ADVERTISEMENT

ಚಿಕ್ಕೋಡಿ: ದುಃಸ್ಥಿತಿಯಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ

ಗುಣಮಟ್ಟದ ಕಟ್ಟಡಗಳೇ ಇಲ್ಲ: ಮಕ್ಕಳ ಕಲಿಕೆಗೆ ಆತಂಕ

ಪ್ರಜಾವಾಣಿ ವಿಶೇಷ
Published 29 ಮೇ 2024, 4:33 IST
Last Updated 29 ಮೇ 2024, 4:33 IST
ಚಿಕ್ಕೋಡಿ ಪಟ್ಟಣದ ಇಂದಿರಾ ನಗರದಲ್ಲಿ ಶಿಥಿಲಗೊಂಡ ಮೆಟ್ರಿಕ್ ಪೂರ್ವ ಬಾಲಕಿಯ ವಸತಿ ನಿಲಯದ ಹೊರಾಂಗಣದ ಸಮಗ್ರ ನೋಟ
ಚಿಕ್ಕೋಡಿ ಪಟ್ಟಣದ ಇಂದಿರಾ ನಗರದಲ್ಲಿ ಶಿಥಿಲಗೊಂಡ ಮೆಟ್ರಿಕ್ ಪೂರ್ವ ಬಾಲಕಿಯ ವಸತಿ ನಿಲಯದ ಹೊರಾಂಗಣದ ಸಮಗ್ರ ನೋಟ   

ಚಿಕ್ಕೋಡಿ: ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕು ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಾಲಕ ಹಾಗೂ ಬಾಲಕಿಯರ 16 ವಸತಿ ನಿಲಯಗಳು ಇದ್ದು, ಇವುಗಳ ಪೈಕಿ ಚಿಕ್ಕೋಡಿ ಪಟ್ಟಣದ ಬಾಲಕಿಯರ ವಸತಿ ನಿಲಯ ಶಿಥಿಲಗೊಂಡಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಶಾಲಾ ತರಗತಿಗಳು ಪ್ರಾರಂಭವಾಗುತ್ತಿದ್ದರೂ ಪರ್ಯಾಯ ವ್ಯವಸ್ಥೆ ಮಾಡದೇ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ.

ಮೆಟ್ರಿಕ್ ಪೂರ್ವ 13 ಹಾಗೂ ಮೆಟ್ರಿಕ್ ನಂತರದ 3 ವಸತಿ ನಿಲಯಗಳಲ್ಲಿ 2024-25ನೇ ಸಾಲಿನಲ್ಲಿ ವ್ಯಾಸಾಂಗ ಮಾಡುತ್ತಿರುವ ನವೀಕರಣಗೊಂಡ 1497 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ ಪಟ್ಟಣದ ಇಂದಿರಾ ನಗರ ಬಡಾವಣೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ 125 ವಿದ್ಯಾರ್ಥಿಗಳು ಇದ್ದಾರೆ. ಆದರೆ ವಸತಿ ನಿಲಯದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಸಿಮೆಂಟ್ ಹಕ್ಕಳಿಕೆ ಉದುರಿ ಬೀಳುತ್ತಿದೆ. ಛತ್ತಿನಲ್ಲಿನ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿದ್ದರಿಂದ ಯಾವಾಗ ಬೀಳುತ್ತದೆಯೋ ಎಂಬ ಆತಂಕದಲ್ಲಿ ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿ ನಿಲ್ಲಲು ಭಯ ಪಡುತ್ತಿದ್ದಾರೆ.

‘ತುರ್ತಾಗಿ ಬೇರೊಂದು ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯ ಸ್ಥಳಾಂತರ ಮಾಡಬೇಕು ಎಂಬ ಆಲೋಚನೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹೊಳೆದಿದೆ. ಎರಡು ತಿಂಗಳ ಕಾಲ ಬೇಸಿಗೆ ರಜಾ ಅವಧಿಯಲ್ಲಿ ಕೈ ಕಟ್ಟಿಕೊಂಡು ಕುಳಿತಿದ್ದ ಅಧಿಕಾರಿಗಳು ಗುಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರು ಎಂಬಂತೆ ಇದೀಗ ಬಾಡಿಗೆ ಕಟ್ಟಡ ಹುಡುಕಾಟದಲ್ಲಿ ತೊಡಗಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಹೀಗಾಗಿ ವಸತಿ ನಿಲಯದ ವಿದ್ಯಾರ್ಥಿನಿಯರ ಪರಿಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ ಕುರಣೆ ಹೇಳಿದರು.

ADVERTISEMENT

1962ರಲ್ಲಿ ಸ್ಥಾಪಿತವಾದ ಇಂದಿರಾ ನಗರದ ಬಾಲಕಿಯರ ವಸತಿ ನಿಲಯದ ಅಡುಗೆ ಕೋಣೆ, ದಾಸ್ತಾನು ಕೋಣೆ ಸೇರಿದಂತೆ ಬಹುತೇಕ ಕೊಠಡಿಗಳ ಚಾವಣಿ ಬೀಳುತ್ತಿದೆ.

ಹೀಗಾಗಿ ವಸತಿ ನಿಲಯದ ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ಮುಗಿಸಿಕೊಂಡು ಎಲ್ಲಿಗೆ ಬರಬೇಕು? ಅನ್ನೋ ಗೊಂದಲದಲ್ಲಿ ಇದ್ದಾರೆ. ವಸತಿ ನಿಲಯದ ಕುರಿತು ಅಧಿಕಾರಿಗಳು ದ್ವಂದ್ವ ನಿಲುವು ತಾಳದೇ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಬೇಕಿದೆ.

ಚಿಕ್ಕೋಡಿ ಪಟ್ಟಣದ ಬಾಲಕಿಯರ ವಸತಿ ನಿಲಯದ ವರಾಂಡದಲ್ಲಿ ಮೇಲ್ಛಾವಣಿಯು ಕುಸಿದು ಬೀಳುವ ಹಂತ ತಲುಪಿರುವುದು.
ಬಾಲಕಿಯರ ವಸತಿ ನಿಲಯದಲ್ಲಿ ಕೋಣೆಗಳಲ್ಲಿ ಮೇಲ್ಛಾವಣಿ ಸಿಮೆಂಟ್ ಕಿತ್ತು ಬೀಳುತ್ತಿರುವುದು ಸರಳು ಕಾಣುತ್ತಿರುವುದು.

ಚಿಕ್ಕೋಡಿ ಪಟ್ಟಣದ ಇಂದಿರಾ ನಗರ ಬಡಾವಣೆ ವಸತಿ ನಿಲಯ ದುಃಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿದೆ. ಪಿಡಬ್ಲೂಡಿ ಅಧಿಕಾರಿಗಳು ವರದಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ

– ಪ್ರವೀಣ ಪಾಟೀಲ ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.