ಚಿಕ್ಕೋಡಿ: ಮತದಾನ ಜಾಗೃತಿಗಾಗಿ ಇಲ್ಲಿನ ಮಿನಿ ವಿಧಾನಸೌಧ ಎದುರು ಅಳವಡಿಸಿದ್ದ ಫಲಕವನ್ನು ಪೌರ ಕಾರ್ಮಿಕರು ಗುರುವಾರ ತೆರವುಗೊಳಿಸಿದರು.
‘ಮತದಾನ ಜಾಗೃತಿ ಫಲಕ ಈಗ ತೆರವುಗೊಳಿಸಿದ್ದೇವೆ. ಡೆಂಗಿ, ಮಲೇರಿಯಾ ಮತ್ತಿತರ ಕಾಯಿಲೆಗಳಿಂದ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಫಲಕವನ್ನು ಅಲ್ಲಿ ಅಳವಡಿಸಲಾಗುವುದು. ಪಟ್ಟಣದ ಯಾವುದೇ ಸ್ಥಳದಲ್ಲಿ ಅಪ್ರಸ್ತುತ ಎನಿಸುವ ಫಲಕಗಳಿದ್ದರೆ ಬದಲಿಸಲಾಗುವುದು’ ಎಂದು ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಲೋಕಸಭೆ ಚುನಾವಣೆಯಲ್ಲಿ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ಫಲಕ ಅಳವಡಿಸಲಾಗಿತ್ತು. ಆದರೆ, ಚುನಾವಣೆ ಮುಗಿದು ಎರಡು ತಿಂಗಳಾದರೂ ಫಲಕ ಬದಲಿಸಿರಲಿಲ್ಲ. ಈ ಕುರಿತು ‘ಪ್ರಜಾವಾಣಿ’ ದಿನಪತ್ರಿಕೆ ಜುಲೈ 18ರ ಸಂಚಿಕೆಯಲ್ಲಿ ‘ಇಲ್ಲಿ ಇನ್ನೂ ಚುನಾವಣೆ ನಡೆಯುತ್ತಿದೆಯೇ’ ಎನ್ನುವ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.