
ಬೆಳಗಾವಿ: ಶುಕ್ರವಾರ (ನ.14) ಮಕ್ಕಳ ದಿನಾಚರಣೆ. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ಆಚರಿಸುವ ಈ ದಿನ ಜಿಲ್ಲೆಯ ಚಿಣ್ಣರ ಸಾಧನೆಗಳನ್ನು ಮೆಲುಕು ಹಾಕಲಾಗುತ್ತಿದೆ. ವಯಸ್ಸು ಚಿಕ್ಕದಾದರೂ ಮನಸ್ಸು ದೊಡ್ಡದು ಎಂಬ ಮಾತಿನಂತೆ ಜಿಲ್ಲೆಯ ಹಲವು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ್ದಾರೆ. ಅವರಲ್ಲಿ ಕೆಲವರನ್ನು ಇಲ್ಲಿ ಪರಿಚಯಿಸಲಾಗಿದೆ.
ರಾಷ್ಟ್ರಮಟ್ಟದ ಕುಸ್ತಿ ಮಿಂಚು: ಮಲ್ಲರ ಊರೆಂದು ಪ್ರಸಿದ್ಧಿ ಪಡೆದಿರುವ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಮಲ್ಲಾಪುರ ಕೆ.ಎ ಗ್ರಾಮದ ಶ್ರೇಯಾ ಸುರೇಶ ಬಾವಣ್ಣವರ ಈ ಬಾರಿಯ 73 ಕೆ.ಜಿ ರಾಜ್ಯ ಮಟ್ಟದ ಮಹಿಳಾ ಕುಸ್ತಿ ವಿಭಾಗದಲ್ಲಿ ಗೆದ್ದು ರಾಷ್ಟ್ರಮಟ್ಟ ಪ್ರತಿನಿಧಿಸುತ್ತಿರುವುದು ಈ ಭಾಗದ ಜನರಲ್ಲಿ ಹರ್ಷಮೂಡಿದೆ.
ಇಲ್ಲಿನ ಶಕುಂತಲಾ ಗಡಿಗಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಶ್ರೇಯಾಗೆ ಕುಸ್ತಿ ಮೆಚ್ಚಿನ ಆಟ. ಮುತ್ತಜ್ಜನ ಕಾಲದಿಂದಲೂ ಮಲ್ಲಾಪುರದ ಬಾವಣ್ಣವರ ಅವರದು ಕುಸ್ತಿಗೆ ಹೆಸರಾದ ಮನೆತನ. ಮುತ್ತಜ್ಜ ಗೋಪಾಲಗಿರಿ ಬಾವಣ್ಣವರ ಕೂಡ ಉತ್ತಮ ಕುಸ್ತಿ ಪಟುವಾಗಿದ್ದರು. ಅವರ ಐವರು ಪುತ್ರರಲ್ಲಿ ಮುಕುಂದರಾವ್ ಗಿರಿ, ಕೃಷ್ಣಗಿರಿ, ದೇವೇಂದ್ರ ಗಿರಿ ಕುಸ್ತಿ ಪಟುಗಳಾಗಿ ಖ್ಯಾತಿ ಗಳಿಸಿದ್ದರು. ದೇವೇಂದ್ರ ಗಿರಿ ಮೊಮ್ಮಗಳೇ ಈ ಶ್ರೇಯಾ.
‘ಈ ಬಾರಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದೇನೆ. ರಾಷ್ಟ್ರಮಟ್ಟದಲ್ಲಿ ಗೆಲ್ಲುವ ವಿಶ್ವಾಸವಿದೆ. ಹೆತ್ತವರು, ಹಿರಿಯರು, ಶಿಕ್ಷಕರ ಮಾರ್ಗದರ್ಶನವೇ ಸಾಧನೆಗೆ ಕಾರಣ’ ಎಂಬುದು ಈ ಬಾಲೆಯ ಮಾತು.
119 ಶ್ಲೋಕ ಹೇಳುವ ಪೋರಿ: ಎಂ.ಕೆ.ಹುಬ್ಬಳ್ಳಿ ಸಮೀಪದ ಕಾದರವಳ್ಳಿಯ ಗಿರಿನಂದಿತಾ ಬಸಪ್ಪ ನಾಗಲಾಪುರ ಎಂಬ 11 ವರ್ಷದ ಬಾಲಕಿ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್–2025ರಲ್ಲಿ ದಾಖಲಾಗಿದೆ.
ಭಗವದ್ಗೀತೆಯಲ್ಲಿ ಮೊದಲ ಮತ್ತು ಎರಡನೇ ಅಧ್ಯಾಯದಲ್ಲಿ 119 ಶ್ಲೋಕಗಳಿವೆ. ಅವುಗಳನ್ನೆಲ್ಲ ಗಿರಿನಂದಿತಾ ಪಠಿಸುತ್ತಾರೆ. ಯಾವುದೇ ಶ್ಲೋಕದ ನಂಬರ್ ಹೇಳಿದರೆ ಆ ಸ್ಲೋಕ ಹೇಳುತ್ತಾಳೆ. ಭಗವದ್ಗೀತೆಯನ್ನು ಮಕ್ಕಳಿಗೂ ಕಲಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ವಿದ್ಯಾರಂಭ ಗುರಕುಲ ನಡೆಸುವ ಆನ್‌ಲೈನ್ ತರಗತಿಯಲ್ಲೂ ಈಕೆ ಪಾಠ ಮಾಡುತ್ತಾರೆ. ಇದನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಲಾಗಿದೆ.
ಮಾಹಿತಿ: ಪ್ರದೀಪ ಮೇಲಿನಮನಿ, ಚಂದ್ರಶೇಖರ ಎಸ್. ಚಿನಕೇಕರ, ಶಿವಾನಂದ ವಿಭೂತಿಮಠ
ಚಿಕ್ಕೋಡಿ ಪಟ್ಟಣದ ಕೆಎಲ್‍ಇ ಸಂಸ್ಥೆಯ ಸಿಬಿಎಸ್‍ಇ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ನಮೀರಾ ಮೋಮಿನ್ ಅಕ್ಟೋಬರ್‌ನಲ್ಲಿ ದುಬೈನಲ್ಲಿ ಜರುಗಿದ 2025ನೇ ಸಾಲಿನ ಅಂತರರಾಷ್ಟ್ರೀಯ ಅಬ್ಯಾಕಸ್ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ವಿದೇಶದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಮೂಲತಃ ಚನ್ನಮ್ಮನ ಕಿತ್ತೂರಿನವರಾದ ನಮೀರಾ ತಂದೆ ಖುರ್ಷಿದಲಂ ಮೋಮಿನ್ ಪಿಡಿಒ ಆಗಿ ಚಿಕ್ಕೋಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ತಾಯಿ ಅಂಜುಮರಾ ಗೃಹಿಣಿ. ನಮೀರಾ 5ನೇ ತರಗತಿಯಿಂದ ಪಟ್ಟಣದ ಕೆಎಲ್‍ಇ ಸಿಬಿಎಸ್‍ಇ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಶ್ರೀ ಮಾಸ್ಟರ್ ಅಬ್ಯಾಕಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ನಮೀರಾ 2023ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ 3ನೇ ಸ್ಥಾನ 2024ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಅಂತರರಾಜ್ಯ ಅಬ್ಯಾಕಸ್ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ.
ಅಕ್ಟೋಬರ್ 30 ರಂದು ದುಬೈನಲ್ಲಿ ನಡೆದ 2025ನೇ ವರ್ಷದ ಅಂತರರಾಷ್ಟ್ರೀಯ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ವಿಶ್ವದ 20ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. 10 ನಿಮಿಷದಲ್ಲಿ 180 ಅಂಕಗಣಿತದ ಲೆಕ್ಕಗಳನ್ನು ಬಿಡಿಸಿದ ನಮೀರಾ 2ನೇ ಸ್ಥಾನ ಪಡೆದುಕೊಂಡು ಸಾಧನೆ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.