ADVERTISEMENT

ಬಿಜೆಪಿ ಕಾರ್ಯಕರ್ತನಿಗೂ ಸ್ಥಾನಮಾನ: ಸಚಿವ ಜಗದೀಶ ಶೆಟ್ಟರ್

ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 12:03 IST
Last Updated 6 ಏಪ್ರಿಲ್ 2021, 12:03 IST
ಬೆಳಗಾವಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್ ಮತ್ತು ಮುಖಂಡರು ಪಾಲ್ಗೊಂಡರು
ಬೆಳಗಾವಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಸಚಿವ ಜಗದೀಶ ಶೆಟ್ಟರ್ ಮತ್ತು ಮುಖಂಡರು ಪಾಲ್ಗೊಂಡರು   

ಬೆಳಗಾವಿ: ‘ಪಕ್ಷಕ್ಕಿಂತ ರಾಷ್ಟ್ರ ಮೊದಲು ಎಂಬ ವಿಚಾರದೊಂದಿಗೆ, ಜನರ ಸೇವೆಗಾಗಿ ಹುಟ್ಟಿಕೊಂಡಿರುವ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿನ ಸದಾಶಿವನಗರದಲ್ಲಿ ಬಿಜೆಪಿ ಚುನಾವಣಾ ಕಾರ್ಯಾಲಯದ ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಮಂಗಳವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ತುಷ್ಟೀಕರಣದ ನೀತಿ ದೇಶದ ರಕ್ಷಣೆಯಲ್ಲಿ ವಿಫಲ ಆಗಿರುವುದನ್ನು ಕಂಡು ದೇಶ ಭಕ್ತರು ಕೂಡಿ ಜನ ಸಂಘ ಸ್ಥಾಪಿಸಿದರು. ದೇಶದ ಆಡಳಿತದಲ್ಲಿ ಕಪ್ಪು ಚುಕ್ಕೆಯಾದ ತುರ್ತು ಪರಿಸ್ಥಿತಿಯ ನಂತರ ಜನಸಂಘ, ಸ್ವತಂತ್ರ ಪಕ್ಷಗಳು ಒಟ್ಟಾರೆ ಸೇರಿ ಕಾಂಗ್ರೆಸ್‌ ದುರಾಡಳಿತ ಕೊನೆಗಾಣಿಸಲು ಭಾರತೀಯ ಜನತಾ ಪಕ್ಷ ಸ್ಥಾಪಿಸಿದರು. ಆದರೆ, ಕೆಲವು ರಾಜಕೀಯ ಪಕ್ಷಗಳು ಅಸಹಕಾರ ತೋರಿದ್ದರಿಂದ 1980ರ ಏ.6ರಂದು ಮುಂಬೈನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಬಿಜೆಪಿ ಸ್ಥಾಪನೆಯಾಯಿತು’ ಎಂದು ನೆನೆದರು.

ADVERTISEMENT

‘ತತ್ವ–ಸಿದ್ಧಾಂತದ ಆಧಾರದ ಮೇಲೆ ಸ್ಥಾಪನೆಯಾದ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಕೂಡ ರಾಷ್ಟ್ರೀಯ, ರಾಜ್ಯ, ಜಿಲ್ಲೆ, ಮಂಡಲ, ಬೂತ್‌ ಮಟ್ಟದಲ್ಲಿ ಪದಾಧಿಕಾರಿ ಆಗುವುದಕ್ಕೆ ಅವಕಾಶವಿದೆ. ಪ್ರಮಾಣಿಕರ ಶ್ರಮ ಗುರುತಿಸಿ ಅವರಿಗೆ ಸ್ಥಾನಮಾನ ಕೊಡುವ ಏಕೈಕ ಪಕ್ಷವಾಗಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ಇದರಿಂದಾಗಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ‘18 ಕೋಟಿ ಕಾರ್ಯಕರ್ತರನ್ನು ಹೊಂದಿರುವ ಅತಿ ದೊಡ್ಡ ಪಕ್ಷ ನಮ್ಮದು. ಕೇವಲ ಎರಡು ಸ್ಥಾನದಿಂದ ಇಂದು 303 ಸಂಸದರನ್ನು ಹೊಂದಿದೆ. ಸರ್ವವ್ಯಾಪಿ ಸರ್ವಸ್ಪರ್ಶಿಯಾಗಿ ಬೆಳೆದಿದೆ’ ಎಂದು ತಿಳಿಸಿದರು.

ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಶಾಸಕ ಅನಿಲ ಬೆನಕೆ, ರಾಜ್ಯ ಘಟಕದ ಕಾರ್ಯದರ್ಶಿ ಉಜ್ವಲಾ ಬಡವನಾಚೆ, ಮುಖಂಡರಾದ ಅರವಿಂದ ರೆಡ್ಡಿ, ಪ್ರಕಾಶ ಅಕ್ಕಲಕೋಟ, ಮಹೇಶ ಮೋಹಿತೆ, ಸುಭಾಷ ಪಾಟೀಲ, ಸಂದೀಪ ದೇಶಪಾಂಡೆ, ಮುರುಗೇಂದ್ರ ಗೌಡ ಪಾಟೀಲ, ಮಹಾನಗರ ಜಿಲ್ಲಾ ಘಟಕದ ವಕ್ತಾರ ಹನುಮಂತ ಬಂಗಾಲಿ, ಮಾಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡ ಇದ್ದರು.

ದಾದಾಗೌಡ ಬಿರಾದಾರ ಸ್ವಾಗತಿಸಿದರು. ಮುರುಗನಗೌಡ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.