ADVERTISEMENT

ಎಲ್ಲ ಸಮಾಜದವರಿಗೂ ಅನುದಾನ ಕೊಡುತ್ತೇನೆ: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 8:14 IST
Last Updated 14 ಏಪ್ರಿಲ್ 2021, 8:14 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ   

ಬೆಳಗಾವಿ: ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲ ಸಮಾಜಗಳ ಅಭಿವೃದ್ಧಿಗೂ ಅನುದಾನ ನೀಡಿದ್ದೇನೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲೂ ಅದನ್ನು ಮುಂದುವರಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ತಾಲ್ಲೂಕಿನ ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ ಬುಧವಾರ ನಡೆದ ಮುರೆಸಿದ್ಧ ವಿಠ್ಠಪ್ಪ ಹಾಗೂ ಸಂತ ಬಾಳುಮಾಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ದಿವಂಗತ ಸುರೇಶ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಹಲವು ಕೊಡುಗೆ ನೀಡಿದ್ದಾರೆ. ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅವರು ಕೋವಿಡ್ ನಿಂದ ನಿಧನರಾದ್ದರಿಂದಾಗಿ ಉಪ ಚುನಾವಣೆಗೆ ಅವರ ಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಪ್ರಧಾನಿ‌ ನರೇಂದ್ರ ಮೋದಿ ಅವರ ನಿರ್ಧಾರದಂತೆ ಮಂಗಲಾ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಹೇಳಿದರು.

ADVERTISEMENT

ಕುರುಬ ಹಾಗೂ ವೀರಶೈವ ಸಮಾಜದ ನಡುವೆ ನಾನು ತಾರತಮ್ಯ ಮಾಡಿಲ್ಲ. ಕಾಗಿನೆಲೆಯಲ್ಲಿ ಅಭಿವೃದ್ಧಿ ಯೋಜನೆಗೆ ₹45 ಕೋಟಿ ಅನುದಾನ ಖರ್ಚು ಮಾಡಿದ್ದೇನೆ. ಮಂಗಲಾ ಗೆಲ್ಲಿಸಿದರೆ ನಿಮಗೆ ಬೇಕಾದ ಕೆಲಸಗಳನ್ನು ಮಾಡಿಕೊಡುತ್ತಾರೆ. ಈ ಮೂಲಕ ಪ್ರಧಾನಿ ಕೈ ಬಲಪಡಿಸಿದಂತೆಯೂ ಆಗುತ್ತದೆ. ಮತದಾರರೆಲ್ಲರೂ ತಪ್ಪದೆ ಮತ ಚಲಾಯಿಸಬೇಕು. ಮಹಿಳೆಯರು ಮುಖ್ಯವಾಗಿ ಮತಗಟ್ಟೆಗಳಿಗೆ ಬರಬೇಕು ಎಂದು ಕೋರಿದರು.

ಸಚಿವರಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ, ಶ್ರೀಮಂತ ಪಾಟೀಲ, ಅಭ್ಯರ್ಥಿ ಮಂಗಲಾ ಅಂಗಡಿ, ಬಿಜೆಪಿ ಪದಾಧಿಕಾರಿಗಳಾದ ಸಂಜಯ ಪಾಟೀಲ, ಉಜ್ವಲಾ ಬಡವನಾಚೆ ಇದ್ದರು.

ಮುಖ್ಯಮಂತ್ರಿಅರಭಾವಿ, ಗೋಕಾಕ ಕ್ಷೇತ್ರಗಳಲ್ಲಿ ಮತ್ತು ಬೆಳಗಾವಿ ನಗರದಲ್ಲಿ ಪ್ರಚಾರ ಕೈಗೊಳ್ಳುವುದಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಏ. 15ರಂದೂ ಇಲ್ಲಿ ಪ್ರಚಾರ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.