ADVERTISEMENT

ನುಡಿದಂತೆ ನಡೆದವರನ್ನು ಬೆಂಬಲಿಸಿ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 12:29 IST
Last Updated 17 ಏಪ್ರಿಲ್ 2019, 12:29 IST
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ ಗ್ರಾಮೀಣ ಕ್ಷೇತ್ರದಲ್ಲಿ ಮತ ಯಾಚಿಸಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಇದ್ದಾರೆ
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ ಗ್ರಾಮೀಣ ಕ್ಷೇತ್ರದಲ್ಲಿ ಮತ ಯಾಚಿಸಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಇದ್ದಾರೆ   

ಬೆಳಗಾವಿ: ‘ಈ ಲೋಕಸಭಾ ಚುನಾವಣೆ ನನ್ನ ಗೌರವದ ಪ್ರಶ್ನೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ ಅವರನ್ನು ಗೆಲ್ಲಿಸಬೇಕು‌’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕೋರಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ ಅವರು, ‘ನುಡಿದಂತೆ ನಡೆದಿದ್ದೇನೆ. ನೀಡಿದ್ದ ಭರವಸೆಗಳನ್ನು ಅಲ್ಪಾವಧಿಯಲ್ಲಿಯೇ ಈಡೇರಿಸಿದ್ದೇನೆ. ಗ್ರಾಮೀಣ ಕ್ಷೇತ್ರದ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಲು ಶಕ್ತಿ ಕೊಡಬೇಕು‌’ ಜನರಲ್ಲಿ ಮನವಿ ಮಾಡಿದರು.

‘ಸಂಸದ ಸುರೇಶ ಅಂಗಡಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಏನೂ ಮಾಡಲಿಲ್ಲ. ಬೆಳಗಾವಿಗೆ ಬರಬೇಕಾಗಿದ್ದ ಐಐಐಟಿ ಮತ್ತು ಉಡಾನ್ ಯೋಜನೆಯನ್ನು ಹುಬ್ಬಳ್ಳಿಗೆ ಮಂಜೂರು ಮಾಡಿಸಿ ಎಂದು ಧಾರವಾಡದ ಸಂಸದ ಪ್ರಹ್ಲಾದ ಜೋಶಿ ಅವರೊಂದಿಗೆ ಕೇಂದ್ರ ಮಂತ್ರಿಗಳನ್ನು ಭೇಟಿಯಾಗಿ ಮನವಿ ಅರ್ಪಿಸಿರುವ ಅವರು, ಜಿಲ್ಲೆಯ ಜನರಿಗೆ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಕ್ಷೇತ್ರದ ಜನ ಅವರಿಗೆ ಹದಿನೈದು ವರ್ಷ ಅಧಿಕಾರ ನೀಡಿದ್ದಾರೆ. ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಒಬ್ಬ ಯುವಕನಿಗೂ ಉದ್ಯೋಗ ಕೊಡಿಸಲಿಲ್ಲ. ರೈತರ ಸಾಲ ಮನ್ನಾ ಮಾಡಿ, ಕಳಸಾ ಬಂಡೂರಿ ನಾಲಾ ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ತೊಂದರೆಗಳನ್ನು ಬಗೆಹರಿಸಿ ಎಂದು ಸಂಸತ್ತಿನಲ್ಲಿ ದನಿ ಎತ್ತಲಿಲ್ಲ. ಅವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಬೇಕು’ ಎಂದರು.

ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ, ‘ಸೇವೆಗೆ ಒಮ್ಮೆ ಅವಕಾಶ ಕೊಡಿ. ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೆ ರೈಲು ಸಂಪರ್ಕ, ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ, ಕ್ಷೇತ್ರದಲ್ಲಿ ಕೈಗಾರಿಕಳ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇನೆ. ಕಳಸಾ ಬಂಡೂರಿ ಯೋಜನೆ ಕುರಿತು ಸಂಸತ್ತಿನಲ್ಲಿ ದನಿ ಎತ್ತುತ್ತೇನೆ‌’ ಎಂದು ಭರವಸೆ ನೀಡಿದರು.

ಮುಖಂಡ ಯುವರಾಜ ಕದಂ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.