
ಬೆಳಗಾವಿ: ಅದು 2024ರ ಆಗಸ್ಟ್ 22ರ ರಾತ್ರಿ 8 ಗಂಟೆ ಸಮಯ. ಮಹಿಳಾ ಸ್ವಸಹಾಯ ಸಂಘದಲ್ಲಿ ಮಾಡಿದ ಸಾಲ ತೀರಿಸಲಾಗದೆ ಮಹಿಳೆಯೊಬ್ಬರು ತಮ್ಮಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬೆಳಗಾವಿಯ ರೈಲು ಹಳಿ ಮೇಲೆ ಹೋಗುತ್ತಿದ್ದರು.
ಇದೇ ವೇಳೆ ರೈಲು ಹಳಿ ಬಳಿ ರಸ್ತೆಯಲ್ಲಿ ಹೆತ್ತವರೊಂದಿಗೆ ಕಾರಿನಲ್ಲಿ ಹೊರಟಿದ್ದ ಬಾಲಕಿಗೆ ಈ ದೃಶ್ಯ ಕಂಡಿತು. ಆತ್ಮಹತ್ಯೆ ಸುಳಿವು ಅರಿತ ಆಕೆ ಕಾರಿನಿಂದ ತಕ್ಷಣವೇ ಇಳಿದು ಮಹಿಳೆ ಬಳಿ ಓಡಿಹೋಗಿ ರಕ್ಷಣೆಗೆ ಧಾವಿಸಿದಳು. ಕೂಗಾಡಿ ಸ್ಥಳೀಯರನ್ನು ಸೇರಿಸಿ, ಮೂವರ ಪ್ರಾಣ ರಕ್ಷಿಸಿದಳು. ಕ್ಷಣಾರ್ಧದಲ್ಲೇ ವೇಗವಾಗಿ ಬಂದ ರೈಲು ಮುಂದೆ ಸಾಗಿತು. ನಂತರ ಸಾವಿಗೆ ಶರಣಾಗಲು ಹೊರಟಿದ್ದ ಮಹಿಳೆ ಮತ್ತು ಇಬ್ಬರು ಕಂದಮ್ಮಗಳನ್ನು ಮನೆ ತಲುಪಿಸಿದಳು.
ಅಕ್ಷರ ಕಲಿತು, ಎಲ್ಲ ಮಕ್ಕಳಂತೆ ಆಟವಾಡಿಕೊಂಡು ಇರಬೇಕಿದ್ದ ವಯಸ್ಸಿನಲ್ಲೇ ಈ ಸಾಹಸ ಮೆರೆದಿದ್ದು ಬೆಳಗಾವಿಯ ಬಾಲಿಕಾ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಸ್ಫೂರ್ತಿ ವಿಶ್ವನಾಥ ಸವ್ವಾಶೇರಿ. ಈಗ 10ನೇ ತರಗತಿಯ ವಿದ್ಯಾರ್ಥಿನಿ. ಈ ಸಾಧನೆ ಮೆಚ್ಚಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನಗದು ಬಹುಮಾನ ನೀಡಿ ಸತ್ಕರಿಸಿದರು. ರಾಜ್ಯ ಸರ್ಕಾರವು ‘ರಾಜ್ಯಮಟ್ಟದ ಕೆಳದಿ ಚನ್ನಮ್ಮ ಶೌರ್ಯ’ ಪ್ರಶಸ್ತಿ ನೀಡಿ ಗೌರವಿಸಿತು.
‘ನಾವಷ್ಟೇ ನೆಮ್ಮದಿಯಿಂದ ಇದ್ದರೆ ಸಾಲದು. ಸಮಾಜದಲ್ಲಿ ನಮ್ಮೊಂದಿಗೆ ಇರುವವರು ನೆಮ್ಮದಿಯಿಂದ ಇರಬೇಕು. ಸಂಕಷ್ಟದಲ್ಲಿ ಇದ್ದವರಿಗೆ ನೆರವಾಗಬೇಕು. ಅದಕ್ಕೆ ಇದೊಂದು ಸಣ್ಣ ಕೆಲಸ ಮಾಡಿದೆ’ ಎನ್ನುವ ಸ್ಫೂರ್ತಿ, ‘ಸರ್ಕಾರದಿಂದ ಪ್ರಶಸ್ತಿಯೊಂದಿಗೆ ಬಂದಿದ್ದ ಹಣವನ್ನೂ ಸಂಕಷ್ಟದಲ್ಲಿದ್ದ ಮಹಿಳೆಗೆ ನೀಡಿದ್ದೇನೆ. ಈಗ ಮಹಿಳೆ ಖುಷಿಯಿಂದ ಇರುವುದನ್ನು ಕಂಡು ನನಗೂ ಸಂತಸವಾಗುತ್ತಿದೆ’ ಎನ್ನುತ್ತಾಳೆ. ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗುವುದು ಸ್ಫೂರ್ತಿ ಕನಸು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.