸಭೆ ಚುನಾವಣೆಯನ್ನೂ ಅವರ ನೇತೃತ್ವದಲ್ಲಿಯೇ ನಡೆಸಲಾಗುವುದು’ ಎಂದು ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಯಡಿಯೂರ‍ಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರ ವಿರುದ್ಧ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.

ADVERTISEMENT

‘ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿ.ಸುರೇಶ ಅಂಗಡಿ ಅಂಗಡಿ ಅವರ ಕುಟುಂಬದವರಿಗೇ ಟಿಕೆಟ್‌ ಕೊಡಬೇಕು ಎಂದು ವರಿಷ್ಠರ ಬಳಿ ಅಭಿಪ್ರಾಯ ತಿಳಿಸಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರೂ ಇದನ್ನು ಹೇಳಿದ್ದಾರೆ. ಮುಖ್ಯಮಂತ್ರಿಗೂ ಈ ನಿಟ್ಟಿನಲ್ಲಿಯೇ ಅಪೇಕ್ಷೆ ಇದೆ. ನಾನು ಟಿಕೆಟ್‌ ಆಕಾಂಕ್ಷಿಯಲ್ಲ; ಅಪೇಕ್ಷೆಯೂ ಇಲ್ಲ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧವಾಗಿದ್ದೇವೆ’ ಎಂದರು.

‘ಕಾಂಗ್ರೆಸ್‍ನ ಐವರು ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ’ ಎಂಬ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸವದಿ ಹೇಳಿದ್ದು ಸತ್ಯಕ್ಕೆ ಸಮೀಪವಾಗಿದೆ. ಕಾಂಗ್ರೆಸ್ ಸೇರಿದಂತೆ ಬೇರೆ ಬೇರೆ ಪಕ್ಷಗಳ ನಾಯಕರೂ ಬಿಜೆಪಿ ಸೇರಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.