
ಚಿಕ್ಕೋಡಿ: ‘ವರ್ಷದಿಂದ ವರ್ಷಕ್ಕೆ ನೀರಾವರಿ ಕ್ಷೇತ್ರ ಹೆಚ್ಚುತ್ತಿದ್ದಂತೆ ರೈತರಿಂದ ವಿದ್ಯುತ್ ಬೇಡಿಕೆಯೂ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರ ರಿಯಾಯಿತಿ ದರದಲ್ಲಿ ನೀಡುವ ಸೌರ ವಿದ್ಯುತ್ ಘಟಕಗಳನ್ನು ಹೊಲಗದ್ದೆಗಳಲ್ಲಿ ಸ್ಥಾಪಿಸಿಕೊಳ್ಳುವ ಮೂಲಕ ವಿದ್ಯುತ್ ಕೊರತೆ ನೀಗಿಸಿಕೊಳ್ಳಬಹುದು’ ಎಂದು ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಹೇಳಿದರು.
ಪಟ್ಟಣದಲ್ಲಿ ಹೆಸ್ಕಾಂ ಕಚೇರಿಯ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಹೆಸ್ಕಾಂ ಅಧಿಕಾರಿಗಳ ಹಾಗೂ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ನೀರಾವರಿಯ ಸಣ್ಣ ಘಟಕಗಳಿಂದ ₹226 ಕೋಟಿ ಬಾಕಿ ಮೊತ್ತ ಬರಬೇಕಿದೆ. ರೈತರಿಗೆ ಭಾರವಾಗುವ ವಿದ್ಯುತ್ ದರ ಕಡಿತಗೊಳಿಸಿಕೊಳ್ಳಲು ಕುಸುಮ ಬಿ ಹಾಗೂ ಕುಸುಮ ಸಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ವಿದ್ಯುತ್ ಉತ್ಪಾದನೆಯಲ್ಲಿ ರೈತರು ಸ್ವಾವಲಂಬಿಯಾಗಲು ಸಾಧ್ಯವಿದೆ’ ಎಂದರು.
‘ಗಣೇಶ ಮೂರ್ತಿ ಮೆರವಣಿಗೆ, ಕಬ್ಬು ಸಾಗಣೆ ಮಾಡುವ ಟ್ರ್ಯಾಕ್ಟರ್, ಲಾರಿ ತೆರಳುವ ಮಾರ್ಗಗಳಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸುವಂತೆ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ ಅವರ ಬೇಡಿಕೆಯಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳಲು ಹೆಸ್ಕಾಂ ಬದ್ಧವಾಗಿದೆ. ಬೋರಗಾಂವ ಜವಳಿ ಪಾರ್ಕ್‌ಗೆ ವಿದ್ಯುತ್ ಪೂರೈಕೆಯ ಕೊರತೆ ನೀಗಿಸಲು ಹಾಗೂ ಚಿಕ್ಕೋಡಿ ಪಟ್ಟಣಕ್ಕೆ ಸಮರ್ಪಕ ನೀರು ಪೂರೈಸಲು ಅನುಕೂಲವಾಗುವಂತೆ ಹಳೆಯ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ ಶೀಘ್ರದಲ್ಲಿ ಹೊಸ ಮಾರ್ಗವನ್ನು ಪ್ರಾರಂಭಿಸಲಾಗುವುದು’ ಎಂದು ಭರವಸೆ ನೀಡಿದರು.
‘ಚಿಕ್ಕೋಡಿ ವಿಭಾಗೀಯ ಹೆಸ್ಕಾಂ ಕಚೇರಿಯಲ್ಲಿ 8 ತಿಂಗಳ ಹಿಂದೆ ರದ್ದಾಗಿರುವ ಉಪ ಲೆಕ್ಕಾಧಿಕಾರಿ ಹುದ್ದೆಯನ್ನು ಮರುಮಂಜೂರಾತಿ ನೀಡುವ ಕುರಿತು ಸಮಾಲೋಚಿಸಲಾಗುವುದು. ಚಿಕ್ಕೋಡಿಯಲ್ಲಿ ವಿದ್ಯುತ್ ಉಪ ಕೇಂದ್ರ ಅವಶ್ಯಕತೆ ಇದ್ದು, ಈ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಹೇಳಿದರು.
ಸಭೆಯಲ್ಲಿ ಹೆಸ್ಕಾಂ ಮುಖ್ಯ ಅಭಿಯಂತರ ಶಿವಾನಂದ ಪಾಟೀಲ, ಅಧೀಕ್ಷಕ ಅಭಿಯಂತರ ಶಿವಾಜಿ ಖರೆ, ಕಾರ್ಯನಿರ್ವಾಹಕ ಅಭಿಯಂತರ ಸುಪ್ರಭಾ ಭಂಡಗಾರ, ಸಹಾಯಕ ಕಾರ್ಯನಿರ್ವಾಕ ಅಭಿಯಂತರ ಸಂಜೀವಕುಮಾರ ಸುಖಸಾರೆ, ಮುಖಂಡರಾದ ಅಣ್ಣಾಸಾಹೇಬ ಹವಲೆ, ರಾಮಾ ಮಾನೆ, ಅನಿಲ ಪಾಟೀಲ, ಸಾಬೀರ ಜಮಾದಾರ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಮುಂತಾದವರು ಹಾಜರಿದ್ದರು.
ಕ್ರಿಯಾಯೋಜನೆ ತಯಾರಿಸಲು ಸೂಚನೆ ಭೆಯ ಅಧ್ಯಕ್ಷತೆ ವಹಿಸಿದ್ದ ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ‘ಹೆಸ್ಕಾಂ ಸಹಕಾರದಿಂದ ಚಿಕ್ಕೋಡಿ ಪಟ್ಟಣದ ಗುರುವಾರ ಪೇಟೆಯಲ್ಲಿ ಭೂಗತ ಕೇಬಲ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದ್ದು ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿಗಳು ವಿದ್ಯುತ್ ಸ್ವಾವಲಂಬನೆ ಹೊಂದಲು ಕುಸುಮ ಸಿ ಯೋಜನೆಯನ್ನು ಅಳವಡಿಕೊಳ್ಳಲು ಕ್ರಿಯಾ ಯೋಜನೆ ತಯಾರಿಸಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.