
ಬೆಳಗಾವಿ: ಇಲ್ಲಿನ ಶಹಾಪುರದ ಸರ್ಕಾರಿ ಚಿಂತಾಮಣರಾವ್ ಪ್ರೌಢಶಾಲೆಯಲ್ಲಿ ಶತಮಾನೋತ್ಸವ ಪ್ರಯುಕ್ತ, ಎರಡನೇ ದಿನವಾದ ಭಾನುವಾರವೂ ವಿವಿಧ ಕಾರ್ಯಕ್ರಮ ನಡೆದವು.
ಶಾಲೆ ಆವರಣದಲ್ಲಿ ಶ್ರೀಮಂತ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು. ಇದರ ಪ್ರಯುಕ್ತ, ಸರಾಫ್ ಗಲ್ಲಿ ಕಾರ್ನರ್‌ನಿಂದ ಶಾಲೆ ಆವರಣದವರೆಗೆ ನಡೆದ ಭವ್ಯ ಶೋಭಾಯಾತ್ರೆ ಗಮನಸೆಳೆಯಿತು.
ಬೆಳಗಾವಿಯಲ್ಲಿ ಭಾನುವಾರ ನಡೆದ ಶೋಭಾಯಾತ್ರೆಯಲ್ಲಿ ಹಳೇ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕದ ಸಂಸದ ಶ್ರೀನಿವಾಸ ಠಾಣೇದಾರ, ‘ನಾನು ಈ ಶಾಲೆ ವಿದ್ಯಾರ್ಥಿಯಾಗಿದ್ದು ಹೆಮ್ಮೆಯ ವಿಷಯ. ಬೆಳಗಾವಿಯಲ್ಲಿ ಕಳೆದ ಬಾಲ್ಯ ಮತ್ತು ಪಡೆದ ಶಿಕ್ಷಣವನ್ನು ಎಂದೂ ಮರೆಯಲಾಗದು’ ಎಂದು ಸ್ಮರಿಸಿದರು.
‘ಬಡತನದ ಕಾರಣಕ್ಕೆ ನಾನು ಡೆಂಟಲ್ ಆಸ್ಪತ್ರೆಯೊಂದರಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿದ್ದೆ. ಕೆಲಸ ಮಾಡುತ್ತಲೇ ಬಿ.ಎಸ್ಸಿ ಪದವಿ ಗಳಿಸಿ, ಸಿಕ್ಕ ಅವಕಾಶ ಬಳಸಿಕೊಂಡು ಅಮೆರಿಕ ಸೇರಿದೆ. ಅಲ್ಲಿ ಎಂ.ಎಸ್ಸಿ, ಪಿಎಚ್.ಡಿ ಮುಗಿದ ನಂತರ, ವ್ಯವಹಾರದಲ್ಲಿ ತೊಡಗಿದೆ. ಸಂಸದನೂ ಆದೆ’ ಎಂದರು.
‘ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಕರಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಬೆಳಗಾವಿಯಲ್ಲಿ ನಿರ್ಮಿಸಿದ ಸುವರ್ಣ ವಿಧಾನಸೌಧ ವರ್ಷವಿಡೀ ಸದ್ಬಳಕೆಯಾಗಬೇಕು. ಬೆಳಗಾವಿ ಇನ್ನಷ್ಟು ಬೆಳವಣಿಗೆ ಹೊಂದಬೇಕು’ ಎಂದು ಆಶಿಸಿದರು.
ಸಂಸದ ಜಗದೀಶ ಶೆಟ್ಟರ್, ‘ಚಿಂತಾಮಣರಾವ್ ಶಾಲೆಯಲ್ಲಿ ಕನ್ನಡ, ಮರಾಠಿ, ಉರ್ದು ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯೊಂದರಲ್ಲಿ ಇಷ್ಟೊಂದು ಸೌಕರ್ಯಗಳಿವೆ ಎಂಬುದೇ ಖುಷಿಯ ವಿಚಾರ’ ಎಂದು ಶ್ಲಾಘಿಸಿದರು.
ಶಾಸಕ ಅಭಯ ಪಾಟೀಲ, ವಿಜಯರಾಜೇ ಪಟವರ್ಧನ, ಮೇಯರ್ ಮಂಗೇಶ ಪವಾರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.