ADVERTISEMENT

ಚಿಕ್ಕೋಡಿ | ಕೃಷಿಯೋಗ್ಯವಾದ ಸವುಳು– ಜವಳು

ಅತಿಯಾದ ನೀರು ಬಳಕೆಯಿಂದ 34 ಸಾವಿರ ಹೆಕ್ಟೇರ್‌ ಜಮೀನು ಸವಳು– ಜವಳು, ಮರುಜೀವ ಪಡೆದ 13 ಸಾವಿರ ಹೆಕ್ಟೇರ್‌

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:13 IST
Last Updated 25 ಫೆಬ್ರುವರಿ 2026, 6:13 IST
ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದ ಬಳಿಯಲ್ಲಿ ಸವುಳು– ಜವಳು ಜಮೀನಿನಲ್ಲಿ ಕೃಷಿ ಇಲಾಖೆಯಿಂದ ಕೈಗೊಂಡ ಕಾಮಗಾರಿಯನ್ನು ಜಂಟಿ ಕೃಷಿ ನಿರ್ದೇಶಕ ಎಚ್.ಡಿ. ಕೋಳೆಕರ ಪರಿಶೀಲಿಸಿದರು
ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದ ಬಳಿಯಲ್ಲಿ ಸವುಳು– ಜವಳು ಜಮೀನಿನಲ್ಲಿ ಕೃಷಿ ಇಲಾಖೆಯಿಂದ ಕೈಗೊಂಡ ಕಾಮಗಾರಿಯನ್ನು ಜಂಟಿ ಕೃಷಿ ನಿರ್ದೇಶಕ ಎಚ್.ಡಿ. ಕೋಳೆಕರ ಪರಿಶೀಲಿಸಿದರು   

ಚಿಕ್ಕೋಡಿ: ಉಪ ವಿಭಾಗದ ವ್ಯಾಪ್ತಿಯಲ್ಲಿ ಕೃಷ್ಣಾ ಹಾಗೂ ಉಪನದಿಗಳ ತೀರದಲ್ಲಿ ರೈತರು ಕಳೆದ ಎರಡು ದಶಕಗಳಿಂದ ಅತಿಯಾಗಿ ನೀರು ಬಳಕೆ ಮಾಡಿದ್ದರಿಂದ ಕೃಷಿ ಜಮೀನು ಬಂಜರಾಗಿತ್ತು. 2023–24, 2024–25ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಮಣ್ಣು ಸುಧಾರಣೆ ಕಾರ್ಯಕ್ರಮ ಕೈಗೊಂಡಿದ್ದರಿಂದ ಇದೀಗ ಸಾವಿರಾರು ಹೆಕ್ಟೇರ್ ಜಮೀನು ಕೃಷಿ ಯೋಗ್ಯವಾಗಿದೆ.

ಮೂರು ದಶಕದ ಹಿಂದೆ ಹಿಪ್ಪರಗಿ ಬ್ಯಾರೇಜ್ ಸೇರಿದಂತೆ ಹಲವು ಬ್ಯಾರೇಜುಗಳನ್ನು ಈ ಭಾಗದಲ್ಲಿ ನಿರ್ಮಿಸಿದ್ದರಿಂದ ನದಿ ತೀರದಲ್ಲಿ ಕೃಷಿಗೆ ವರದಾನವಾಯಿತು. ನೀರಿನ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಬಂತು. ಕಪ್ಪು ಮಣ್ಣು ಇದ್ದ ಪ್ರದೇಶದಲ್ಲಿ ಮಿತಿ ಮೀರಿದ ನೀರಿನ ಬಳಕೆ, ಏಕ ಬೆಳೆ (ಕಬ್ಬು) ಹಾಗೂ ರಾಸಾಯನಿಕಗಳ ಬಳಕೆಯಿಂದ ಫಲವತ್ತತೆ ಕಡಿಮೆಯಾಯಿತು. ಹೀಗಾಗಿ ಸಹಸ್ರಾರು ಹೆಕ್ಟೇರ್ ಜಮೀನು ಸವುಳು– ಜವಳಿನಿಂದ ಹಾಳಾಯಿತು.

ಸವುಳು– ಜವಳು ಮಣ್ಣಿನ ಪುನಶ್ಚೇತನದ ಮುಖ್ಯ ಉದ್ದೇಶ ಹೊಂದಿದ ಕೃಷಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯು ನದಿ ತೀರದ ರೈತರ ಬಾಳಿಗೆ ಸಂಜೀವಿನಿಯಾಗಿ ಬಂತು. ಈ ಯೋಜನೆ ಅಡಿಯಲ್ಲಿ ಉಪ ವಿಭಾಗ ವ್ಯಾಪ್ತಿಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿಯಲ್ಲಿ 120 ಹೆಕ್ಟೇರ್, ಚಂದೂರಿನಲ್ಲಿ 120 ಹೆಕ್ಟೇರ್, ಮಾಂಜರಿ ಮತ್ತು ಯಡೂರ ಗ್ರಾಮಗಳಲ್ಲಿ 130 ಹೆಕ್ಟೇರ್ ಜಮೀನು ಸವುಳು ಜಮೀನು ಕೃಷಿಯೋಗ್ಯವಾಗಿ ಪರಿವರ್ತನೆಗೊಂಡಿದೆ.

ADVERTISEMENT

ಅಥಣಿ ತಾಲ್ಲೂಕಿನ ಸತ್ತಿ ಗ್ರಾಮದಲ್ಲಿ 290.33 ಹೆಕ್ಟೇರ್, ಕಾಗವಾಡ ತಾಲ್ಲೂಕಿನ ಕಾಗವಾಡ ಮತ್ತು ಜುಗೂಳ ಗ್ರಾಮದಲ್ಲಿ 159.94 ಹೆಕ್ಟೇರ್, ಉಗಾರ ಮತ್ತು ಮೋಳೆ ಗ್ರಾಮದಲ್ಲಿ 160 ಹೆಕ್ಟೇರ್, ನಿಪ್ಪಾಣಿ ತಾಲ್ಲೂಕಿನ ಸಿದ್ನಾಳ ಮತ್ತು ಭಿವಶಿ ಗ್ರಾಮದಲ್ಲಿ 100 ಹೆಕ್ಟೇರ್ ಸವುಳು– ಜವಳು ಜಮೀನು ಕೃಷಿಗೆ ಯೋಗ್ಯವಾಗಿದೆ ಎಂದು ಬೆಳಗಾವಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಎಚ್.ಡಿ. ಕೋಳೆಕರ ಮಾಹಿತಿ ನೀಡಿದರು.

ಕಬ್ಬಿನಂತಹ ಏಕಬೆಳೆಗೆ ಸೀಮಿತವಾಗಿದ್ದ ಈ ಭಾಗದ ರೈತರು ಇದೀಗ ಬೇಳೆಕಾಳು, ಜೋಳ ಸೇರಿದಂತೆ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಪೌಷ್ಟಿಕಾಂಶ ಭದ್ರತೆಗೆ ಅನುಕೂಲವಾಗುವ ಬೆಳೆ ಬೆಳೆಯುತ್ತಿದ್ದರಿಂದ ಮಣ್ಣಿನ ಫಲವತ್ತತೆಗೆ ಯಾವುದೇ ತೊಂದರೆ ಇಲ್ಲದಂತಾಗಿದೆ.

ಇಷ್ಟು ದಿನಗಳ ಕಾಲ ಸವುಳು– ಜವಳು ಜಮೀನು ಮುಳ್ಳು ಕಂಟಿಗಳಿಂದ ಕೂಡಿದ್ದಾಗಿತ್ತು. ಕಾಲಿಟ್ಟರೆ ಕೆಸರು ಗದ್ದೆಯಂತಾಗಿತ್ತು. ಇದೀಗ ಹಂತ ಹಂತವಾಗಿ ಕ್ಷಾರಯುಕ್ತ ಜಮೀನು ಕೃಷಿ ಯೋಗ್ಯ ಜಮೀನು ಆಗುತ್ತಿರುವುದು ನದಿ ತೀರದ ಜನರ ಪಾಲಿಗೆ ವರದಾನವಾಗಿದೆ.

ಎಚ್.ಡಿ. ಕೋಳೆಕರ
ಟಿ.ಎಸ್. ಮೋರೆ
ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್‌ಗೂ ಹೆಚ್ಚು ಜಮೀನು ಸವುಳು– ಜವಳಿನಿಂದ ಕೂಡಿದೆ. ಇದೀಗ 13 ಸಾವಿರ ಹೆಕ್ಟೇರ್‌ಗೂ ಹೆಚ್ಚು ಜಮೀನು ಕೃಷಿಗೆ ಯೋಗ್ಯವಾಗಿದೆ
ಎಚ್‌.ಡಿ. ಕೋಳೆಕರ ಜಂಟಿ ಕೃಷಿ ನಿರ್ದೇಶಕ ಬೆಳಗಾವಿ
ಕೃಷ್ಣಾ ನದಿ ತೀರದಲ್ಲಿ ಸವುಳು– ಜವಳು ಭೂಮಿ ಹೆಚ್ಚಿದೆ. ಕೃಷಿ ಇಲಾಖೆ ಇನ್ನುಳಿದ ಕ್ಷಾರಯುಕ್ತ ಭೂಮಿಯನ್ನು ಕೃಷಿಯೋಗ್ಯ ಜಮೀನಾಗಿ ಪರಿವರ್ತಿಸಲು ಪ್ರಯತ್ನಿಸಬೇಕಿದೆ
ಟಿ.ಎಸ್. ಮೋರೆ ಅಧ್ಯಕ್ಷ ತಾಲ್ಲೂಕು ಕೃಷಿಕ ಸಮಾಜ ಚಿಕ್ಕೋಡಿ

ಹೇಗೆ ಸಾಧ್ಯವಾಯಿತು?

ಅತಿಯಾದ ನೀರು ಬಳಕೆಯಿಂದ ಭೂಮಿ ಸವುಳು– ಜವಳಾಗುತ್ತದೆ. ಬೆಳೆ ಬೆಳೆಯಲು ಮಣ್ಣಿನ ರಸಸಾರದ ಪ್ರಮಾಣ ಶೇ 7ರಷ್ಟಿರಬೇಕು. ಅದಕ್ಕಿಂತ ಹೆಚ್ಚಾದರೆ ಫಲವತ್ತತೆ ಕಡಿಮೆಯಾಗಿ ಬೇರುಗಳು ನೀರು– ಗೊಬ್ಬರ ಪಡೆಯುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಇಂಥ ಜಮೀನಿನ ಒಳಗೆ ‘ಡಬಲ್‌ ವಾಲ್ವ್ಡ್ ಕೊರೊಗೇಟೆಡ್‌ ಪರ್ಪರೇಟ್‌ ಪೈಪ್ಸ್‌’ ಎಂಬ ವಿಶಿಷ್ಟ ವಿನ್ಯಾಸದ ಪೈಪುಗಳನ್ನು ಜೋಡಿಸಿ ಅದರ ಮೂಲಕ ಹೆಚ್ಚುವರಿ ನೀರು ಹಾಗೂ ತೇವವನ್ನು ಹೊರಹಾಕಲಾಗುತ್ತದೆ. ಭೂಮಿಯ ಕ್ಷಾರ ಹದವಾಗಿ ಬಂದಾಗ ಬೆಳೆ ಬೆಳೆದರೆ ಫಲ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.