ADVERTISEMENT

ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಿರಲಿ: ಸಿಇಒ ರಾಹುಲ್‌ ಶಿಂಧೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 5:56 IST
Last Updated 12 ಫೆಬ್ರುವರಿ 2026, 5:56 IST
ರಾಹುಲ್‌ ಶಿಂಧೆ
ರಾಹುಲ್‌ ಶಿಂಧೆ   

ಬೆಳಗಾವಿ: ‘ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆ ಕುರಿತು ಹಮ್ಮಿಕೊಂಡಿದ್ದ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿಡಿಯೊ ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ಮೇ ತಿಂಗಳ ಅಂತ್ಯದವರೆಗೂ ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು, ಡ್ಯಾಮ್, ಬೋರ್‌ವೆಲ್‌ಗಳ ನೀರಿನ ಮಟ್ಟ ಪರಿಶೀಲಿಸಬೇಕು. ನೀರಿನ ಮಿತಬಳಕೆ ಹಾಗೂ ಕಾಯ್ದಿಟ್ಟುಕೊಳ್ಳುವುದಕ್ಕೆ ಒತ್ತು ನೀಡಬೇಕು’ ಎಂದರು.

ADVERTISEMENT

ಕ್ಷೇತ್ರ ಭೇಟಿ ನೀಡಿ: ‘ಸಂಬಂಧಪಟ್ಟ ಇಲಾಖೆಯ ಎಲ್ಲ ತಾಲ್ಲೂಕು ಹಾಗೂ ಗ್ರಾಮ ಮಟ್ಟದ  ಅಧಿಕಾರಿಗಳು ನೀರಿನ ಕೊರತೆಯಾಗುವಂತಹ ಗ್ರಾಮಗಳಿಗೆ ಈ ವಾರದಲ್ಲಿ ಭೇಟಿ ನೀಡಿ ಪರಿಶೀಲಿಸಿ, ಪೂರ್ವಸಿದ್ಧತೆ ಕೈಗೊಳ್ಳಬೇಕು. ನೀರಿನ ಸೂಕ್ತ ಬಳಕೆಯ ಕುರಿತು ಗ್ರಾಮಸ್ಥರಲ್ಲಿಯೂ ಜಾಗೃತಿ ಮೂಡಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಎಲ್ಲ ಗ್ರಾಮಗಳಲ್ಲಿನ ನೀರಿನ ಟ್ಯಾಂಕರುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಸ್ವಚ್ಛಗೊಳಿಸಿರುವ ಕುರಿತು ದಿನಾಂಕಗಳನ್ನು ಬರೆಯಿಸಬೇಕು. ನೀರಿನ ಮಾದರಿ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ಮಾಡಬೇಕು. ರೋಗ– ರುಜಿನಗಳು ಹರಡದಂತೆ ಎಚ್ಚರಿಕೆ ವಹಿಸಬೇಕು’ ಎಂದೂ ಹೇಳಿದರು.

‘ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ತಿಂಗಳ ನಾಲ್ಕನೇ ಭಾನುವಾರ ಸ್ವಚ್ಛತಾ ಅಭಿಯಾನ ಆಂದೋಲನ ಹಮ್ಮಿಕೊಳ್ಳಲಾಗುತ್ತಿದ್ದು, ಅಭಿಯಾನದ ಅಂಗವಾಗಿ ರೂಪಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈಜೋಡಿಸಿ ಯಶಸ್ವಿಗೊಳಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಉಪಕಾರ್ಯದರ್ಶಿ (ಆಡಳಿತ), ಬಸವರಾಜ ಹೆಗ್ಗನಾಯಕ್, ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ್ ಸೇರಿ ಎಲ್ಲ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‌ಗಳು, ಸಿಬ್ಬಂದಿ ಹಾಜರಿದ್ದರು.

‘ಟ್ಯಾಂಕರ್ ನಿರ್ವಹಣೆಗೆ ಕ್ರಮವಹಿಸಿ’

‘ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಕುಡಿಯುವ ನೀರಿನ ಟ್ಯಾಂಕರ್‌ಗಳು ಈಗಾಗಲೇ ಇವೆ. ಟ್ಯಾಂಕರ್‌ಗಳು ಬೇಸಿಗೆ ಅವಧಿಯಲ್ಲಿ ಸಿದ್ಧವಾಗಿರುವಂತೆ ಕ್ರಮವಹಿಸಿ. ಅಗತ್ಯವಿರುವ ಕಡೆ ಕೂಡಲೇ ನೀರಿನ ಪೂರೈಕೆ ಮಾಡಿ’ ಎಂದು ರಾಹುಲ್‌ ಶಿಂಧೆ ಸೂಚುಸಿದರು. ‘ತಾಲ್ಲೂಕುಗಳಲ್ಲಿ ಈ ವಾರದಲ್ಲಿ ಕುಡಿಯುವ ನೀರಿನ ಟಾಸ್ಕ್‌ಪೋರ್ಸ್ ಸಭೆಗಳನ್ನು ನಡೆಸಿ ವರದಿ ಸಲ್ಲಿಸಿ. ಶಾಲಾ– ಕಾಲೇಜುಗಳು ಅಂಗನವಾಡಿಗಳು ಹಾಗೂ ವಸತಿ ನಿಲಯಗಳಿಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಕ್ರಮವಹಿಸಿ ಹಾಗೂ ನೀರಿನ ಮಿತ ಬಳಕೆಯ ಕುರಿತು ವಿದ್ಯಾರ್ಥಿಗಳಲ್ಲೂ ಜಾಗೃತಿ ಮೂಡಿಸಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.