ADVERTISEMENT

ಬೆಳಗಾವಿ: ‘ನಕಲಿ, ದೋಷಪೂರಿತ ಔಷಧಕ್ಕೆ ತಡೆಯೊಡ್ಡಿ’

​ಪ್ರಜಾವಾಣಿ ವಾರ್ತೆ
Published 22 ಮೇ 2025, 16:16 IST
Last Updated 22 ಮೇ 2025, 16:16 IST
ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ಗುರುವಾರ ಹಠಾತ್‌ ಭೇಟಿ ನೀಡಿದ ಜಿ.ಪಂ ಸಿಇಒ ರಾಹುಲ್‌ ಶಿಂಧೆ ಅಧಿಕಾರಿಗಳಿಂದ ಮಾಹಿತಿ ಪಡೆದರು
ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ಗುರುವಾರ ಹಠಾತ್‌ ಭೇಟಿ ನೀಡಿದ ಜಿ.ಪಂ ಸಿಇಒ ರಾಹುಲ್‌ ಶಿಂಧೆ ಅಧಿಕಾರಿಗಳಿಂದ ಮಾಹಿತಿ ಪಡೆದರು   

ಬೆಳಗಾವಿ: ‘ಮಳೆಗಾಲದಲ್ಲಿ ಮಲೇರಿಯ, ಡೆಂಗಿ, ಚಿಕೂನ್ಯ ಗುನ್ಯದಂಥ ರೋಗಗಳ ಹಾವಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಜನರಿಗೆ ಸೂಕ್ತ ಆರೋಗ್ಯ ಸೌಕರ್ಯ ನೀಡಲು ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಮುಖ್ಯವಾಗಿ, ಯಾವುದೇ ಸಾಂಕ್ರಾಮಿಕ ರೋಗಕ್ಕೂ ನಕಲಿ ಅಥವಾ ದೋಷಪೂರಿತ ಔಷಧ ಪಡೆಯುವುದನ್ನು ತಡೆಯಲು ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ತಾಕೀತು ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಗೆ ಗುರುವಾರ, ಹಠಾತ್‌ ಭೇಟಿ ನೀಡಿ ಪರಿಶೀಲಿಸಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಡೆಂಗಿ ಬಾರದಂತೆ ಜನರು ಮುಂಜಾಗೃತಾ ಕ್ರಮವಾಗಿ ಯಾವದ್ಯಾವುದೋ ಔಷಧ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ನಕಲಿ ಅಥವಾ ದೋಷಪೂರಿತ ಔಷಧಿ ನೀಡುವವರ ಮೇಲೆ ಕಣ್ಣಿಡಬೇಕು. ಜನರಿಗೂ ಇದರ ಸೂಕ್ತ ಅರಿವು ಮೂಡಿಸಬೇಕು. ವೈಜ್ಞಾನಿಕವಾಗಿ ದೃಢಪಟ್ಟ ಔಷಧಗಳನ್ನು ಮಾತ್ರ ಪಡೆಯುವಂತೆ ಪ್ರೇರೇಪಿಸಬೇಕು. ಆರೋಗ್ಯ ಇಲಾಖೆಯ ಕೆಪಿಎಂಇ ವಿಭಾಗದವರು ಈ ಜವಾಬ್ದಾರಿ ಹೊರಬೇಕು’ ಎಂದರು.

ADVERTISEMENT

ಸಾರ್ವಜನಿಕರಿಗೆ ಆರೋಗ್ಯ ದೃಷ್ಟಿಯಿಂದ ಹಮ್ಮಿಕೊಳ್ಳಲಾದ ‘ಗೃಹ ಆರೋಗ್ಯ– ಮನೆ ಬಾಗಿಲಿಗೆ ಆರೋಗ್ಯ’ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮಾಡಿದ ರಾಹುಲ್‌, ‘ಕ್ಷಯರೋಗ ನಿಯಂತ್ರಣಕ್ಕೆ ಹಮ್ಮಿಕೊಂಡ ವಯಸ್ಕರ ಬಿಸಿಜಿ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದರು. ವಿವಿಧ ಆರೋಗ್ಯ ಕಾರ್ಯಕ್ರಮಗಳು, ಭೌತಿಕ ಸಂಪನ್ಮೂಲಗಳ ಮತ್ತು ಮಾನವ ಸಂಪನ್ಮೂಲಗಳ ಅಗತ್ಯತೆ ಮತ್ತು ಔಷಧ ಪೂರೈಕೆ ಬಗ್ಗೆ ಪರಿಶೀಲಿಸಿದರು.

ಕಚೇರಿಯ ಸಿಬ್ಬಂದಿಯ ಕುಂದು ಕೊರತೆ ಆಲಿಸಿದ ಅವರು, ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ. ಗಡಾದ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವನಾಥ ಭೋವಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವಿವೇಕ ಹೊನ್ನಳ್ಳಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಗೀತಾ ಕಾಂಬಳೆ, ಡಾ.ಚಾಂದನಿ ದೇವಡಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಎಸ್.ಎಸ್ ಸಾಯನ್ನವರ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.