ADVERTISEMENT

ಗೆಲ್ಲುವವರಾರು? ಲೆಕ್ಕಾಚಾರಗಳು ಶುರು

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೋತ್ತರ ಹಲವು ಚರ್ಚೆಗಳು

ಎಂ.ಮಹೇಶ
Published 24 ಏಪ್ರಿಲ್ 2019, 19:31 IST
Last Updated 24 ಏಪ್ರಿಲ್ 2019, 19:31 IST
   

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದಿದ್ದು, ಗೆಲುವು ಯಾರ ‍ಪಾಲಾಗಲಿದೆ ಎಂಬ ಚರ್ಚೆಗಳು ಮತ್ತು ಲೆಕ್ಕಾಚಾರಗಳು ಆರಂಭವಾಗಿವೆ.

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ತಮ್ಮದೇ ಆದ ವಿಶ್ಲೇಷಣೆಗಳನ್ನು ಮಾಡುತ್ತಾ, ಫಲಿತಾಂಶವನ್ನು ‘ಹೀಗಾಗಬಹುದು’ ಎಂದು ನಿರೀಕ್ಷಿಸುತ್ತಿದ್ದಾರೆ. ಮತದಾರರು ನಮ್ಮನ್ನು ‘ಈ ಕಾರಣಕ್ಕಾಗಿ’ ಬೆಂಬಲಿಸಿದ್ದಾರೆ ಅಥವಾ ಬೆಂಬಲಿಸಿರಬಹುದು ಎಂದು ಮನದಲ್ಲೇ ‘ಅಂದಾಜುಪಟ್ಟಿ’ ಸಿದ್ಧಪಡಿಸಿಕೊಂಡು ಚರ್ಚಿಸುತ್ತಿದ್ದಾರೆ. ಮತದಾರರು, ಕಣದಲ್ಲಿದ್ದ 11 ಅಭ್ಯರ್ಥಿಗಳ ಭವಿಷ್ಯವನ್ನು ಬರೆದಿದ್ದಾರೆ.

ಹಳಬರಿಗೋ, ಹೊಸಬರಿಗೋ?:

ADVERTISEMENT

ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಮತ್ತೊಮ್ಮೆ ಅವಕಾಶ ಬಯಸಿದ್ದಾರೆ. ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು’ ಎಂಬ ಪಕ್ಷದವರ ಭಾವನೆಯ ಅಲೆಯಲ್ಲಿ ದಡ ಸೇರುತ್ತೇನೆಂದು ಭಾವಿಸಿದ್ದಾರೆ. ಮತದಾರರು ಇವರಲ್ಲಿ ಯಾರಿಗೆ ಆಶೀರ್ವಾದ ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಮೇ 23ರವರೆಗೆ ಕಾಯಲೇಬೇಕು. ಆದರೆ, ಕ್ಷೇತ್ರದಲ್ಲಿ ಸೋಲು–ಗೆಲುವಿನ ಲೆಕ್ಕಾಚಾರಗಳು ಜೋರಾಗಿಯೇ ನಡೆಯುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ, ಚುನಾವಣಾ ವಿಷಯವೇ ಪ್ರಮುಖವಾದುದಾಗಿದೆ.

2014ರಲ್ಲಿ ನಡೆದಿದ್ದ ಚುನಾವಣೆಗಿಂತ ಈ ಬಾರಿ ಮತದಾನ ಪ‍್ರಮಾಣ ಕೊಂಚ ಹೆಚ್ಚಾಗಿದೆ. ಕ್ಷೇತ್ರದಲ್ಲಿರುವ 8 ವಿಧಾನಸಭಾ ಕ್ಷೇತ್ರವಾರು, ಮತಗಟ್ಟೆವಾರು ಮತದಾನ ಪ್ರಮಾಣದ ಪಟ್ಟಿಗಳನ್ನು ಇಟ್ಟುಕೊಂಡು ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಒಂದು ಸುತ್ತಿನ ವಿಶ್ಲೇಷಣೆ ನಡೆಸಿದ್ದಾರೆ. ಯಾವ ಕ್ಷೇತ್ರ ಅಥವಾ ಮತಗಟ್ಟೆಗಳಲ್ಲಿ ಯಾರಿಗೆ ಹೆಚ್ಚಿನ ಬೆಂಬಲ ಸಿಕ್ಕಿರಬಹುದು,ಯಾರಿಗೆ ಯಾರು ‘ಒಳೇಏಟು’ ನೀಡಿರಬಹುದು ಎನ್ನುವ ಊಹೆಗಳ ಆಧಾರದ ಮೇಲೆ ಚರ್ಚೆಗಳು ನಡೆಯುತ್ತಿವೆ.

ಫಲ ನೀಡುವುದೇ?

ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಬಂದು ಪ್ರಚಾರ ನಡೆಸಿದ್ದರು. ‘ನೀವು ಕೊಡುವ ಮತಗಳು ನೇರವಾಗಿ ಮೋದಿ ಖಾತೆಗೇ ಬರುತ್ತವೆ; ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಕೇಳಲು ಬಂದಿದ್ದೆ. ಈಗ ನನಗೋಸ್ಕರ ಬೆಂಬಲ ಕೇಳಲು ಬಂದಿದ್ದೇನೆ’ ಎಂದು ಚಿಕ್ಕೋಡಿಯಲ್ಲಿ ಭಾಷಣ ಮಾಡಿದ್ದರು. ಇದರಿಂದ ಬಿಜೆಪಿಯ ಜೊಲ್ಲೆಗೆ ‘ಸಿಹಿ’ ಸಿಕ್ಕಿದೆಯೇ ಎನ್ನುವುದು ಚರ್ಚೆಯಾಗುತ್ತಿದೆ.

ನಂತರ ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಪರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಚಾರ ಸಮಾವೇಶ ನಡೆದಿತ್ತು. ‘ಕೆಲಸಗಾರ ಹುಕ್ಕೇರಿ ಮುಖ ನೋಡಿ ಮತ ಹಾಕಿ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಕೋರಿದ್ದರು. ರಾಯಬಾಗದಲ್ಲೂ ಮತಯಾಚಿಸಿದ್ದರು. ಕೊನೆಹಂತದಲ್ಲಿ ಈ ನಾಯಕರು ಮಾಡಿದ ಭಾಷಣಗಳು ಮ್ಯಾಜಿಕ್‌ ಮಾಡಿವೆಯೇ ಎನ್ನುವುದು ಕೂಡ ಬಹಿರಂಗವಾಗಬೇಕಿದೆ. ಮೈತ್ರಿ ಸರ್ಕಾರದ ಪಾಲುದಾರ ಪಕ್ಷವಾದ ಜೆಡಿಎಸ್‌ನ ಬೆಂಬಲ ಇಲ್ಲಿ ಎಷ್ಟರ ಮಟ್ಟಿಗೆ ದೊರೆತಿದೆ; ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಕಾರ್ಯಕ್ರಮಗಳಿಗೆ ಜನ ಬೆಂಬಲ ಸಿಕ್ಕಿದೆಯೇ ಎನ್ನುವುದು ಗೊತ್ತಾಗಲು ಸಮಯ ಒಂದು ತಿಂಗಳು ಉರುಳಬೇಕಾಗಿದೆ.

ಗೆಲುವಿನ ಕಿರೀಟ ಯಾರಿಗೆ?

ಬಿಜೆಪಿ ಟಿಕೆಟ್‌ ಸಿಗದಿದ್ದುದಕ್ಕೆ ಆರಂಭದಲ್ಲಿ ಮುನಿಸಿಕೊಂಡಿದ್ದ ರಮೇಶ ಕತ್ತಿ–ಉಮೇಶ ಕತ್ತಿ ಸಹೋದರರು ನಂತರ ಪಕ್ಷದೊಂದಿಗೆ ಗುರುತಿಸಿಕೊಂಡರು; ಪ್ರಚಾರದಲ್ಲೂ ಭಾಗವಹಿಸಿದ್ದರು. ಆದರೆ, ಆರಂಭದಲ್ಲಿನ ಬೆಳವಣಿಗೆಗಳು ಪರಿಣಾಮ ಬೀರಿವೆಯೇ, ಇಲ್ಲವೇ? ಅಂತೆಯೇ ಕಾಂಗ್ರೆಸ್‌ ನಾಯಕ ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ತಟಸ್ಥವಾಗಿ ಉಳಿದಿದ್ದರಿಂದ ಅಥವಾ ಬಿಜೆಪಿ ಪರವಾಗಿ ಮೃದುಧೋರಣೆ ತಾಳಿದ್ದರಿಂದ ಯಾರಿಗೆ ಲಾಭವಾಗಲಿದೆ, ಯಾರಿಗೆ ನಷ್ಟವಾಗಲಿದೆ? ಹೋದ ಬಾರಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಹುಕ್ಕೇರಿ ಗೆದ್ದಿದ್ದರು. ಈ ಬಾರಿ ಲೀಡ್ ಹೆಚ್ಚಿಸಿಕೊಳ್ಳುವರೋ ಅಥವಾ ಪ್ರತಿಸ್ಪರ್ಧಿಯೇ ಮೇಲುಗೈ ಸಾಧಿಸುವರೋ ಎನ್ನುವ ವಿಷಯಗಳು ಚರ್ಚೆಗೊಳಗಾಗುತ್ತಿವೆ.

ಚಿಕ್ಕೋಡಿ ಅಖಾಡದಲ್ಲಿ ಗೆಲುವಿನ ಕಿರೀಟ ಧರಿಸುವವರು ಯಕ್ಸಂಬಾದ ಪ್ರಭಾವಿ ಜೊಲ್ಲೆ ಮನೆತನವೋ ಅಥವಾ ಹುಕ್ಕೇರಿ ಕುಟುಂಬವೋ? ಉಳಿದ 9 ಅಭ್ಯರ್ಥಿಗಳಲ್ಲಿ ಯಾರಿಗೆಷ್ಟು ಮತಗಳು ಸಿಕ್ಕಿವೆ, ಅವರಿಂದ ಯಾರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾದೀತು ಎನ್ನುವ ಕುತೂಹಲವೂ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.