ADVERTISEMENT

ಪ್ರಕರಣದಲ್ಲಿ ಖುಲಾಷೆ: ಕನ್ನಡ ಪರ ಹೋರಾಟಗಾರರ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 16:20 IST
Last Updated 24 ನವೆಂಬರ್ 2021, 16:20 IST

ಬೆಳಗಾವಿ: ಇಲ್ಲಿನ 40 ಮಂದಿ ಕನ್ನಡ ಪರ ಹೋರಾಟಗಾರರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದಿಂದ ಖುಲಾಷೆಗೊಂಡ ಹಿನ್ನೆಲೆಯಲ್ಲಿ, ಕಾರ್ಯಕರ್ತರು ರಾಣಿ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಬುಧವಾರ ವಿಜಯೋತ್ಸವ ಆಚರಿಸಿದರು.

‘ಸೂಕ್ತ ಸಾಕ್ಷಿ ಆಧಾರದ ಕೊರತೆಯಿಂದ ನ್ಯಾಯಾಲಯ ಹೋರಾಟಗಾರರನ್ನು ಆರೋಪದಿಂದ ಮುಕ್ತಗೊಳಿಸಿದೆ. 2011ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಸಂಘಟನೆಯ 40 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹತ್ತು ವರ್ಷ ನಡೆದ ವಿಚಾರಣೆ ಬಳಿಕ 4ನೇ ಜೆಎಂಎಫ್‍ ನ್ಯಾಯಾಲಯ‌ ಖುಲಾಷೆಗೊಳಿಸಿದೆ’ ಎಂದು ತಿಳಿಸಿದರು.

ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ADVERTISEMENT

2011ರಲ್ಲಿ ಕರ್ನಾಟಕ ರಾಜ್ಯೋತ್ಸವ ಧಿಕ್ಕರಿಸಿ ಎಂಇಎಸ್‌ನಿಂದ ಕರಾಳ ದಿನ ಆಚರಿಸಲಾಗಿತ್ತು. ಆಗಿನ ಮೇಯರ್‌ ಮಂದಾ ಬಾಳೇಕುಂದ್ರಿ ಹಾಗೂ ಉಪಮೇಯರ್ ರೇಣು ‌ಕಿಲ್ಲೇಕರ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಮೇಯರ್-ಉಪಮೇಯರ್ ಕೊಠಡಿ ಮೇಲೆ ದಾಳಿ ನಡೆಸಿದ್ದರು. ಅವರು ಕಚೇರಿ ದ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮಾರ್ಕೆಟ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಯಕರ್ತರ ಪರವಾಗಿ ವಕೀಲ ಸುಧೀರ ನಿರ್ವಾಣಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.