
ಚಿಕ್ಕೋಡಿ: ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಒತ್ತಾಯಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆಸುತ್ತಿರುವ ಸತ್ಯಾಗ್ರಹ ಮಂಗಳವಾರ 9 ದಿನ ಪೂರೈಸಿದೆ. ಚಿಕ್ಕೋಡಿ ತಾಲ್ಲೂಕು ವಾಹನ ತರಬೇತಿ ಶಾಲೆಗಳ ಮಾಲೀಕರ ಸಂಘ ಹಾಗೂ ಅಂಬೇಡ್ಕರ ಜನಜಾಗೃತಿ ವೇದಿಕೆಯಿಂದ ಪ್ರತ್ಯೇಕವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ತಹಶೀಲ್ದಾರ್ ಪರಿಮಳಾ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಲಾಯಿತು.
ಬಸವೇಶ್ವರ ವೃತ್ತದಲ್ಲಿ ಸತ್ಯಾಗ್ರಹ ಸ್ಥಳಕ್ಕೆ ರಾಜ್ಯ ರೈತ ಸಂಘ, ಹಸಿರುಸೇನೆ ಹಾಗೂ ಅತಿಥಿ ಉಪನ್ಯಾಸಕರ ಸಂಘಟನೆ ಪದಾಧಿಕಾರಿಗಳು ಭೇಟಿ ನೀಡಿ ಬೆಂಬಲ ಸೂಚಿಸಿದ್ದು, ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸಂಗೀತಾ ಚಾವರೆ ಮಾತನಾಡಿ, ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಬೇಕು. ಚಿಕ್ಕೋಡಿಗೆ ಜಿಲ್ಲೆಯಾಗುವ ಎಲ್ಲ ಮಾನದಂಡಗಳು ಇರುವುದಾಗಿ ಹೇಳಿದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಚಿಕ್ಕೋಡಿ ತಾಲ್ಲೂಕು ವಾಹನ ತರಬೇತಿ ಶಾಲೆಗಳ ಮಾಲೀಕರ ಸಂಘ, ಅಂಬೇಡ್ಕರ ಜನಜಾಗೃತಿ ವೇದಿಕೆಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ಎಂ ಆರ್ ಮುನ್ನೋಳಿಕರ ಮಾತನಾಡಿ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡುವ ನಿರೀಕ್ಷೆ ಇದೆ. ಹೊಸ ಜಿಲ್ಲೆಗಳ ಘೋಷಣೆಯಿಂದ ಉತ್ತರ ಕರ್ನಾಟಕ ಭಾಗ ಮತ್ತಷ್ಟು ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಎಸ್ ವೈ ಹಂಜಿ, ಸಂಜು ಬಡಿಗೇರ, ಸುರೇಶ ಬ್ಯಾಕೂಡ, ರುದ್ರಪ್ಪ ಸಂಗಪ್ಪಗೋಳ, ಅಶ್ವಿನಿ ಪೋತದಾರ, ಸಾಗರ ಭೋಸಲೆ, ನಿಯಾಜ್ ಗುಡೇಖಾನ, ವಿನಯ ಚೌಗಲಾ, ರಾಜು ಚಂದಗಡೆ, ರಮೇಶ ಬಸ್ತವಾಡೆ, ನಾಗೇಶ ಮಾಳಿ, ಕುಮಾರ ಗುಡೆ, ರಾವಸಾಹೇಬ ಫಕೀರೆ, ಸುದರ್ಶನ ತಮ್ಮಣ್ಣವರ, ರಾಜೇಂದ್ರ ಗಸ್ತಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.