ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಸಿಬ್ಬಂದಿ, ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಕುಳಿತಿದ್ದಾರೆ. ಪ್ರತಿಯೊಂದು ಕಾಗದಕ್ಕೂ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಇದಕ್ಕೆ ಯಾರು ಹೊಣೆ... ಎಂಬ ಮಾತುಗಳು ಮಹಾನಗರ ಪಾಲಿಕೆಯಲ್ಲಿ ಗುರುವಾರ ನಡೆದ ಪರಿಷತ್ ಸಭೆಯಲ್ಲಿ ಪ್ರತಿಧ್ವನಿಸಿದವು. ಇದರ ಫಲವಾಗಿ ಇ ಖಾತೆ ವಿಲೇವಾರಿಗಾಗಿ ವಿಶೇಷ ಅಭಿಯಾನ ನಡೆಸುವ ಕುರಿತೂ ನಿರ್ಧಾರ ಕೈಗೊಳ್ಳಲಾಯಿತು.
ಇ–ಖಾತೆ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ವಿಳಂಬವಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ಕೆಲ ಸದಸ್ಯರು ತೀವ್ರ ತರಾಟೆ ತೆಗೆದುಕೊಂಡರು.
‘ನಗರದಲ್ಲಿನ ಇ–ಖಾತೆ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಜನರನ್ನು ಶೋಷಿಸಲಾಗುತ್ತಿದೆ. ₹25 ಸರ್ಕಾರಿ ಶುಲ್ಕವಿದ್ದರೂ, ಏಜೆಂಟರು ಹಾಗೂ ಕೆಲವು ಅಧಿಕಾರಿಗಳು ಹೆಚ್ಚು ಹಣ ಸಂಗ್ರಹಿಸುತ್ತಿದ್ದಾರೆ’ ಎಂದೂ ಕಿಡಿ ಕಾರಿದರು.
ಶಾಸಕ ಅಭಯ ಪಾಟೀಲ, ‘ನಗರದಲ್ಲಿನ ಆಸ್ತಿಗಳಿಗೆ ಇ-ಖಾತಾ ಪ್ರಮಾಣಪತ್ರ ನೀಡಲು ಏಜೆಂಟರು ಮತ್ತು ಪಾಲಿಕೆ ಕೆಲವು ಅಧಿಕಾರಿಗಳು ಮಾಲೀಕರನ್ನು ಶೋಷಿಸುತ್ತಿದ್ದಾರೆ. ₹5 ಸಾವಿರದಿಂದ ₹15 ಸಾವಿರ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ವಿದೇಶಕ್ಕೆ ಹೋಗಲು ಟಿಕೆಟ್ ಬುಕ್ ಮಾಡಿದ್ದ ಒಬ್ಬ ಅನಿವಾಸಿ ಭಾರತೀಯನಿಂದ ₹70 ಸಾವಿರಕ್ಕೂ ಅಧಿಕ ಮೊತ್ತ ಪಡೆದಿದ್ದಾರೆ’ ಎಂದರು.
‘ಇ–ಖಾತೆ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ಏಜೆಂಟರು ಮತ್ತು ಕೆಲವು ಅಧಿಕಾರಿಗಳು ಜನರನ್ನು ಶೋಷಣೆ ಮಾಡಿ, ಶಾಸಕರು ಮತ್ತು ಪಾಲಿಕೆ ಸದಸ್ಯರ ಹೆಸರಿಗೆ ಕಳಂಕ ತರುತ್ತಿದ್ದಾರೆ. ಹಾಗಾಗಿ ಏಜೆಂಟರ ಹಾವಳಿ ತಡೆಯಲು ಕ್ರಮ ಕೈಗೊಳ್ಳಬೇಕು. ತ್ವರಿತವಾಗಿ ಅರ್ಜಿಗಳನ್ನು ವಿಲೇವಾರಿಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ ನಂತರ, ಇ-ಖಾತೆ ಅರ್ಜಿಗಳನ್ನು ವಿಲೇವಾರಿ ಮಾಡಲು ವಿಶೇಷ ಅಭಿಯಾನ ನಡೆಸಲು ನಿರ್ಧರಿಸಲಾಯಿತು.
ಸದಸ್ಯ ಶಂಕರಗೌಡ ಪಾಟೀಲ, ‘ವಾರ್ಡ್ ಸಂಖ್ಯೆ 7ರಲ್ಲಿನ ಹಲವು ಬಹುಮಹಡಿ ಕಟ್ಟಡಗಳು ಕಟ್ಟಡ ಅನುಮತಿ ಮಾರ್ಗಸೂಚಿ ಉಲ್ಲಂಘಿಸಿವೆ. ಚರಂಡಿ ಅತಿಕ್ರಮಿಸಿದ್ದು, ಸೆಟ್‌ಬ್ಯಾಕ್ ನಿಯಮ ಪಾಲಿಸಿಲ್ಲ. ಆದರೆ, ಸಂಬಂಧಿತ ಅಧಿಕಾರಿಗಳು ಅಂಥ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ನಿರ್ಮಾಣ ಹಂತದಲ್ಲಿದ್ದಾಗ ಕಟ್ಟಡಗಳನ್ನು ಪರಿಶೀಲಿಸಿಲ್ಲ’ ಎಂದು ಆರೋಪಿಸಿದರು.
ಮತ್ತೊಬ್ಬ ಸದಸ್ಯ ರಾಜಶೇಖರ ಡೋಣಿ, ‘ಪಾಲಿಕೆ ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶಗಳನ್ನು ಉಲ್ಲಂಘಿಸಿದ್ದಾರೆ. ವಿದ್ಯುತ್ ಸರಬರಾಜು ಮತ್ತು ಇತರೆ ಸೌಲಭ್ಯ ಪಡೆಯಲು ಹೊಸ ಕಟ್ಟಡಗಳನ್ನು ಹಳೆಯ ಕಟ್ಟಡಗಳಾಗಿ ತೋರಿಸಲಾಗಿದೆ. ಈ ಕಟ್ಟಡಗಳಲ್ಲಿ ಹಲವು ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ಹೊಂದಿಲ್ಲ’ ಎಂದರು.
‘ಸಣ್ಣ ನಿವೇಶನಗಳಲ್ಲಿ ಮನೆ ಕಟ್ಟುವ ಜನರಿಗೆ ಕಿರುಕುಳ ನೀಡುವ ಅಧಿಕಾರಿಗಳು, ಕಟ್ಟಡ ಅನುಮತಿ ನಿಯಮ ಉಲ್ಲಂಘಿಸುವ ಅಪಾರ್ಟ್‌ಮೆಂಟ್‌ಗಳ ತಪಾಸಣೆ ಮಾಡುವುದಿಲ್ಲ. ಅನೇಕ ಅಪಾರ್ಟ್‌ಮೆಂಟ್‌ಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಸಣ್ಣ ಜಾಗದಲ್ಲಿ ಮನೆ ಕಟ್ಟುತ್ತಿರುವ ಬಡವರನ್ನು ಹಿಂಸಿಸುವ ಬದಲು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅಭಯ ಪಾಟೀಲ ಒತ್ತಾಯಿಸಿದರು.
ಪಟ್ಟಣ ಯೋಜನಾ ಅಧಿಕಾರಿ ವಹೀದ್ ಅಖ್ತರ್ ಇದಕ್ಕೆ ಸಮಜಾಯಿಷಿ ನೀಡಲು ಮುಂದಾದರು. ಆದರೆ, ಸರಿಯಾದ ಕಾರಣ ನೀಡದಿದ್ದಾಗ ಸದಸ್ಯರು ತರಾಟೆಗೆ ತೆಗೆದುಕೊಂಡರು.
‘ಪಾಲಿಕೆ ತನಗೆ ಬರಬೇಕಿದ್ದ ಆದಾಯ ಸಂಗ್ರಹಿಸುವಲ್ಲಿ ವಿಫಲವಾಗಿದೆ. ಹಲವರು ದೊಡ್ಡ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಅದನ್ನು ವಸೂಲಿ ಮಾಡದಿದ್ದರೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಆಡಳಿತ ಪಕ್ಷದ ಸದಸ್ಯರಾದ ಹನುಮಂತ ಕೊಂಗಾಲಿ ಮತ್ತು ರವಿ ಧೋತ್ರೆ ಎಚ್ಚರಿಕೆ ಕೊಟ್ಟರು.
ಶಾಸಕ ಆಸಿಫ್ ಸೇಠ್, ಮೇಯರ್ ಮಂಗೇಶ ಪವಾರ, ಉಪ ಮೇಯರ್ ವಾಣಿ ವಿಲಾಸ ಜೋಶಿ, ಆಯುಕ್ತೆ ಬಿ.ಶುಭ ಹಾಗೂ ಅಧಿಕಾರಿಗಳು ಚರ್ಚೆಯಲ್ಲಿದ್ದರು.
‘ಸದಸ್ಯತ್ವ ರದ್ದುಪಡಿಸದಿದ್ದರೆ ಸೂಪರ್‌ಸೀಡ್‌ಗಾಗಿ ಪ್ರತಿಭಟನೆ’:
ಎಂಇಎಸ್ ಬೆಂಬಲಿತ ಸದಸ್ಯ ರವಿ ಸಾಳುಂಕೆ ಅವರು ಮರಾಠಿಯಲ್ಲಿ ನಡಾವಳಿ ಕೇಳಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಪಾಲಿಕೆ ಆವರಣದಲ್ಲಿ ಪ್ರತಿಭಟಿಸಿದರು. ‘ರವಿ ಸಾಳುಂಕೆ ನಡೆ ಖಂಡನೀಯ. ಅವರ ಸದಸ್ಯತ್ವ ರದ್ದುಪಡಿಸಬೇಕು. ಇಲ್ಲದಿದ್ದರೆ ಪಾಲಿಕೆ ಸೂಪರ್‌ಸೀಡ್‌ಗಾಗಿ ಹೋರಾಡಬೇಕಾಗುತ್ತದೆ’ ಎಂದು ಕಾರ್ಯಕರ್ತರು ಎಚ್ಚರಿಕೆ ಕೊಟ್ಟರು. ‘ಕನ್ನಡ ವಿರೋಧಿ ಚಟುವಟಿಕೆ ಕೈಗೊಳ್ಳುವ ಕೆಲ ಸದಸ್ಯರಿಂದ ಬೆಳಗಾವಿಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಕನ್ನಡ ಭಾಷೆ ಬಾರದವರಿಗಾಗಿ ಪಾಲಿಕೆಯಲ್ಲಿ ಕನ್ನಡ ಕಲಿಕೆ ತರಬೇತಿ ಆರಂಭಿಸಲಾಗುತ್ತಿದೆ. ಇಲ್ಲಿ ಕೆಲಸ ಮಾಡುವ ಎಲ್ಲ ಅಧಿಕಾರಿಗಳು ಕನ್ನಡ ಕಲಿತು ಕನ್ನಡಿಗರಾಗಿ ಬದುಕಬೇಕು. ತಮಗೆ ಸರ್ಕಾರ ನೀಡಿದ ವಾಹನದಲ್ಲೇ ಮೇಯರ್ ಸಂಚರಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.