ADVERTISEMENT

ಬೆಳಗಾವಿ | ನಾಡಿಗೆ ಚಂಪಾ, ಬಸವಲಿಂಗಯ್ಯ ಕೊಡುಗೆ ಅಪಾರ

ಕಸಾಪ ಜಿಲ್ಲಾ ಘಟಕದಿಂದ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 7:24 IST
Last Updated 11 ಜನವರಿ 2022, 7:24 IST
ಬೆಳಗಾವಿಯಲ್ಲಿ ಕಸಾಪ ಜಿಲ್ಲಾ ಘಟಕದಿಂದ ಪ್ರೊ.ಚಂದ್ರಶೇಖರ ಪಾಟೀಲ ಮತ್ತು ಬಸವಲಿಂಗಯ್ಯ ಹಿರೇಮಠ ಅವರಿಗೆ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಬೆಳಗಾವಿಯಲ್ಲಿ ಕಸಾಪ ಜಿಲ್ಲಾ ಘಟಕದಿಂದ ಪ್ರೊ.ಚಂದ್ರಶೇಖರ ಪಾಟೀಲ ಮತ್ತು ಬಸವಲಿಂಗಯ್ಯ ಹಿರೇಮಠ ಅವರಿಗೆ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಕವಿ, ನಾಟಕಕಾರ ಪ್ರೊ.ಚಂದ್ರಶೇಖರ ಪಾಟೀಲ ಹಾಗೂ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಅವರಿಗೆ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಂಗಲಾ ಮೆಟಗುಡ್ಡ ಮಾತನಾಡಿ, ‘ಚಂಪಾ ಅವರು ಕನ್ನಡ ಸಾರಸ್ವತ ಲೋಕದ ಮೇರು ವ್ಯಕ್ತಿತ್ವ. ಸಾಹಿತ್ಯದ ಆತ್ಮ, ಕನ್ನಡದ ಶಕ್ತಿ ಮತ್ತು ಪರಿಶುದ್ಧ ಮನಸ್ಸಿನ ವ್ಯಕ್ತಿತ್ವ ಉಳ್ಳವರಾಗಿದ್ದರು. ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದಲೇ ಪ್ರಖ್ಯಾತರಾಗಿದ್ದರು. ಸಾಹಿತ್ಯ ಸೇವೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಅವರನ್ನು ಕಳೆದುಕೊಂಡು ಕನ್ನಡ ಸಾರಸ್ವತ ಲೋಕ ಬಡವಾಗಿದೆ’ ಎಂದರು.

‘ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಅವರು ಕಂಚಿನ ಕಂಠದ ಜಾನಪದ ಗಾಯಕರಾಗಿದ್ದವರು. ನಾಡಿನಾದ್ಯಂತ ಸಂಚರಿಸಿ ಹಾಗೂ ರಾಷ್ಟ್ರ–ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹಾಡಿದವರು. ಜಾನಪದ ಲೋಕ ಮತ್ತು ರಂಗಭೂಮಿ ಸಂಗೀತಕ್ಕೆ ಜೀವ ತುಂಬಿದವರು’ ಎಂದು ಸ್ಮರಿಸಿದರು.

ADVERTISEMENT

ಸಾಹಿತಿ ಸರಜೂ ಕಾಟ್ಕರ್ ಮಾತನಾಡಿ, ‘ಚಂಪಾ ಎಂದರೆ ಬಿರುಗಾಳಿ ಇದ್ದಂತಿದ್ದರು. ಈಗ ಬಿರುಗಾಳಿ ಶಾಂತವಾಗಿದೆ. ಕೇವಲ ನಿಸರ್ಗದ ವರ್ಣನೆಗೆ ಸೀಮಿತವಾಗಿದ್ದ ಸಾಹಿತ್ಯ ಕ್ಷೇತ್ರವನ್ನು ಬದಲಿಸಿ ಸಮಾಜದಲ್ಲಿನ ಅಂಕುಡೊಂಕುಗಳ ಸುಧಾರಣೆಗೆ, ಶೋಷಿತರು– ಬಡ ವರ್ಗದ ಏಳಿಗೆಗೆ ಗಮನಹರಿಸುವಂತೆ ಬದಲಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಕನ್ನಡ ನಾಡು–ನುಡಿ, ನೆಲದ ರಕ್ಷಣೆ–ಸುಧಾರಣೆಗಾಗಿ ಅರ್ಪಿಸಿಕೊಂಡಿದ್ದರು’ ಎಂದು ನೆನೆದರು.

‘ವೈಚಾರಿಕ ಬದಲಾವಣೆಗಾಗಿ ದಿಟ್ಟತನ ತೋರಿದ್ದ ಅವರ ಅಗಲಿಕೆ ನಿಜಕ್ಕೂ ನಾಡಿಗೆ ಅಘಾತವನ್ನುಂಟು ಮಾಡಿದೆ. ಜಾನಪದ ಲೋಕದ ಮಿನುಗುವ ನಕ್ಷತ್ರವಾಗಿದ್ದ ಬಸಲಿಂಗಯ್ಯ ನಾಡಿನ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ್ದರು. ಈ ಇಬ್ಬರೂ ಮಹಾನ್‌ ವ್ಯಕ್ತಿಗಳು ದಿನದ ಅಂತರದಲ್ಲಿ ಅಗಿಲಿದ್ದು, ದುರ್ದೈವದ ಸಂಗತಿ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರಿದ ಮಾಜಿ ಸದಸ್ಯ ಮೋಹನ ಬಸನಗೌಡ ಪಾಟೀಲ, ಪತ್ರಕರ್ತ ಮುರಗೇಶ ಶಿವಪೂಜಿ, ಸಾಂಖ್ಯಿಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಆರ್.ಬಿ. ಬನಶಂಕರಿ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೇಮಾವತಿ ಸೊನೋಳ್ಳಿ, ವಕೀಲ ಸುನೀಲ ಸಾಣಿಕೊಪ್ಪ, ಕವಿ ಸಿ.ಕೆ. ಕೋಳಿವಾಡ ಮಾತನಾಡಿದರು.

ನಿವೇದಿತಾ ಮಾಸ್ತಿಹೊಳಿಮಠ, ರಕ್ಷಾ ದೇಗಿನಹಾಳ ಮೊದಲಾದವರು ವಚನ ಗಾಯನ ಪ್ರಸ್ತುತಪಡಿಸಿದರು.

ರತ್ನಪ್ರಭಾ ಬೆಲ್ಲದ, ಜಯಶೀಲಾ ಬ್ಯಾಕೋಡ, ಕೀರ್ತಿ ಶಿವಪೂಜಿಮಠ, ಪ್ರತಿಭಾ ಕಳ್ಳಿಮಠ, ಸಿ.ಎಂ.ಬೂದಿಹಾಳ, ಬಿ.ಬಿ. ಮಠಪತಿ, ಶಿವಾನಂದ ತಲ್ಲೂರ ಇದ್ದರು.

ಎಂ.ವೈ. ಮೆಣಸಿನಕಾಯಿ ಸ್ವಾಗತಿಸಿದರು. ಕಿರಣ ಸಾವಂತನವರ ನಿರ್ವಹಿಸಿದರು. ಆಕಾಶ್ ಥಬಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.