ADVERTISEMENT

ಚಿಕ್ಕೋಡಿ: ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ; ಹದಗೆಟ್ಟ ರಸ್ತೆಗಳು, ಸವಾರರ ಗೋಳು!

ಚಿಕ್ಕೋಡಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚಾರಕ್ಕೆ ಸಂಚಕಾರ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 3:08 IST
Last Updated 25 ಆಗಸ್ಟ್ 2025, 3:08 IST
ಚಿಕ್ಕೋಡಿಯ ಬಸವೇಶ್ವರ ವೃತ್ತದ ಬಳಿ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿರುವುದು
ಚಿಕ್ಕೋಡಿಯ ಬಸವೇಶ್ವರ ವೃತ್ತದ ಬಳಿ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿರುವುದು   

ಚಂದ್ರಶೇಖರ ಎಸ್‌.ಚಿನಕೇಕರ

ಚಿಕ್ಕೋಡಿ: ಕಳೆದೊಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ರಸ್ತೆಗಳು ಅಧೋಗತಿಗೆ ತಲುಪಿವೆ. ಗುಂಡಿಗಳಿಂದ ತುಂಬಿದ ಈ ರಸ್ತೆಗಳಲ್ಲಿ ವಾಹನ ಸವಾರರು ಪ್ರಯಾಸಪಡುತ್ತ ಸಂಚರಿಸುತ್ತಿದ್ದಾರೆ. 

ಚಿಕ್ಕೋಡಿಯ ಅಂಕಲಿ ಖೂಟದ ಬಳಿ ಇರುವ ರಸ್ತೆ ಹಲವು ವರ್ಷಗಳಿಂದ ಡಾಂಬರೀಕರಣ ಕಂಡಿಲ್ಲ. ಕನಿಷ್ಠ ಪಕ್ಷ ಆ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸವೂ ಆಗಿಲ್ಲ.

ADVERTISEMENT

ಈಚೆಗೆ ಗ್ಯಾಸ್ ಪೈಪ್‌ಲೈನ್‌ ಕಾಮಗಾರಿ ಕೈಗೆತ್ತಿಕೊಂಡ ಖಾಸಗಿ ಕಂಪನಿ ಎಲ್ಲೆಂದರಲ್ಲಿ ರಸ್ತೆ ಅಗೆದಿದೆ. ದುರ್ಗಮವಾದ ಈ ರಸ್ತೆಯಲ್ಲಿ ಗುಂಡಿ ಇವೆಯೋ ಅಥವಾ ಗುಂಡಿಯಲ್ಲೇ ರಸ್ತೆ ಇದೆಯೋ? ಎಂದು ಅನುಮಾನ ಪಡುವಂತಾಗಿದೆ.

ಪಟ್ಟಣದ ಹೃದಯಭಾಗವಾದ ಬಸವೇಶ್ವರ ವೃತ್ತದ ಬಳಿ ಇರುವ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಗ್ಯಾರಂಟಿ ಎನ್ನುವ ಸ್ಥಿತಿ ಇದೆ.

ಪ್ರತಿ ಮಳೆಗಾಲದಲ್ಲಿ ಈ ರಸ್ತೆಗಳು ಅಧೋಗತಿಗೆ ತಲುಪುತ್ತಿದ್ದರೂ, ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬರುತ್ತಿದೆ. ಹಾಳಾಗಿರುವ ರಸ್ತೆಗಳಲ್ಲಿ ಸಂಚಾರ ಸಮಸ್ಯೆ ಮಿತಿಮೀರಿದೆ.

‘ಜಿಲ್ಲಾಕೇಂದ್ರವಾಗುವ ಎಲ್ಲ ಸ್ಥಾನಮಾನ ಹೊಂದಿದ ಚಿಕ್ಕೋಡಿಯಲ್ಲಿ ರಸ್ತೆಗಳ ಅವ್ಯವಸ್ಥೆ ಹಲವು ವರ್ಷಗಳಿಂದ ಇದೆ. ಜನರು ಆಕ್ರೋಶ ವ್ಯಕ್ತಪಡಿಸಿದಾಗ ಗುಂಡಿ ಮುಚ್ಚುವ ಬದಲಿಗೆ, ಹೊಸದಾಗಿ ರಸ್ತೆ ನಿರ್ಮಿಸಬೇಕು. ವಾಹನ ಸವಾರರ ಜೀವದೊಂದಿಗೆ ಚೆಲ್ಲಾಟವಾಡಬಾರದು’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕೋಡಿಯ ಅಂಕಲಿ ಖೂಟದ ಬಳಿ ಇರುವ ರಸ್ತೆಯಲ್ಲಿ ಗುಂಡಿಗಳನ್ನು ದಾಟಲು ವಾಹನ ಸವಾರರು ಪರದಾಡುತ್ತಿರುವುದು
ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಬಳಿಯ ರಸ್ತೆಯಲ್ಲಿ ಸಂಚರಿಸಲು ಬೈಕ್ ಸವಾರರು ಪರದಾಡುತ್ತಿರುವುದು
ಮಂಜುನಾಥ ಪರಗೌಡ
ಮಹೇಶ ಪತ್ತಾರ
ಜಗದೀಶ ಈಟಿ 
ಪೂಜಾ ಸಾಳುಂಕೆ
ರಾಜೇಶ ಬುರ್ಲಿ
ಈರಣ್ಣ ಕಡಾಡಿ
ಈರಣ್ಣ ಕಡಾಡಿ
ಚಿಕ್ಕೋಡಿಯಲ್ಲಿ ಪ್ರತಿ ಮಳೆಗಾಲದಲ್ಲಿ ರಸ್ತೆ ಹಾಳಾಗುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸುವ ಅಗತ್ಯವಿದೆ
ಮಂಜುನಾಥ ಪರಗೌಡ ವಾಹನ ಸವಾರ ಕೇರೂರ
ಚಿಕ್ಕೋಡಿ ಪಟ್ಟಣದ ರಸ್ತೆಗಳ ತುಂಬೆಲ್ಲ ಗುಂಡಿ ಬಿದ್ದಿದ್ದು ಸಂಚಾರಕ್ಕೆ ತೊಡಕಾಗಿದೆ. ಪುಟ್ಟ ಮಕ್ಕಳು ಆತಂಕದಿಂದ ಸಂಚರಿಸುತ್ತಿದ್ದಾರೆ
-ಮಹೇಶ ಪತ್ತಾರ, ವಿದ್ಯಾರ್ಥಿ ಚಿಕ್ಕೋಡಿ
ಹೆದ್ದಾರಿಗಳು ಪ್ರಮುಖ ರಸ್ತೆಗಳಲ್ಲಿ ಗುಂಡಿ ಹೆಚ್ಚಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ಪ್ರಯಾಣದ ಅವಧಿ ದುಪ್ಪಟ್ಟಾಗಿದೆ
ಪೂಜಾ ಸಾಳುಂಕೆ, ಸ್ಥಳೀಯ ಮಹಿಳೆ
ಪಟ್ಟಣದ ಹಲವು ಕಡೆಗೆ ರಸ್ತೆ ಡಾಂಬರೀಕಣ ಮಾಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಮಳೆ ನಿಂತ ತಕ್ಷಣ ರಸ್ತೆಗಳ ಸುಧಾರಣೆಗೆ ಕ್ರಮ ವಹಿಸಲಾಗುವುದು
ಜಗದೀಶ ಈಟಿ, ಮುಖ್ಯಾಧಿಕಾರಿ ಪುರಸಭೆ ಚಿಕ್ಕೋಡಿ
ಲೋಕೋಪಯೋಗಿ ಇಲಾಖೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದು ರಸ್ತೆಗಳಲ್ಲಿನ ಗುಂಡಿ ಮುಚ್ಚುವಂತೆ ಸೂಚಿಸಲಾಗಿದೆ
- ರಾಜೇಶ ಬುರ್ಲಿ, ತಹಶೀಲ್ದಾರ್‌ ಚಿಕ್ಕೋಡಿ

ಹೆದ್ದಾರಿಯಲ್ಲೂ ಇದೇ ಸ್ಥಿತಿ: ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ವಿವಿಧ ರಾಜ್ಯ ಹೆದ್ದಾರಿಗಳಲ್ಲಿ ಇದೇ ಸ್ಥಿತಿ ಇದೆ. ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿ ಕಮತನೂರ ಗೇಟ್‌ನಿಂದ ಕಾಗವಾಡದವರೆಗೆ ಗುಂಡಿಗಳು ಹೆಚ್ಚಿವೆ. ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ.  ಕಬ್ಬೂರ ಪಟ್ಟಣದ ಟೋಲ್‌ ನಾಕಾ ಬಳಿ ಹಾದುಹೋಗಿರುವ ಚಿಕ್ಕೋಡಿ ಉಪಕಾಲುವೆ ಬಳಿ ಗುಂಡಿ ಬಿದ್ದು ಹಲವು ತಿಂಗಳಾಗಿವೆ. ಆದರೆ ಇಂದಿಗೂ ದುರಸ್ತಿಯಾಗಿಲ್ಲ. ಚಿಕ್ಕೋಡಿಯಿಂದ ಮಹಾರಾಷ್ಟ್ರದ ಇಚಲಕರಂಜಿಗೆ ತೆರಳುವ ಮಾರ್ಗದ ರಸ್ತೆಯೂ ಹಾಳಾಗಿದೆ.

‘ಯುದ್ಧೋಪಾದಿಯಲ್ಲಿ ದುರಸ್ತಿ ಮಾಡಿ’

‘ಸತತ ಮಳೆ ಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲಿನ ರಸ್ತೆಗಳೆಲ್ಲ ಹಾಳಾಗಿವೆ. ಯುದ್ಧೋಪಾದಿಯಲ್ಲಿ ಅವುಗಳನ್ನು ದುರಸ್ತಿ ಮಾಡಿ ಸವಾರರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.