
ಬೆಳಗಾವಿ: ‘ಕಾಂಗ್ರೆಸ್ಸಿಗರು ಯಾವತ್ತೂ ಕರ್ನಾಟಕದ ಪರವಾಗಿ ಕೆಲಸ ಮಾಡಿಲ್ಲ. ನಿಜವಾಗಿ ಕೆಲಸ ಮಾಡಿದ್ದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಗ್ಯಾರಂಟಿ ಯೋಜನೆಗಳನ್ನು ಏಕೆ ಜಾರಿಗೆ ತರಲಾಯಿತು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ಇಲ್ಲಿ ಬಿಜೆಪಿ ಬೆಳಗಾವಿ ದಕ್ಷಿಣ ಘಟಕ ಬುಧವಾರ ಆಯೋಜಿಸಿದ್ದ ಕೇಂದ್ರ ಬಜೆಟ್ ಕುರಿತು ಮಹಿಳೆಯರೊಂದಿಗೆ ಸಂವಾದ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಕೋರೆ ಅವರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ದಶಕಗಳವರೆಗೆ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಒಂದುವೇಳೆ ಉತ್ತಮ ಕೆಲಸ ಮಾಡಿದ್ದರೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಅಗತ್ಯವೇನಿತ್ತು. ಇದಕ್ಕೆ ಉತ್ತರ ಕೊಡಬೇಕು’ ಎಂದರು.
‘ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಒಂದೇ ಸುಳ್ಳನ್ನು ನೂರು ಬಾರಿ ಹೇಳುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಇದರ ಬದಲಿಗೆ ಕಾಂಗ್ರೆಸ್ ಪಕ್ಷ ಮಾಡಿರುವ ಸಾಧನೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಬೇಕು’ ಎಂದು ಆಗ್ರಹಿಸಿದರು.
‘ಕಳೆದ 12 ವರ್ಷಗಳಿಂದ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಕೆಲಸವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನಾನಾ ಹಗರಣ ನಡೆಯುತ್ತಿದ್ದವು. ದೇಶದ ಆರ್ಥಿಕತೆ ಹಳ್ಳ ಹಿಡಿದಿತ್ತು. ಆದರೆ, ಮೋದಿ ನೇತೃತ್ವದಲ್ಲಿ ದೇಶದ ಆರ್ಥಿಕತೆ ಸುಧಾರಿಸಿದೆ’ ಎಂದರು.
ರಾಷ್ಟ್ರದ ಬೆಳವಣಿಗೆಗೆ ದಾರಿ: ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಾರಿ ಮಂಡಿಸಿದ ಬಜೆಟ್ ರಾಷ್ಟ್ರದ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ, ದೇಶದ ಪರಿಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಮೋದಿ ಸರ್ಕಾರದ ನೀತಿಗಳು ರೈತರು, ಬಡವರು, ಯುವಕರು ಮತ್ತು ಮಹಿಳೆಯರ ಸುತ್ತ ಕೇಂದ್ರಿಕೃತವಾಗಿವೆ’ ಎಂದರು.
‘ರಾಜ್ಯದ ತೆರಿಗೆ ಪಾಲಿಗಾಗಿ ನವದೆಹಲಿಯಲ್ಲಿ ಸಿದ್ದರಾಮಯ್ಯ ಪ್ರತಿಭಟಿಸಿದ್ದರು. ಆದರೆ, ರಾಜ್ಯ ಸರ್ಕಾರದಲ್ಲಿ ಅವರೇ ಹಣಕಾಸು ಸಚಿವರಾಗಿರುವ ಕಾರಣ ರಾಜ್ಯದಲ್ಲಿ ಹಣಕಾಸು ವ್ಯವಸ್ಥೆ ಹೇಗೆ ನಡೆಯುತ್ತಿದೆ ಎಂದು ಅವರು ತಿಳಿದುಕೊಳ್ಳಬೇಕು’ ಎಂದು ಹೇಳಿದರು.
ಬಿಜೆಪಿ ಮಹಾರಾಷ್ಟ್ರ ವಕ್ತಾರ ಕೇಶವ ಉಪಾಧ್ಯೆ ಮಾತನಾಡಿದರು. ಶಾಸಕ ಅಭಯ ಪಾಟೀಲ, ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಅರವಿಂದ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ, ಅರುಣ ಶಹಾಪುರ, ಪಕ್ಷದ ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಬೆಳಗಾವಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ಇದ್ದರು.
ನನಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವ ಶ್ರೇಯ ಇಡೀ ಬೆಳಗಾವಿ ಜಿಲ್ಲೆಯ ಜನರಿಗೆ ಸಲ್ಲುತ್ತದೆ. ಸಮಾಜಮುಖಿಯಾಗಿ ಕೆಲಸ ಮಾಡಲು ನೀವೆಲ್ಲರೂ ಆಶೀರ್ವಾದ ಮಾಡಿದ್ದೀರಿ–ಪ್ರಭಾಕರ ಕೋರೆ, ರಾಜ್ಯಸಭೆ ಮಾಜಿ ಸದಸ್ಯ
ಪ್ರಭಾಕರ ಕೋರೆ ಅವರನ್ನು ಮಹಾನಗರ ಪಾಲಿಕೆ ಹಾಗೂ ಬಿಜೆಪಿಯಿಂದ ಸತ್ಕರಿಸಲಾಗುವುದು. ಅವರನ್ನು ರಾಜ್ಯಪಾಲರಾಗಿ ಕಾಣುವ ದಿನ ಬೇಗ ಬರಲಿ–ಅಭಯ ಪಾಟೀಲ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.