ADVERTISEMENT

ಕೇಂದ್ರದ ವಿವಿಧ ಯೋಜನೆಗಳ ಸ್ಥಿತಿಗತಿ ಅರಿಯಲು ಪ್ರವಾಸ

ಫಲಾನುಭವಿಗಳಿಂದ ಮಾಹಿತಿ ಪಡೆದ ಸಚಿವ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 8:07 IST
Last Updated 28 ಜೂನ್ 2022, 8:07 IST
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿ ಹೊರವಲಯದಲ್ಲಿರುವ ಪ್ರಾಣಿ ಸಂಗ್ರಹಾಲಯಕ್ಕೆ ಸಚಿವರಾದ ಸೋಮಪ್ರಕಾಶ್‌ ಹಾಗೂ ಗೋವಿಂದ ಕಾರಜೋಳ ಮಂಗಳವಾರ ಭೇಟಿ ನೀಡಿದರು.
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿ ಹೊರವಲಯದಲ್ಲಿರುವ ಪ್ರಾಣಿ ಸಂಗ್ರಹಾಲಯಕ್ಕೆ ಸಚಿವರಾದ ಸೋಮಪ್ರಕಾಶ್‌ ಹಾಗೂ ಗೋವಿಂದ ಕಾರಜೋಳ ಮಂಗಳವಾರ ಭೇಟಿ ನೀಡಿದರು.   

ಬೆಳಗಾವಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ರಾಜ್ಯ ಸಚಿವ ಸೋಮ ಪ್ರಕಾಶ್ ಅವರು, ಮಂಗಳವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಿಂದ ಮಾಹಿತಿ ಪಡೆದರು.

ಸಮೀಪದ ಬಸವನಕುಡಚಿ ಗ್ರಾಮದ ಪ್ರಾಥಮಿಕ ಕೃಷಿ ಪರಿಷತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ ಸಚಿವ, ‘ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ’ಯ ಪಡಿತರ ಶೇಖರಣೆಯನ್ನು ಪರಿಶೀಲಿಸಿದರು. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿದ 20 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪಡಿತರ ಕಿಟ್ ವಿತರಣೆ ಮಾಡಿದರು.

‘ಆಧಾರ್‌ ಕಾರ್ಡ್ ಲಿಂಕ್ ಇರುವ ಪಡಿತರ ಚೀಟಿದಾರರಿಗೆ ಬಯೊಮೆಟ್ರಿಕ್‌ ತೆಗೆದುಕೊಳ್ಳಲಾಗುತ್ತದೆ. ಒಟಿಪಿ ಜನರೇಟ್‌ ಆದ ತಕ್ಷಣ ಪಡಿತರ ನೀಡಲಾಗುವುದು. ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಪ್ರತಿ ತಿಂಗಳು ತಲಾ 10 ಕೆ.ಜಿ ಧಾನ್ಯಗಳನ್ನು ನೀಡಲಾಗುತ್ತದೆ’ ಎಂದು ಸ್ಥಳದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು.

ADVERTISEMENT

‘ಒನ್‌ ನೇಷನ್‌– ಒನ್‌ ರೇಷನ್‌’ ಅಡಿ ದೇಶದ ಯಾವುದೇ ಭಾಗದಲ್ಲೂ ಫಲಾನುಭವಿ ಪಡಿತರ ಪಡೆಯಬಹುದು. ಬೆಳಗಾವಿ ಗಡಿ ಭಾಗವಾದ್ದರಿಂದ ಇಲ್ಲಿಗೆ ಉದ್ಯೋಗ ಅರಸಿ ಬರುವವರು ಹಾಗೂ ಜಿಲ್ಲೆಯಿಂದ ಗೋವಾ, ಕೊಲ್ಹಾಪುರ, ಮುಂಬೈ ಕಡೆಗೆ ವಲಸೆ ಹೋಗುವವರು ಹೆಚ್ಚಿದ್ದಾರೆ. ಅಂಥವರಿಗೆಲ್ಲ ಈ ಯೋಜನೆ ಫಲಪ್ರದವಾಗಿದೆ’ ಎಂದೂ ಕಾರಜೋಳ ತಿಳಿಸಿದರು.

ಶಾಲೆ, ದೇವಸ್ಥಾನ, ಪ್ರಾಣಿ ಸಂಗ್ರಹಾಲಯಗಳಿಗೆ ಭೇಟಿ:

ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಲಾದ ತಾಲ್ಲೂಕಿನ ಹಲಗಾ ಪ್ರಾಥಮಿಕ ಶಾಲೆ ಹಾಗೂ ಕೊಳಿಕೊಪ್ಪ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯನ್ನು ಸಚಿವ ಸೋಮ ಪ್ರಕಾಶ್‌ ಪರಿಶೀಲಿಸಿದರು.

ಅಲ್ಲಿಂದ ಭೂತರಾಮನಹಟ್ಟಿಗೆ ಬಂದ ಸಚಿವರು, ಅಲ್ಲಿನ ಪ್ರಾಣಿ ಸಂಗ್ರಹಾಲಯದ ಸ್ಥಿತಿಗತಿ ಪರಿಶೀಲಿಸಿದರು.

ಇದಕ್ಕೂ ಮುನ್ನ ಬೆಳಗಾವಿಯ ಕೋಟೆ ಆವರಣದಲ್ಲಿರುವ ದುರ್ಗಾಮಾತೆ ದೇವಸ್ಥಾನ, ಕಮಲ ಬಸದಿ ಹಾಗೂ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮತ್ತಿತರರು ಇದ್ದರು.

ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಶಾಲೆಗೆ ಮಂಗಳವಾರ ಭೇಟಿ ನೀಡಿದ ಸಚಿವರಾದ ಸೋಮಪ್ರಕಾಶ್‌ ಹಾಗೂ ಗೋವಿಂದ ಕಾರಜೋಳ ಅವರು ಮಕ್ಕಳ ತರಗತಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.