ADVERTISEMENT

44,780 ವಿದ್ಯಾರ್ಥಿಗಳ ನೋಂದಣಿ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸಜ್ಜು

ಸುಧಾಕರ ಎಸ್.ತಳವಾರ, ಬೆಂಗಳೂರು
Published 24 ಮಾರ್ಚ್ 2022, 15:00 IST
Last Updated 24 ಮಾರ್ಚ್ 2022, 15:00 IST
ಮೋಹನಕುಮಾರ ಹಂಚಾಟೆ
ಮೋಹನಕುಮಾರ ಹಂಚಾಟೆ   

ಚಿಕ್ಕೋಡಿ: ಇದೇ 28ರಿಂದ ಆರಂಭಗೊಳ್ಳಲಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

8 ವಲಯಗಳನ್ನು ಒಳಗೊಂಡಿರುವ ಈ ಶೈಕ್ಷಣಿಕ ಜಿಲ್ಲೆಯಲ್ಲಿ 157 ಪ್ರೌಢಶಾಲೆಗಳಿವೆ. 23,514 ಬಾಲಕರು ಮತ್ತು 21,266 ಬಾಲಕಿಯರು ಸೇರಿದಂತೆ ಒಟ್ಟು 44,780 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಅಥಣಿ ವಲಯದಲ್ಲಿ 6,712, ನಿಪ್ಪಾಣಿ– 4,507, ಚಿಕ್ಕೋಡಿ-4,978, ಗೋಕಾಕ-4,636, ಹುಕ್ಕೇರಿ-6888, ಕಾಗವಾಡ–2,333, ಮೂಡಲಗಿ-7,207, ರಾಯಬಾಗದಲ್ಲಿ 7,519 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.

4,507 ಸಿಬ್ಬಂದಿ ನಿಯೋಜನೆ:

ADVERTISEMENT

ಜಿಲ್ಲಾ ವ್ಯಾಪ್ತಿಯಲ್ಲಿ 154 ಸಾಮಾನ್ಯ ಮತ್ತು 3 ಖಾಸಗಿ ಸೇರಿದಂತೆ ಒಟ್ಟು 157 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 8 ಕೇಂದ್ರಗಳನ್ನು ಕಾಯ್ದಿಸಲಾಗಿದೆ. ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಂತೆ ಒಟ್ಟು 2,356 ಕೊಠಡಿಗಳನ್ನು ಗುರುತಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ.

ಪ್ರತಿ ಪರೀಕ್ಷಾ ಕೇಂದ್ರ ಒಬ್ಬ ಮುಖ್ಯ ಸೂಪರಿಂಟೆಂಡೆಂಟ್‌ 31 ಉಪ ಮುಖ್ಯ ಸೂಪರಿಂಟೆಂಡೆಂಟ್‌, 3137 ಕೊಠಡಿ ಮೇಲ್ವಿಚಾರಕರು, 157 ಕಸ್ಟೊಡಿಯನ್, 55 ಜನ ಮಾರ್ಗಾಧಿಕಾರಿಗಳು, 159 ಜನ ಮೊಬೈಲ್ ಸ್ವಾಧೀನಾಧಿಕಾರಿಗಳು, 159 ಸ್ಥಾನಿಕ ಜಾಗೃತದಳ ಅಧಿಕಾರಿಗಳು, 157 ಸಹಾಯಕರು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ, ಒಬ್ಬ ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಒಟ್ಟು 4507 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಒಟ್ಟು 24 ತಾಲ್ಲೂಕು ಮಟ್ಟದ ಜಾಗೃತ ದಳಗಳು, 3 ಜಿಲ್ಲಾಮಟ್ಟದ ಜಾಗೃತ ದಳಗಳು ಮತ್ತು 120 ಅನ್ಯ ಇಲಾಖೆಯ ತಾಲ್ಲೂಕು ಹಂತದ ಜಾಗೃತ ದಳಗಳನ್ನು ನೆಮಕ ಮಾಡಲಾಗಿದೆ. 314 ಆರೋಗ್ಯ ಮತ್ತು 314 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಗುರೂಜಿ ಬಂದರು ಗುರುವಾರ:

ಫಲಿತಾಂಶ ವೃದ್ಧಿಗಾಗಿ ಜಿಲ್ಲಾಮಟ್ಟದಲ್ಲಿ ನಾನಾ ರೀತಿಯಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ‘ಗುರೂಜಿ ಬಂದರು ಗುರುವಾರ’ ಕಾರ್ಯಕ್ರಮದಲ್ಲಿ ಶಿಕ್ಷಕರು ಪ್ರತಿ ಗುರುವಾರ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪರೀಕ್ಷೆ ಮತ್ತು ಅಧ್ಯಯನದ ಕುರಿತು ವಿಶೇಷ ಮಾರ್ಗದರ್ಶನ ನೀಡಿದ್ದಾರೆ.

ಕೋವಿಡ್ ವೇಳೆ ಆನಲೈನ್ ಮೂಲಕ ಬೋಧಿಸಲಾಗಿದೆ. ಸರಣಿ ಪರೀಕ್ಷೆಗಳನ್ನು ನಡೆಸಲಾಗಿದೆ. ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಶೇ.100ರಷ್ಟು ಅಂಕ ಗಳಿಸುವಂತೆ ತರಬೇತಿ ನೀಡಲಾಗಿದೆ. ಶೇ.35ಕ್ಕಿಂತ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್ ಕೈಪಿಡಿ ನೀಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾರ್ಗದರ್ಶನ ಕೊಡಲಾಗಿದೆ ಎಂದು ಡಿಡಿಪಿಐ ಮೋಹನಕುಮಾರ ಹಂಚಾಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೋನ್ ಇನ್, 5 ವಿಷಯಗಳ ಕುರಿತು ರಸಪ್ರಶ್ನೆ ನಡೆಸಲಾಗಿದೆ. ಮಕ್ಕಳ ವೈಯುಕ್ತಿಕ ವಿವರ ತಯಾರಿಸಿ, ಅವರು ಬರೆದ ಸರಣಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಪಾಲಕರಿಗೆ ತಲುಪಿಸಲಾಗಿದೆ’ ಎಂದು ಹೇಳಿದರು.

ತರಬೇತಿ

ಮಕ್ಕಳ ಸ್ನೇಹಿ ಮತ್ತು ಪಾರದರ್ಶಕ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ.

ಮೋಹನಕುಮಾರ ಹಂಚಾಟೆ, ಡಿಡಿಪಿಐ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.