
ಬೆಳಗಾವಿಯ ಸರ್ಕಾರಿ ಚಿಂತಾಮಣರಾವ್ ಪ್ರೌಢಶಾಲೆಯಲ್ಲಿ ಆರಂಭಿಸಿದ ಸ್ಮಾರ್ಟ್ ತರಗತಿಯನ್ನು ಶಾಸಕ ಅಭಯ ಪಾಟೀಲ ಬುಧವಾರ ಪರಿಶೀಲಿಸಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ‘ಇಲ್ಲಿನ ಶಹಾಪುರದಲ್ಲಿರುವ ಚಿಂತಾಮಣರಾವ್ ಪ್ರೌಢಶಾಲೆಯ ಶತಮಾನೋತ್ಸವದ ಸಮಾರೋಪ ಸಮಾರಂಭ ಡಿ.27 ಹಾಗೂ 28ರಂದು ಅದ್ಧೂರಿಯಾಗಿ ನಡೆಯಲಿದೆ. ಇದೇ ವೇಳೆ ಶ್ರಿಮಂತ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಪ್ರತಿಮೆ ಕೂಡ ಲೋಕಾರ್ಪಣೆ ಮಾಡಲಾಗುವುದು’ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.
‘27ರಂದು ಶಾಲೆಯ ಮೈದಾನದಲ್ಲಿ ಸಭೆ ನಡೆಯಲಿದೆ. ನಂತರ ಹಳೆಯ ವಿದ್ಯಾರ್ಥಿಗಳ ಬ್ಯಾಚ್‌ವಾರು ತರಗತಿಗಳು ನಡೆಯಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 28ರಂದು ಬೆಳಿಗ್ಗೆ 10ಕ್ಕೆ ಮಹಾರಾಜರ ಪ್ರತಿಮೆ ಅನಾವರಣ ಮಾಡಿ, ನಂತರ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಅವರು ಶಾಲೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ನಾನು ಕೂಡ ಇದೇ ಶಾಲೆಯ ವಿದ್ಯಾರ್ಥಿ. 1985ರ ಬ್ಯಾಚ್‌ನ ವಿದ್ಯಾರ್ಥಿಗಳ ಒಂದು ವಿಶೇಷ ತರಗತಿ ಕೂಡ ನಡೆಸಲಿದ್ದೇವೆ. ಆಗಿನ ವಿದ್ಯಾರ್ಥಿಗಳು, ಅದೇ ಕೊಠಡಿ, ಅದೇ ಶಿಕ್ಷಕರಿಂದ ಮತ್ತೆ ಅದೇ ಪಾಠ ಕಲಿಯುವಂಥ ವಿಶೇಷ ಕಾರ್ಯಕ್ರಮವಿದು. ಉಳಿದಂತೆ ಬೇರೆ ಬೇರೆ ಬ್ಯಾಚ್‌ನ ವಿದ್ಯಾರ್ಥಿಗಳೊಂದಿಗೂ ಸಂವಾದ– ಸನ್ಮಾನ ನಡೆಯಲಿದೆ. ಈವರೆಗೆ 3,000ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿದ್ದೇವೆ’ ಎಂದರು.
ಶಾಲೆಯ ಇತಿಹಾಸ: ‘ಇತಿಹಾಸದಲ್ಲಿ ಬೆಳಗಾವಿ ನಗರವನ್ನು ಸಾಂಗ್ಲಿಯ ಶ್ರೀಮಂತ ರಾಜಸಾಹೇಬ ಚಿಂತಾಮಣರಾವ್ ಪಟವರ್ಧನ ಹಾಗೂ ರಾಣಿ ಸರಸ್ವತಿ ದೇವಿ ಪಟವರ್ಧನ ಅವರು ಆಳುತ್ತಿದ್ದರು. ತಮ್ಮ ಪ್ರಜೆಗಳಿಗೆ ಶಿಕ್ಷಣ ಕೊಡಬೇಕು ಎಂಬ ಉದ್ದೇಶದಿಂದ ಕ್ರಿ.ಶ 1914ರಲ್ಲಿ ಚಿಂತಾಮಣರಾವ್ ಶಾಲೆಯನ್ನು ಗಂಡುಮಕ್ಕಳಿಗೆ, ಸರಸ್ವತಿ ಶಾಲೆಯನ್ನು ಹೆಣ್ಣುಮಕ್ಕಳಿಗಾಗಿ ಆರಂಭಿಸಿದರು. 1ರಿಂದ 5ನೇ ತರಗತಿ ಹೊಂದಿದ್ದ ಶಾಲೆ, 1920–21ರಲ್ಲಿ ಪ್ರೌಢಶಾಲೆ ಆಗಿ ಅಸ್ತಿತ್ವಕ್ಕೆ ಬಂದಿತು’ ಎಂದು ಅಭಯ ಪಾಟೀಲ ಮಾಹಿತಿ ನೀಡಿದರು.
1945–46ರಲ್ಲಿ ಈ ಸಂಸ್ಥೆಯ ಬೆಳ್ಳಿ ಹಬ್ಬ ಆಚರಿಸಲಾಗಿದೆ. ಅದರ ನೆನಪಿಗಾಗಿ ಸಭಾಭವನ ನಿರ್ಮಿಸಿದ್ದು, ಆಗ ಕಟ್ಟಡಕ್ಕೆ ₹25 ಸಾವಿರ ದೇಣಿಗೆ ನೀಡಿದ ದಾಮೋದರ ರಾಮಣ್ಣ ಅನಗೋಳಕರೆ ಅವರ ಹೆಸರನ್ನೇ ಇಡಲಾಗಿದೆ. 1957ರಲ್ಲಿ ಈ ಶಾಲೆ ಮುಂಬೈ ಸರ್ಕಾರದ ವಶಕ್ಕೆ ಸೇರಿತ್ತು. 8.5.1965ರಂದು ಸಂಸ್ಥೆಯನ್ನು ಆಗಿನ ಮೈಸೂರು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಅಂದಿನಿಂದ ಸರ್ಕಾರಿ ಸಂಸ್ಥೆಯಾಗಿ ಪರಿವರ್ತನೆಗೊಂಡಿದೆ. 1995–96 ರಲ್ಲಿ ಅಮೃತ ಮಹೊತ್ಸವ ಆಚರಿಸಲಾಗಿದೆ. 1973ರಲ್ಲಿ ಪದವಿಪೂರ್ವ ಕಾಲೇಜು ಆಗಿದೆ’ ಎಂದರು.
ಬೆಳಗಾವಿ ನಗರ ಶೈಕ್ಷಣಿಕ ಸಮಿತಿಯ ಪದಾಧಿಕಾರಿಗಳು, ಶಾಲೆ ಸಿಬ್ಬಂದಿ ಇದ್ದರು.
‘ಅಧಿವೇಶನವೋ ಯಲ್ಲಮ್ಮನ ಜಾತ್ರೆಯೋ’
‘ಈ ಬಾರಿ ನಡೆದ ಚಳಿಗಾಲದ ಅಧಿವೇಶನವು ಸದನ ಕಲಾಪವೋ ಯಲ್ಲಮ್ಮನಗುಡ್ಡದ ಜಾತ್ರೆಯೋ ಎಂಬಂತೆ ನಡೆಯಿತು’ ಎಂದು ಅಭಯ ಪಾಟೀಲ ಟೀಕಾಪ್ರಹಾರ ನಡೆಸಿದರು.
‘ಹತ್ತು ದಿನ ಕಲಾಪಗಳಿಗೆ ನಿಗದಿ ಮಾಡಿ ಬಂದರು. ಮೊದಲ ದಿನ ಬರೀ ಶ್ರದ್ಧಾಂಜಲಿ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ಕಾರಣ ಮತ್ತೊಂದು ದಿನ ರದ್ದಾಯಿತು. ಎರಡು ದಿನ ಸರ್ಕಾರಿ ರಜೆ. ಎಲ್ಲವೂ ಸೇರು ಆರು ದಿನ ಮಾತ್ರ ಸದನ ನಡೆಯಿತು. ಈ ಬಾರಿಯೂ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ತೋರಲಿಲ್ಲ. ಇದರಿಂದ ಚಳಿಗಾಲದ ಅಧಿವೇಶನದ ಉದ್ದೇಶವೇ ಈಡೇರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
₹8 ಕೋಟಿಯ ಹೈಟೆಕ್ ಸಭಾಂಗಣ
‘ಚಿಂತಾಮಣರಾವ್ ಸರ್ಕಾರಿ ಪ್ರೌಢಶಾಲೆಗೆ ಅತ್ಯಾಧುನಿಕ ಸೌಕರ್ಯ ಹೊಂದಿದ ಹೈಟೆಕ್ ಸಭಾಂಗಣ ನಿರ್ಮಿಸಲಾಗಿದ್ದು, ಇದಕ್ಕೆ ₹8 ಕೋಟಿ ವೆಚ್ಚ ಮಾಡಲಾಗಿದೆ. ಸ್ಮಾರ್ಟ್‌ಕ್ಲಾಸ್‌ಗಳನ್ನೂ ಸ್ಮಾರ್ಟ್‌ಸಿಟಿ ಯೋಜನೆ ಅಡಿ ನಿರ್ಮಿಸಲಾಗಿದೆ. ಉತ್ತರ ಕರ್ನಾಟಕದಲ್ಲಿಯೇ ಸರ್ಕಾರಿ ಶಾಲೆಗಳಲ್ಲಿ ಎಲ್ಲೂ ಇರದಂಥ ಬೃಹತ್ ಎಲ್‌ಇಡಿ ಪರದೆ ಕೂಡ ಅಳವಡಿಸಲಾಗಿದೆ’ ಎಂದು ಅಭಯ ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.