ADVERTISEMENT

ನೋಟುಗಳಂತೆ ಕಾಣುವ ಬಂಡಲ್ ತಯಾರಿಕೆ: ನಾಲ್ವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 15:20 IST
Last Updated 7 ಆಗಸ್ಟ್ 2020, 15:20 IST
ಖೋಟಾ ನೋಟಿನ ಬಂಡಲ್‌ಗಳನ್ನು ತಯಾರಿಸಿದ್ದ ಆರೋಪದ ಮೇಲೆ ನಾಲ್ವರನ್ನು ಘಟಪ್ರಭಾ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ
ಖೋಟಾ ನೋಟಿನ ಬಂಡಲ್‌ಗಳನ್ನು ತಯಾರಿಸಿದ್ದ ಆರೋಪದ ಮೇಲೆ ನಾಲ್ವರನ್ನು ಘಟಪ್ರಭಾ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ   

ಬೆಳಗಾವಿ: ಖೋಟಾ ನೋಟಿನ ಬಂಡಲ್‌ಗಳನ್ನು ಸಿದ್ಧಪಡಿಸಿದ್ದ ಹಾಗೂ ಜನರಿಗೆ ಮೋಸ ಮಾಡಲು ಯೋಜಿಸಿದ್ದ ಆರೋಪದ ಮೇಲೆ ನಾಲ್ವರನ್ನು ಜಿಲ್ಲೆಯ ಘಟಪ್ರಭಾ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಗೋಕಾಕ ತಾಲ್ಲೂಕು ದೂಪದಾಳದ ಮಹಮದಇಸಾಕ ದೇಸಾಯಿ, ಮುನಾಫ ರಫೀಕ, ರಾಯಬಾಗ ತಾಲ್ಲೂಕು ಸಿದ್ದಾಪೂರದ ಗುಂಡು ಸದಾಶಿವ ಪಾಟೀಲ ಮತ್ತು ಗೋಕಾಕದ ಆದಿಜಾಂಬವ ನಗರದ ಮಲ್ಲಿಕಾರ್ಜುನ ಕನ್ಮಡ್ಡಿ ಬಂಧಿತರು. ಅವರಿಂದ ಪೇಪಲ್‌ ಬಂಡಲ್‌ಗಳು, ತಲಾ 2 ಕಾರ್‌ ಹಾಗೂ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

‘ಇವರು ಎರಡೂ ಬದಿಯಲ್ಲಿ ₹ 500 ಮುಖಬೆಲೆಯ ಅಸಲಿ ನೋಟುಗಳನ್ನು ಹಾಕಿ ಒಳಗಡೆ ಕಾಗದದ ಪೇಪರ್‌ಗಳನ್ನಿಟ್ಟು ನೋಟಿನ ಬಂಡಲ್‌ಗಳಂತೆ ಕಾಣುವಂತೆ ತಯಾರಿಸಿದ್ದರು. ಅವು ಖೋಟಾ ನೋಟುಗಳೆಂದು ಹೇಳಿ ₹ 1 ಲಕ್ಷ ಅಸಲಿ ನೋಟುಗಳನ್ನು ಪಡೆದುಕೊಂಡು ತಮ್ಮ ಬಳಿ ಇರುವ ಬಂಡಲ್‌ಗಳನ್ನು ಯಾರಿಗೋ ಕೊಡಲು ಯೋಜಿಸಿದ್ದರು. ದೂಪದಾಳದ ಮಹಮದಇಸಾಕ ಅವರ ಮನೆಯಲ್ಲಿ ಬಂಡಲ್‌ಗಳನ್ನು ತಯಾರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪಿಎಸ್‌ಐ ಎಚ್‌.ವೈ. ಬಾಲದಂಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.