ADVERTISEMENT

ನೆರೆ ಹಾನಿ: ತ್ವರಿತ ಸಮೀಕ್ಷೆಗೆ ಸಿಎಂ ಬೊಮ್ಮಾಯಿ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 13:00 IST
Last Updated 21 ಆಗಸ್ಟ್ 2021, 13:00 IST
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸುವರ್ಣ ವಿಧಾನಸೌಧದಲ್ಲಿ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಸಭೆ
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸುವರ್ಣ ವಿಧಾನಸೌಧದಲ್ಲಿ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಸಭೆ   

ಬೆಳಗಾವಿ: ‘ನೆರೆಯಿಂದ ಉಂಟಾಗಿರುವ ಮನೆ ಹಾಗೂ ಬೆಳೆ ಹಾನಿ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಕೋವಿಡ್ ನಿರ್ವಹಣೆ ಹಾಗೂ ನೆರೆ ಹಾನಿಗೆ ಸಂಬಂಧಿಸಿದಂತೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶನಿವಾರ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಮೀಕ್ಷೆ ಪೂರ್ಣಗೊಂಡರೆ ನಿಖರ ಅಂಕಿ-ಅಂಶಗಳ ಸಮೇತ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು, ಪರಿಹಾರ ಕೋರಲು ಅನುಕೂಲವಾಗುತ್ತದೆ. ವಿಳಂಬವಾದಷ್ಟೂ ಸಮಸ್ಯೆ ಜಟಿಲಗೊಳ್ಳುತ್ತದೆ. ಆದ್ದರಿಂದ ಬೇಗ ಪೂರ್ಣಗೊಳಿಸಿ ಸಂತ್ರಸ್ತರ ಖಾತೆಗೆ‌ ಪರಿಹಾರ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ADVERTISEMENT

ಸಹಾನುಭೂತಿಯಿಂದ ಪರಿಶೀಲನೆ:‘2019ರಲ್ಲಿ ಉಂಟಾಗಿದ್ದ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಪ್ರಸಕ್ತ ಸಾಲಿನ ಪ್ರವಾಹ ಹಾನಿ ಸಮೀಕ್ಷೆ ಮಾಡುವಾಗ ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು. ಪರಿಹಾರದ ಬಾಕಿ ಕಂತುಗಳ ಬಿಡುಗಡೆಗೆ ಕೂಡಲೇ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

‘ಮನೆ ಹಾನಿ ಲಾಗಿನ್ ಅವಧಿ ವಿಸ್ತರಣೆ, ಅಗತ್ಯ ದಾಖಲಾತಿ ಇಲ್ಲದ ಕುಟುಂಬಗಳಿಗೆ ಪರಿಹಾರ ಒದಗಿಸಲು ಇರುವ ಪರ್ಯಾಯ ಮಾರ್ಗಗಳ ಕುರಿತು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು. ಈ ರೀತಿಯ ಕುಟುಂಬಗಳ ಪ್ರತ್ಯೇಕ ಪಟ್ಟಿ ಸಿದ್ಧವಾದ ಬಳಿಕ ಸಂಬಂಧಿಸಿದ ಇಲಾಖೆಗಳ ಸಭೆ ನಡೆಸಿ ಸೂಕ್ತ ನಿರ್ಧಾರ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಗ್ರಾಮಸ್ಥರು ಶಾಶ್ವತ ಸ್ಥಳಾಂತರ‌ ಬಯಸಿದರೆ ಸರ್ಕಾರಿ ಜಮೀನು ಲಭ್ಯವಿದ್ದರೆ ಅವಕಾಶ ಕಲ್ಪಿಸಲಾಗುವುದು. ಇದಲ್ಲದೇ ನವಗ್ರಾಮ ಸೇರಿದಂತೆ ವಿವಿಧ ವಸತಿ ಯೋಜನೆಗಳಲ್ಲಿ ಮನೆಗಳನ್ನು ಒದಗಿಸಲಾಗುವುದು’ ಎಂದರು.

ಹೆಚ್ಚು ಲಸಿಕೆ ಪೂರೈಕೆ:‘ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ ಸಂಪೂರ್ಣ ಗುಣಮುಖರಾಗುವವರೆಗೆ ಅವರ ಮನೆಗಳಿಗೆ ಕೂಡ ಅಗತ್ಯ ಔಷಧಿ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ. ಜಿಲ್ಲೆಗೆ ಪ್ರತಿ ದಿನ 40ಸಾವಿರ ಲಸಿಕೆ ನೀಡುವ ಸಾಮರ್ಥ್ಯ ಇದೆ. ಈಗ ಪ್ರತಿ ದಿನ ನೀಡಲಾಗುತ್ತಿರುವ 25ಸಾವಿರ ಲಸಿಕೆಗಳ (ಡೋಸ್) ಜೊತೆಗೆ ಹೆಚ್ಚುವರಿಯಾಗಿ 15ಸಾವಿರ ಡೋಸ್ ಪೂರೈಸಲಾಗುವುದು. ಈ ನಿಟ್ಟಿನಲ್ಲಿ ಕೂಡಲೇ ಪ್ರಸ್ತಾಪ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಸೂಚಿಸಿದರು.

‘ಹೊಸದಾಗಿ ನೇಮಕಗೊಂಡು ಇದುವರೆಗೆ ಕರ್ತವ್ಯಕ್ಕೆ ಹಾಜರಾಗದ ವೈದ್ಯರಿಗೆ ಕೂಡಲೇ ನೋಟಿಸ್ ನೀಡಬೇಕು. ಆದಾಗ್ಯೂ ಹಾಜರಾಗದಿದ್ದರೆ ನೇಮಕಾತಿ ರದ್ದುಪಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಡಯಾಲಿಸಿಸ್ ಚಿಕಿತ್ಸೆ ದೊರೆಯದಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ಒಂದೆರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ಕೋವಿಡ್ ಪರೀಕ್ಷೆ ಹೆಚ್ಚಿಸಲು ನಿರ್ದೇಶನ:‘ಗಡಿ ಜಿಲ್ಲೆ ಆಗಿರುವುದರಿಂದ ತೀವ್ರ ನಿಗಾ ವಹಿಸಬೇಕು. ಸೋಂಕು ಕಂಡುಬರುವಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು. ಗಡಿ ಭಾಗದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಬೇಕು. ರೈಲು ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಆರಂಭಿಸಬೇಕು. 10–15 ದಿನಗಳಲ್ಲಿ ಎಲ್ಲ 10 ಆಮ್ಲಜನಕ ಘಟಕಗಳು ಸಿದ್ಧಗೊಳ್ಳಬೇಕು’ ಎಂದು ಸೂಚಿಸಿದರು.

‘ಪ್ರತಿ ದಿನ ಐದು ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಒಂದು ಕೋಟಿ ಡೋಸ್‌ ಪೂರೈಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಶೀಘ್ರವೇ ನಾನೂ ದೆಹಲಿಗೆ ತೆರಳಲಿದ್ದೇನೆ. ದೈನಂದಿನ ನೀಡಿಕೆ ಪ್ರಮಾಣ ಆಧರಿಸಿ ಪೂರೈಸಲಾಗುವುದು’ ಎಂದರು.

‘ಕೋವಿಡ್ 3ನೇ ಅಲೆ ನಿರ್ವಹಣೆಗೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಬೇಕು. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸಿ ಪೌಷ್ಟಿಕ ಆಹಾರ ಒದಗಿಸಬೇಕು. ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ತಕ್ಷಣವೇ ಆಸ್ಪತ್ರೆಗಳಿಗೆ ದಾಖಲಿಸಬೇಕು. 20 ದಿನಗಳಲ್ಲಿ ಶಿಬಿರಗಳನ್ನು ಪೂರ್ಣಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.

ಚಿಕ್ಕೋಡಿಯಲ್ಲಿ ಪ್ರಯೋಗಾಲಯ ಉದ್ಘಾಟನೆ:‘ಕೋವಿಡ್ ಅಥವಾ ಅಪೌಷ್ಟಿಕತೆಯಿಂದ ಯಾವುದೇ ಮಗುವಿಗೆ ತೊಂದರೆ ಆಗುವುದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಗುತ್ತಿಗೆ ‌ಆಧಾರದ ಮೇಲೆ ಕಾರ್ಯನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗೆ ಬಾಕಿ ವೇತನ ಪಾವತಿಗೆ ಅಗತ್ಯ ಅನುದಾನ ‌ನೀಡಲಾಗುವುದು. ಜಿಲ್ಲೆಯ ಹೊಸ ತಾಲ್ಲೂಕುಗಳ (ಐದು) ಆಧಾರದ ಮೇರೆಗೆ ಆಸ್ಪತ್ರೆ ಸ್ಥಾಪನೆ ಸೇರಿದಂತೆ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು’ ಎಂದು ತಿಳಿಸಿದರು.

ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಿಸುವ ಜೊತೆಗೆ ತ್ವರಿತವಾಗಿ ತಪಾಸಣಾ ವರದಿ ನೀಡಲು ಅನುಕೂಲ ಆಗುವಂತೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ನೂತನ ಕೋವಿಡ್ (ಆರ್.ಟಿ.ಪಿ.ಸಿ.ಆರ್.) ಪ್ರಯೋಗಾಲಯವನ್ನು ಮುಖ್ಯಮಂತ್ರಿ ಆನ್‌ಲೈನ್ ಮೂಲಕ ಉದ್ಘಾಟಿಸಿದರು. ಗೋಕಾಕದಲ್ಲೂ ಪ್ರಯೋಗಾಲಯ ಸ್ಥಾಪಿಸಬೇಕ ಎಂಬ ಬೇಡಿಕೆ ಇದೆ. ಅದಕ್ಕೆ ಶೀಘ್ರದಲ್ಲೇ ಮಂಜೂರಾತಿ ನೀಡಲಾಗುವುದು’ ಎಂದರು.

ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.