ADVERTISEMENT

'ದೇಶದ್ರೋಹದ ಪ್ರಕರಣ ಕೈಬಿಟ್ಟಿದ್ದೇಕೆ?’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 16:37 IST
Last Updated 16 ಮಾರ್ಚ್ 2022, 16:37 IST

ಬೆಳಗಾವಿ: ‘ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್), ಶಿವಸೇನಾ ಹಾಗೂ ಇತರರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿದೆ ಕೈಬಿಟ್ಟಿದ್ದೇಕೆ?’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಕೇಳಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ‘ನಗರದಲ್ಲಿ ಡಿಸೆಂಬರ್‌ನಲ್ಲಿ ಜರುಗಿದ್ದ ವಿಧಾನಮಂಡಲ ಅಧಿವೇಶನ ಕಾಲಕ್ಕೆ ಆ ಸಂಘಟನೆಗಳವರು ಕಲ್ಲು ತೂರಾಟ ನಡೆಸಿದ್ದರು. ದೊಡ್ಡ ಮಟ್ಟದಲ್ಲಿ ಗಲಾಟೆ ಮಾಡಿದ್ದರು. ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದರು. ಸರ್ಕಾರವನ್ನು ಅವಮಾನಿಸಿದ್ದರು. ಇದನ್ನು ಖಂಡಿಸಿ ಬೆಳಗಾವಿಯಲ್ಲಿ ಹಾಗೂ ರಾಜ್ಯದಾದ್ಯಂತ ಕನ್ನಡ‍ ಸಂಘಟನೆಗಳಿಂದ ಪ್ರತಿಭಟನೆ ನಡೆದಿತ್ತು. ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದರು’.

‘ಅಧಿವೇಶನದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು, ಎಂಇಎಸ್ ಮತ್ತು ಶಿವಸೇನಾ ಕಾರ್ಯಕರ್ತರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದ್ದರು. ಇದಕ್ಕಾಗಿ ಕನ್ನಡಪರ ಸಂಘಟನೆಗಳಿಂದ ಸರ್ಕಾರವನ್ನು ಅಭಿನಂದಿಸಲಾಗಿತ್ತು. ಮೊಟ್ಟ ಮೊದಲಿಗೆ ಕಠಿಣ ಕ್ರಮಕ್ಕೆ ಮುಂದಾಗಿದ್ದಕ್ಕೆ ಸ್ವಾಗತಿಸಿದ್ದೆವು. ಆದರೆ, ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣ ಕೈಬಿಟ್ಟಿರುವ ಬಗ್ಗೆ ವರದಿಗಳು ಬರುತ್ತಿವೆ. ಸರ್ಕಾರದ ಈ ನಡೆ ಖಂಡನೀಯ’ ಎಂದರು.

ADVERTISEMENT

‘ದೇಶದ್ರೋಹದ ಪ್ರಕರಣ ಕೈಬಿಟ್ಟಿದ್ದೇಕೆ ಎನ್ನುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯದ ಜನರು ಹಾಗೂ ಗಡಿ ಭಾಗದ ಕನ್ನಡಿಗರಿಗೆ ತಿಳಿಸಬೇಕು‘ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.