ADVERTISEMENT

ಚಿಕ್ಕೋಡಿ: ಸಂಚಾರ ನಿಯಮಗಳ ಪಾಲನೆಯೇ ಇಲ್ಲ

ಚಿಕ್ಕೋಡಿಯಲ್ಲಿ ಸಂಚಾರ ಪೊಲೀಸ್‌ ಠಾಣೆ ಆರಂಭವಾಗಿ ದಶಕವಾದರೂ ಅಳವಡಿಕೆಯಾಗದ ಸಿಗ್ನಲ್‌

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 4:17 IST
Last Updated 3 ಜನವರಿ 2026, 4:17 IST
ಚಿಕ್ಕೋಡಿ ಪಟ್ಟಣದ ಸಂಚಾರ ಪೊಲೀಸ್ ಠಾಣೆ
ಚಿಕ್ಕೋಡಿ ಪಟ್ಟಣದ ಸಂಚಾರ ಪೊಲೀಸ್ ಠಾಣೆ   

ಚಿಕ್ಕೋಡಿ: 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಪಟ್ಟಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಕಚೇರಿಗಳಿವೆ. ಸಂಚಾರ ನಿಯಂತ್ರಣಕ್ಕಾಗಿ 2016ರ ಜನವರಿ 1ರಂದು ಸಂಚಾರ ಪೊಲೀಸ್ ಠಾಣೆ ಆರಂಭಿಸಲಾಗಿದೆ.

ಆದರೆ, ಸಂಚಾರ ಠಾಣೆ ಆರಂಭವಾಗಿ ದಶಕವಾದರೂ ಸಂಚಾರ ನಿಯಮಗಳು ಮಾತ್ರ ಇಲ್ಲಿ ಪಾಲನೆಯಾಗುತ್ತಿಲ್ಲ. ಪಟ್ಟಣದ ಹೃದಯಭಾಗವಾದ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕು ಎಂಬ ಬೇಡಿಕೆ ಇಂದಿಗೂ ಈಡೇರಿಲ್ಲ.

‘ಬಸವೇಶ್ವರ ವೃತ್ತದ ಮಾರ್ಗದಲ್ಲೇ ನಿತ್ಯ ನೂರಾರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂಚರಿಸುತ್ತಾರೆ. ಆದರೆ, ಇಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ’ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ADVERTISEMENT

ತಂಗುದಾಣಗಳೇ ಇಲ್ಲ

ಚಿಕ್ಕೋಡಿ-ಬೆಳಗಾವಿ, ನಿಪ್ಪಾಣಿ-ಚಿಕ್ಕೋಡಿ, ಮಿರಜ್-ಚಿಕ್ಕೋಡಿ, ಮುಧೋಳ-ಚಿಕ್ಕೋಡಿ ಮಾರ್ಗದ ಮೂಲಕ ನಿತ್ಯ ಸಾವಿರಾರು ಬಸ್‌ಗಳು ಬಸವೇಶ್ವರ ವೃತ್ತದ ಮೂಲಕವೇ ತೆರಳುತ್ತವೆ. ಆದರೆ, ಬಸ್‌ಗಾಗಿ ಕಾಯುತ್ತ ನಿಲ್ಲಲು ಪ್ರಯಾಣಿಕರಿಗೆ ತಂಗುದಾಣವೇ ಇಲ್ಲ. ಹಾಗಾಗಿ ಪ್ರಯಾಣಿಕರು ಅದರಲ್ಲೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮಳೆಗಾಲದಲ್ಲಂತೂ ಪರಿಸ್ಥಿತಿ ಹೇಳತೀರದಂತಾಗಿದೆ.

ಇಡೀ ಪಟ್ಟಣದಲ್ಲಿ ತಿರುಗಾಡಿದಾಗ; ಅಲ್ಲೊಂದು, ಇಲ್ಲೊಂದು ಪಾದಚಾರಿ ಮಾರ್ಗ ಕಣ್ಣಿಗೆ ಬೀಳುತ್ತವೆ. ಅವುಗಳನ್ನು ಕೆಲವರು ಅತಿಕ್ರಮಿಸಿಕೊಂಡಿದ್ದಾರೆ. ಬೀದಿಬದಿ ವ್ಯಾ‍ಪಾರಿಗಳು ಫುಟ್‍ಪಾತ್ ಮೇಲೆಯೇ ವಹಿವಾಟಿನಲ್ಲಿ ತೊಡಗಿದ್ದಾರೆ. 

ಸಂಚಾರ ನಿಯಮ ಪಾಲನೆಗಾಗಿ ಪ್ರಮುಖ ಮಾರ್ಗಗಳಲ್ಲಿ ಸೂಚನಾ ಫಲಕಗಳು ಕಾಣಸಿಗುವುದಿಲ್ಲ. ಕೆಲ ಮಾರ್ಗಗಳಲ್ಲಿ ವಿಭಜಕಗಳನ್ನು ಅಳವಡಿಸಿ, ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಬಹುತೇಕ ಸವಾರರು ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಮಿನಿ ವಿಧಾನಸೌಧದ ಎದುರಿನ ಮಾರ್ಗದಲ್ಲಿ  ಏಕಮುಖ ಸಂಚಾರ ನಿಯಮ ಎಂಬುದು ಹೆಸರಿ‌ಗಷ್ಟೇ ಎಂಬಂತಾಗಿದೆ.

ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಸಂಕೀರ್ಣಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಅವು ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಹೊಂದಬೇಕು ಎಂಬ ನಿಯಮವಿದೆ. ಆದರೆ, ಯಾರೂ ಇದನ್ನು ಪಾಲಿಸುತ್ತಿಲ್ಲ. 

‘ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಳ್ಳದಿದ್ದರೂ, ಪುರಸಭೆ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಹೇಗೆ ನೀಡುತ್ತಾರೆ’ ಎಂಬುದು ಸಾರ್ವಜನಿಕರ ಪ್ರಶ್ನೆ.

ಚಿಕ್ಕೋಡಿ ಸಂಚಾರ ಠಾಣೆಯಲ್ಲಿ ಒಬ್ಬ ಪಿಎಸ್‍ಐ, ಮೂವರು ಎಎಸ್‍ಐ, 9 ಮಂದಿ ಹೆಡ್ ಕಾನಸ್ಟೆಬಲ್, 18 ಕಾನ್‌ಸ್ಟೆಬಲ್‌ ಇದ್ದಾರೆ. ಇಷ್ಟೊಂದು ಸಿಬ್ಬಂದಿ ಇದ್ದರೂ, ಸಂಚಾರ ವ್ಯವಸ್ಥೆ ಸರಿಪಡಿಸುವುದೇ ಸವಾಲಾಗಿ ಪರಿಣಮಿಸಿದೆ.

ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲದಿರುವ ಕಾರಣ ವಾಹನಗಳು ಮತ್ತು ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿರುವುದು
ಚಿಕ್ಕೋಡಿಯಲ್ಲಿ ಸಂಚಾರ ಪೊಲೀಸ್ ಠಾಣೆ ಇದ್ದೂ ಇಲ್ಲದಂತಾಗಿದೆ. ಒಂದು ಟ್ರಾಫಿಕ್ ಸಿಗ್ನಲ್ ಅಳವಡಿಸದಿರುವುದು ಸರ್ಕಾರದ ನಿರ್ಲಕ್ಷ್ಯ ಎತ್ತಿ ತೋರಿಸುತ್ತದೆ
–ನಾಗೇಶ ಮಾಳಿ, ಸಾಮಾಜಿಕ ಕಾರ್ಯಕರ್ತ
ಚಿಕ್ಕೋಡಿ ಪಟ್ಟಣದಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲ. ಹೀಗಿರುವಾಗ ಸಂಚಾರ ನಿಯಮ ಪಾಲನೆ ಹೇಗೆ ಸಾಧ್ಯ?
–ರೋಹಿಣಿ ದೀಕ್ಷಿತ, ಸ್ಥಳೀಯರು
ಚಿಕ್ಕೋಡಿಯಲ್ಲಿ ಸಂಚಾರ ಪೊಲೀಸ್ ಠಾಣೆ ಆರಂಭವಾಗಿ ದಶಕವಾದರೂ ಸಿಗ್ನಲ್‌ ಅಳವಡಿಸದಿರುವುದು ಸರಿಯಲ್ಲ
–ಮಹೇಶ ಪತ್ತಾರ, ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.