ADVERTISEMENT

ಹಾಸ್ಯ ಲೇಖಕ ಹಾಗೂ ಅನುವಾದಕ ಎಂ.ಸಿ. ಅಂಟಿನ ನಿಧನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 15:53 IST
Last Updated 11 ಅಕ್ಟೋಬರ್ 2020, 15:53 IST
ಎಂ.ಸಿ. ಅಂಟಿನ
ಎಂ.ಸಿ. ಅಂಟಿನ   

ಬೆಳಗಾವಿ: ಹಾಸ್ಯ ಲೇಖಕ ಹಾಗೂ ಅನುವಾದಕ, ಇಲ್ಲಿನ ಮಹಾಂತೇಶ ನಗರ ನಿವಾಸಿ ಎಂ.ಸಿ. ಅಂಟಿನ (85) ಅವರು ಅನಾರೋಗ್ಯದಿಂದ ಭಾನುವಾರ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ವಯೋಸಹಜ ಅನಾರೋಗ್ಯದಿಂದಾಗಿ ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂಜೆ ಸದಾಶಿವನಗರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿತು.

ADVERTISEMENT

ಸವದತ್ತಿ ತಾಲ್ಲೂಕಿನ ಸುತಗಟ್ಟಿಯಲ್ಲಿ ಜನಿಸಿದ ಅವರು, ಆರೋಗ್ಯ ಇಲಾಖೆ ನೌಕರರಾಗಿ ಕಾರ್ಯನಿರ್ವಹಿಸಿ, ಉಪವಿಭಾಗೀಯ ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರಾಗಿದ್ದರು. ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಅವರು, 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕೆಲವು ಮರಾಠಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.

‘ಎಲ್ಲರೂ ಅವರೇ’, ‘ಬಾಳೇಶಿ ಮತ್ತೆ ಬಂದ’ (ನಗೆಬರಹ ಸಂಕಲನಗಳು), ‘ಬಾಳೇಶಿ ಹೋಲ್ಡಲ್‌ ಬಿಚ್ಚಿದಾಗ,’ ‘ಇನ್ನಾರೆ ಶಾಣ್ಯರಾಗೋಣು’ (5 ನಾಟಕಗಳು), ‘ಶಕ್ತಿಗಿಂತ ಯುಕ್ತಿ ಮೇಲು’ (ಮೂರು ಮಕ್ಕಳ ನಾಟಕಗಳು), ‘ಬಂಗಾರದ ಚಮಚೆ ಮತ್ತು ಮುರಿದ ಮನೆ ಒಂದಾಯಿತು’ (2 ಏಕಾಂಕ ನಾಟಕಗಳು), ‘ಆತ್ಮಸಾಕ್ಷಿ’ (ಕಥಾಸಂಕಲನ) ಮತ್ತು ಸೇವಾವಧಿಯ ಅವಿಸ್ಮರಣೀಯ ಘಟನೆಗಳ ಆಯ್ದ ಪ್ರಸಂಗಗಳ ‘ನೆನಪಿನ ಹೂಗೊನೆ’ ಅವರ ಪ್ರಮುಖ ಕೃತಿಗಳು. ‘ಮುದ್ದುಕೊಡು’ ಹಾಸ್ಯ ಲೇಖನಗಳ ಕೃತಿಗೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು 2000ನೇ ಸಾಲಿನ ವರ್ಷದ ಅತ್ಯುತ್ತಮ ಜಿಲ್ಲಾ ಹಾಸ್ಯ ಕೃತಿ ಪ್ರಶಸ್ತಿ ನೀಡಿತ್ತು. 2003ರಲ್ಲಿ ಇಲ್ಲಿ ನಡೆದಿದ್ದ ಗಡಿ ನಾಡ ಉತ್ಸವದಲ್ಲಿ ಸಮಗ್ರ ಸಾಹಿತ್ಯ ಸೇವೆಗಾಗಿ ಅವರನ್ನು ಸರ್ಕಾರದಿಂದ ಸನ್ಮಾನಿಸಲಾಗಿತ್ತು.

ಅವರ ಬದುಕು-ಬರಹ ಮತ್ತು ಸಾಧನೆ ಕುರಿತ ‘ನೇಹದ ನಂಟು’ ಅಭಿನಂದನಾ ಗ್ರಂಥವನ್ನು ಹೋದ ವರ್ಷ ಬಿಡುಗಡೆ ಮಾಡಲಾಗಿತ್ತು. 2017ರಲ್ಲಿ ಬೆಳಗಾವಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವವನ್ನೂ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.