ADVERTISEMENT

ವೀರಾಪುರದಲ್ಲಿ ಸಮಸ್ಯೆಗಳ ಗುಡ್ಡ: ಡಿಸಿಗೆ ಶಿಥಿಲ ಮನೆಗಳ ಸ್ವಾಗತ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 11:52 IST
Last Updated 16 ಅಕ್ಟೋಬರ್ 2021, 11:52 IST
ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸಿಕೊಡುವಂತೆ ಅಲ್ಲಿನ ನಿವಾಸಿ ಚಂದ್ರವ್ವ ತಾಳೆಕರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಕೋರಿದರು
ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸಿಕೊಡುವಂತೆ ಅಲ್ಲಿನ ನಿವಾಸಿ ಚಂದ್ರವ್ವ ತಾಳೆಕರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಕೋರಿದರು   

ಬೆಳಗಾವಿ: ‘ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದ ಅಂಗವಾಗಿ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಶಿಥಿಲಗೊಂಡ ಮನೆಗಳು, ರಸ್ತೆ, ಚರಂಡಿ ಮೊದಲಾದ ಮೂಲಸೌಕರ್ಯಗಳ ಕೊರತೆಗಳು ಸ್ವಾಗತ ಕೋರಿದವು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ನಲ್ಲಿ ತೆರಳಿದ ಅವರನ್ನು ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡರು. ಬಳಿಕ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ‘ಸಮಸ್ಯೆಗಳ ಗುಡ್ಡ’ವೇ ಎದುರಾಯಿತು.

ಒಂದೊಂದು ಬೀದಿಯಲ್ಲಿ ಒಂದೊಂದು ರೀತಿಯ ಸಮಸ್ಯೆಯನ್ನು ಸ್ಥಳೀಯರು ಹೇಳಿಕೊಂಡರು. ಅವುಗಳನ್ನು ಜಿಲ್ಲಾಧಿಕಾರಿ ಸ್ವತಃ ಬರೆದುಕೊಂಡು ಪಟ್ಟಿ ಮಾಡಿಕೊಂಡರು. ಸರ್ಕಾರದ ನಿಯಮಾನುಸಾರ ಬಗೆಹರಿಸಿಕೊಡುವುದಾಗಿ ಭರವಸೆಯನ್ನೂ ನೀಡಿದರು.

ADVERTISEMENT

ಮಳೆಯಿಂದಾಗಿ ಹಾನಿ:ಪರಿಶಿಷ್ಟರ ಕಾಲೊನಿಯಲ್ಲಿ, ಬಹುತೇಕ ಮನೆಗಳು ಮಳೆಯಿಂದಾಗಿ ಶಿಥಿಲಗೊಂಡಿರುವುದು ಕಂಡುಬಂತು. ಚಾವಣಿಗಳು ಹಾಳಾಗಿರುವುದು, ಗೋಡೆಗಳು ಬಹುತೇಕ ಬೀಳುವ ಸ್ಥಿತಿಯಲ್ಲಿರುವುದು ಆತಂಕ ಮೂಡಿಸಿತು. ಮಳೆ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದಿದ್ದರಿಂದಾಗಿ, ಗೋಡೆಗಳಿಗೆ ಹಾನಿ ಉಂಟಾಗಿರುವುದು ಕಂಡುಬಂತು. ಕೆಲವರು ತಾಡಪಾಲುಗಳನ್ನು ಗೋಡೆಗಳ ರೀತಿ ಕಟ್ಟಿಕೊಂಡಿದ್ದರು.

‘ಆಗಾಗ ಮಳೆ ಆಗುತ್ತಿರುತ್ತದೆ. ಶಿಥಿಲಗೊಂಡಿರುವ ಗೋಡೆ ಅಥವಾ ಚಾವಣಿ ಯಾವಾಗ ಬೀಳುತ್ತದೆಯೋ ಎಂಬ ಆತಂಕದಲ್ಲೇ ಜೀವನ ನಡೆಸುತ್ತಿದ್ದೇವೆ. ಪರ್ಯಾಯ ವ್ಯವಸ್ಥೆ ಇಲ್ಲ. ಕೂಡಲೇ ಪರಿಹಾರ ಕೊಡಿಸಿಕೊಡಬೇಕು’ ಎಂದು ನಿವಾಸಿಗಳು ಕೋರಿದರು.

‘ರಸ್ತೆ ನಿರ್ಮಾಣ ಮಾಡಿಲ್ಲ. ಇದರಿಂದ ತೀವ್ರ ತೊಂದರೆಯಾಗಿದೆ. ಮಳೆಗಾಲದಲ್ಲಿ ಕೆಸರಲ್ಲೇ ಓಡಾಡಬೇಕಾದ ಸ್ಥಿತಿ ಇದೆ. ಹಲವು ಬೀದಿಗಳಲ್ಲಿ ವಿದ್ಯುತ್‌ ದೀಪಗಳಿಲ್ಲ. ರಾತ್ರಿ ವೇಳೆ ಸಂಚಾರಕ್ಕೆ ಭಯವಾಗುತ್ತದೆ. ಈ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು. ಮೂಲಸೌಕರ್ಯಗಳನ್ನು ಕಲ್ಪಿಸಿ ಅನುಕೂಲ ಮಾಡಿಕೊಡಬೇಕು’ ಎಂದು ಮನವಿ ಮಾಡಿಕೊಂಡರು. ಬಹುತೇಕ ಬೀದಿಗಳಲ್ಲಿ ಮನೆ–ಮನೆಗಳಿಗೆ ತೆರಳಿ, ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಿದರು.

ಆತಂಕದಲ್ಲೇ ಇದ್ದೇವೆ: ಚನ್ನಪ್ಪ ಗಂಗಪ್ಪ ತಳವಾರ, ರಸ್ತೆ ಸಮಸ್ಯೆ ಪರಿಹರಿಸುವಂತೆ ಕೋರಿದರು. ಪಕ್ಕದ ಮನೆಯ ಕಮಲವ್ವ ತಳವಾರ, ‘ಮನೆಯ ಗೋಡೆ ಕುಸಿದಿದೆ. ರಾತ್ರಿ ನೆಮ್ಮದಿಯ ನಿದ್ರೆ ಸಾಧ್ಯವಾಗುತ್ತಿಲ್ಲ. ಆತಂಕದಲ್ಲೇ ಇರುವಂತಾಗಿದೆ’ ಎಂದು ಅಳಲು ತೋಡಿಕೊಂಡರು. ಇದಕ್ಕೆ‌ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಈ ಬಗ್ಗೆ ಸಮೀಕ್ಷೆ ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಬಸವ್ವ ಶಿವಪ್ಪ ತಳವಾರ ಅವರಿಗೆ ಮನೆಯಲ್ಲೇ ವೃದ್ಧಾಪ್ಯ ವೇತನ ಮಂಜೂರಾತಿ ಪತ್ರ ವಿತರಿಸಿದರು. ನಿಂಗಪ್ಪ ತಳವಾರ ಅವರು ಮನೆ ಕಟ್ಟಿಸಿಕೊಡುವಂತೆ ಕೋರಿದರು.

ಗದಿಗೆಪ್ಪ ತಳವಾರ ಮನೆಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು. ನಲವತ್ತು ವರ್ಷಗಳ ಹಳೆಯ‌ ಮನೆಯ‌ ಗೋಡೆ ಕುಸಿದಿರುವುದನ್ನು ವೀಕ್ಷಿಸಿದರು. ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.

ಪ್ರಯೋಜನವಾಗಬೇಕು:ಚಂದ್ರವ್ವ ತಾಳೇಕರ, ‘ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮವನ್ನು ಮಲಪ್ರಭಾ ನದಿ ತೀರದಿಂದ ಸ್ಥಳಾಂತರಿಸಿದ ಮೂರು ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ರಸ್ತೆ ಮತ್ತು ಗಟಾರ ನಿರ್ಮಿಸಿಕೊಡಬೇಕು. ನೀವು ಬಂದಿದ್ದರಿಂದ ನಮಗೆ ಪ್ರಯೋಜನ ಆಗುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಕೊಡ್ಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಅಶೋಕ ಕೊಳ್ಳಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ತಹಶೀಲ್ದಾರ್‌ ಸೋಮಲಿಂಗಪ್ಪ ಹಾಲಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ‘ನಡೆ’ಯಲ್ಲಿ ಕಂಡಿದ್ದು

* ಕೇದಾರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗ್ರಾಮ ಸಂಚಾರ ಆರಂಭಿಸಿದರು.

* ಊರಿನ ಮಕ್ಕಳು ಸ್ವಾಗತ ನೀಡಿದರು.

* ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ವಾದ್ಯಮೇಳದೊಂದಿಗೆ ಸ್ವಾಗತಿಸಿದರು.

* ಸತ್ಯೆಮ್ಮದೇವಿ ದೇವಸ್ಥಾನಕ್ಕೆ ಹಿರಿಯರೊಂದಿಗೆ ತೆರಳಿ ದರ್ಶನ ಪಡೆದರು.

* ಸರ್ಕಾರಿ ಪ್ರೌಢಶಾಲೆ ಗ್ರಂಥಾಲಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದರು.

* ಅಂಗನವಾಡಿಯಲ್ಲಿ ಮಕ್ಕಳು ಗುಲಾಬಿ ಹೂ ನೀಡಿ ಸ್ವಾಗತಿಸಿದರು.

* ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ, ಹಾಲು ಹಾಗೂ ಮೊಟ್ಟೆ ಕುರಿತು ಮಾಹಿತಿ ಪಡೆದರು.

* ಮಕ್ಕಳಿಗೆ ಸ್ವತಃ ಹಾಲು ವಿತರಿಸಿದರು.

* ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿದರು.

* ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಸಿ ನೆಟ್ಟರು.

* ಗ್ರಾಮ ಪಂಚಾಯ್ತಿಯ ಕಟ್ಟಡ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.