ADVERTISEMENT

ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡಿಸಿವಿರ್ ಹಂಚಿಕೆಗೆ ಸಮಿತಿ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 14:51 IST
Last Updated 28 ಏಪ್ರಿಲ್ 2021, 14:51 IST
ರೆಮ್‌ಡಿಸಿವಿರ್ ಚುಚ್ಚುಮದ್ದು
ರೆಮ್‌ಡಿಸಿವಿರ್ ಚುಚ್ಚುಮದ್ದು   

ಬೆಳಗಾವಿ: ‘ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡಿಸಿವಿರ್ ಸಮರ್ಪಕ ಹಂಚಿಕೆ, ಲಭ್ಯವಿರುವ ಹಾಸಿಗೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ವಿವಿಧ ಸಮಿತಿಗಳನ್ನು ರಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಲಸಿಕಾಕರಣ ಚುರುಕುಗೊಳಿಸಲು ಕ್ರಮ ಕೈಗೊಂಡಿದ್ದು, ಮಾರ್ಗಸೂಚಿ ಪ್ರಕಾರ ಅಕ್ಟೋಬರ್ ವೇಳೆಗೆ ಸಂಪೂರ್ಣ ಲಸಿಕೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.

‘ಬಿಮ್ಸ್ ಆಸ್ಪತ್ರೆಯಲ್ಲಿ ಊಟ, ಚಿಕಿತ್ಸೆ, ಕೋವಿಡ್ ವಾರ್ಡ್ ನಿರ್ವಹಣೆಯನ್ನು ಶಿಷ್ಟಾಚಾರದ ಪ್ರಕಾರ ಸಮರ್ಪಕವಾಗಿ ಪಾಲನೆ ಮಾಡದಿರುವುದು ಪರಿಶೀಲನೆ ನಡೆಸಿದಾಗ‌ ಕಂಡುಬಂದಿತು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ್ ಗಮನಕ್ಕೆ ತಂದರು.

ADVERTISEMENT

ಎಲ್ಲರಿಗೂ ರೆಮಿಡಿಸಿವಿರ್ ಅಗತ್ಯವಿಲ್ಲ:

‘ಬಿಮ್ಸ್‌ನಲ್ಲಿ ಸದ್ಯಕ್ಕೆ 30 ಹಾಸಿಗೆ ಐಸಿಯು ಆರಂಭಿಸಲಾಗಿದ್ದು, ಅಗತ್ಯತೆ ಆಧರಿಸಿ ಸಂಖ್ಯೆಯನ್ನು ಹೆಚ್ಚಿಸಲಾಗುವುದು’ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದರು.

‘ಬಿಮ್ಸ್‌ನಲ್ಲಿ ರೆಮ್‌ಡಿಸಿವಿರ್ 49 ಸ್ಟಾಕ್ ಇದ್ದು, ಇವುಗಳ ಬಳಕೆಗೆ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯ ಅಭಿಪ್ರಾಯದ ಮೇರೆಗೆ ಡೋಸ್ ನೀಡಲಾಗುತ್ತಿದೆ. ಎಲ್ಲ ಸೋಂಕಿತರಿಗೆ ಅದನ್ನು ಕೊಡುವ ಅಗತ್ಯ ಇರುವುದಿಲ್ಲ. ಶ್ವಾಸಕೋಶದ ಸೋಂಕು ತೀವ್ರಗೊಂಡಾಗ ಮಾತ್ರ ನೀಡಲಾಗುವುದು’ ಎಂದರು.

‘822 ಆಕ್ಸಿಜನ್ ಹಾಸಿಗೆಗಳಿವೆ. ಆದರೆ, 350 ಹಾಸಿಗೆಗಳಿಗೆ ಮಾತ್ರ ‌ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಏಕಕಾಲಕ್ಕೆ 822 ಆಕ್ಸಿಜನ್ ನೀಡುವುದರಿಂದ ಆಕ್ಸಿಜನ್ ವೇಗ ಕುಂಠಿತಗೊಳ್ಳುತ್ತದೆ. ಜಿಲ್ಲೆಯಲ್ಲಿ 1,298 ಹಾಸಿಗೆ ಖಾಲಿ ಇವೆ. ಇನ್ನೂ 25 ಖಾಸಗಿ ಆಸ್ಪತ್ರೆಗಳು ಕೂಡ ಮುಂದೆ ಬಂದಿದ್ದು, ಅವುಗಳ ಸೌಲಭ್ಯಗಳನ್ನು ಪರಿಶೀಲಿಸಿ ಶೇ.50ರಷ್ಟು ಹಾಸಿಗೆಗಳನ್ನು ಪಡೆದುಕೊಳ್ಳಲಾಗುವುದು’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು.

‘137 ವೆಂಟಿಲೇಟರ್ ಸೌಲಭ್ಯ ಇದೆ. ಇತರ ಆಸ್ಪತ್ರೆಗಳು ಹಾಸಿಗೆ ಒದಗಿಸಿದರೆ ವೆಂಟಿಲೇಟರ್ ಸೌಲಭ್ಯ ಹೊಂದಿರುವ ಹಾಸಿಗೆಗಳ ಸಂಖ್ಯೆ 300ಕ್ಕಿಂತ ಹೆಚ್ಚಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.